ವಿಶ್ವಸಂಸ್ಥೆ: ಗಾಜಾದ ಫೋಟೋ ತೋರಿಸುತ್ತಾ ಕಾಶ್ಮೀರದ್ದೆಂದು ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಪಾಕಿಸ್ಥಾನವನ್ನು ಭಾರತವು ವಿಶ್ವ ಸಮುದಾಯದ ಮುಂದೆಯೇ ತಲೆತಗ್ಗಿಸುವಂತೆ ಮಾಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನದ ನಕಲಿ ಫೋಟೋಗೆ ಕಾಶ್ಮೀರದ ಅಸಲಿ ಫೋಟೋದ ಮೂಲಕವೇ ಭಾರತ ತಿರುಗೇಟು ನೀಡಿದೆ.
ಮೇ ತಿಂಗಳಲ್ಲಿ ಕಣಿವೆ ರಾಜ್ಯದಲ್ಲಿ ಉಗ್ರರು ಮದುವೆ ಕಾರ್ಯಕ್ರಮವೊಂದರಿಂದ ಸೇನಾ ಅಧಿಕಾರಿ ಉಮರ್ ಫಯಾಝ್ರನ್ನು ಎಳೆದುಕೊಂಡು ಹೋಗಿ ಹತ್ಯೆಗೈದ ಘಟನೆಯ ಫೋಟೋವನ್ನು ವಿಶ್ವಸಂಸ್ಥೆಯಲ್ಲಿ ತೋರಿಸಿದ ಭಾರತದ ರಾಜತಾಂತ್ರಿಕ ಅಧಿಕಾರಿ ಪೌಲೋಮಿ ತ್ರಿಪಾಠಿ ಅವರು, ಪಾಕಿಸ್ಥಾನದ ಮಾನವನ್ನು ಹರಾಜಿಗಿಟ್ಟರು. “ಪಾಕ್ ಪ್ರಾಯೋಜಿತ ಭಯೋತ್ಪಾದಕರು ನಡೆಸಿರುವ ಅಮಾನ ವೀಯ ಕೃತ್ಯವನ್ನು ನೋಡಿ. ಈ ಸತ್ಯವನ್ನು ಪಾಕಿಸ್ಥಾನವು ನಕಲಿ ಫೋಟೋ ತೋರಿಸುವ ಮೂಲಕ ಮರೆಮಾಚಲು ಯತ್ನಿಸು ತ್ತಿದೆ,’ ಎಂದು ಹೇಳಿದರು ತ್ರಿಪಾಠಿ. ಈ ಮೂಲಕ ತಾನೇ ತೋಡಿದ ಗುಂಡಿಗೆ ತಾನೇ ಬಿದ್ದಂತಾಯ್ತು ಪಾಕ್ ಪರಿಸ್ಥಿತಿ.
ಅಫ್ಘನ್- ಪಾಕ್ ಜಟಾಪಟಿ: ಇನ್ನು, ಭಾರತದ ಬಳಿಕ ಅಫ್ಘಾನಿಸ್ಥಾನ ಕೂಡ ಪಾಕಿಸ್ಥಾನದ ವಿರುದ್ಧದ ಕೋರಸ್‌ನಲ್ಲಿ ಭಾಗಿಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕರೆದಿದ್ದ ಸಭೆಯಲ್ಲಿ ಪಾಕ್ ಮತ್ತು ಅ
ಫ^ನ್‌ನ ರಾಯಭಾರಿಗಳು ಭಯೋತ್ಪಾದನೆಗೆ ಸಂಬಂಧಿಸಿ ಪರಸ್ಪರ ವಾಗ್ಯುದ್ಧ ನಡೆಸಿಕೊಂಡಿದ್ದು ಕಂಡಬಂತು. ಪಾಕಿಸ್ಥಾನವು ಎಷ್ಟೋ ದಶಕಗಳಿಂದಲೂ ಗಡಿಯಾಚೆಗೆ ಉಗ್ರವಾದವನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸಿದ ಅಪ^ನ್ ವಿದೇಶಾಂಗ ಸಚಿವ ಸಲಾಹುದ್ದೀನ್ ರಬ್ಟಾನಿ, ಪಾಕಿಸ್ಥಾನವು ನಕಲಿ ಫೋಟೋ ತೋರಿಸಿ ಮುಜುಗರಕ್ಕೀಡಾದ ಬಗ್ಗೆಯೂ ಪ್ರಸ್ತಾವಿಸಿದರು. ಪಾಕಿಸ್ಥಾನವು ಉಗ್ರರಿಗೆ ಬೆಂಬಲ ನೀಡುವ ಮೂಲಕ ಎಲ್ಲರ ವಿಶ್ವಾಸ ಕಳೆದುಕೊಂಡಿದೆ. ಅಫ್ಘನ್‌ನಲ್ಲಿ ಅಸ್ಥಿರತೆ ಉಂಟಾಗಲೂ ಪಾಕಿಸ್ಥಾನವೇ ಕಾರಣ ಎಂದೂ ಆರೋಪಿಸಿದರು. ಇದರಿಂದ ಸಿಟ್ಟಿಗೆದ್ದ ಪಾಕ್ ರಾಯಭಾರಿ ಮಲೀಹಾ ಲೋಧಿ, “ಅಫ್ಘನ್‌ನ ಅಸ್ಥಿರತೆಗೆ ಅಲ್ಲಿನ ಆಂತರಿಕ ಸಮಸ್ಯೆ ಕಾರಣವೇ ಹೊರತು ಬೇರಾರೂ ಅಲ್ಲ’ ಎಂದರು.
ಸುಷ್ಮಾರದ್ದು “ಅಹಂಕಾರ’ದ ಮಾತು ಎಂದ ಚೀನ: ಪಾಕಿಸ್ಥಾ ನವು ಉಗ್ರರನ್ನು ಪೋಷಿಸುತ್ತಿರುವುದು ಗೊತ್ತಿದ್ದರೂ, ಚೀನ ತನ್ನ ಸ್ನೇಹಿತನ ಬೆನ್ನಿಗೆ ನಿಂತು ಮಾತನಾಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಡಿರುವ ಮಾತುಗಳು ಅಂಧಾಭಿಮಾನ ಹಾಗೂ ಅಹಂಕಾರದಿಂದ ಕೂಡಿದೆ ಎಂದು ಚೀನದ ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ಹೇಳಿದೆ. ವಿಶೇಷವೆಂದರೆ, ಭಾರತವನ್ನು ಹಳಿಯುವ ನಡುವೆಯೂ ಪಾಕ್‌ನಲ್ಲಿ ಉಗ್ರವಾದವಿದೆ ಎಂದು ಒಪ್ಪಿ ಕೊಳ್ಳುವ ಮೂಲಕ ಚೀನ ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ಮಾತನಾಡಿದೆ.
“ಪಾಕಿಸ್ಥಾನದಲ್ಲಿ ಭಯೋತ್ಪಾದನೆ ಇರುವುದು ನಿಜ. ಆದರೆ, ಭಯೋತ್ಪಾದಕರನ್ನು ಬೆಂಬಲಿಸುವುದು ಆ ದೇಶದ ರಾಷ್ಟ್ರೀಯ ನೀತಿಯೇನೂ ಅಲ್ಲವಲ್ಲ? ಉಗ್ರವಾದವನ್ನು ರಫ್ತು ಮಾಡಿ ಪಾಕಿಸ್ಥಾನ ಪಡೆಯುವುದಾದರೂ ಏನನ್ನು? ಹಣವನ್ನೋ ಅಥವಾ ಘನತೆಯನ್ನೋ’ ಎಂದು ಚೀನ ಪ್ರಶ್ನಿಸಿದೆ. ಜತೆಗೆ, ಭಾರತವು ನಿಜಕ್ಕೂ ಬುದ್ಧಿವಂತ ರಾಷ್ಟ್ರವಾಗಿದ್ದರೆ, ಅದು ಚೀನದೊಂದಿಗೆ ಸ್ನೇಹ ಹಸ್ತ ಚಾಚುತ್ತಿತ್ತು ಮತ್ತು ಪಾಕಿಸ್ಥಾನವನ್ನು ಗೌರವಿಸುತ್ತಿತ್ತು ಎಂದೂ ಗ್ಲೋಬಲ್ ಟೈಮ್ಸ್ ವರದಿ ಹೇಳಿದೆ.
ಬಯಲಾಯ್ತು ಪಾಕ್‌ನ “ಉಗ್ರ’ ಬಣ್ಣ
ನಮಗೂ ಉಗ್ರರಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಷಣ ಬಿಗಿಯುವ ಪಾಕಿಸ್ಥಾನದ ನಿಜ ಬಣ್ಣ ಅಲ್ಲಿನ ಅಧಿಕಾರಿಯಿಂದಲೇ ಬಯಲಾಗಿದೆ. “ಗುಪ್ತಚರ ಸಂಸ್ಥೆಯಾದ ಐಎಸ್‌ಐ ಉಗ್ರರನ್ನು ರಕ್ಷಿಸುತ್ತಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕು’ ಎಂದು ಕೋರಿ ಗುಪ್ತಚರ ಅಧಿಕಾರಿಯೊಬ್ಬರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಗುಪ್ತಚರ ಬ್ಯೂರೋ(ಐಬಿ)ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಲಿಕ್ ಮುಖಾ¤ರ್ ಅಹ್ಮದ್ ಶಹಜಾದ್ ಅವರೇ ಕೋರ್ಟ್ ಮೆಟ್ಟಿಲೇರಿದವರು. ತಮ್ಮ ಹಿರಿಯ ಅಧಿಕಾರಿಗಳು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳೇ ಉಗ್ರರೊಂದಿಗೆ ನಂಟು ಹೊಂದಿದ್ದಾರೆ. ಹೀಗಾಗಿ, ಕೋರ್ಟ್ ಮಧ್ಯಪ್ರವೇಶಿಸಿ ಈ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.