ಮುಂಬಯಿ: ಆ್ಯನ್ರಿಚ್ ನೋರ್ಜೆ ಆಗಮನದಿಂದ ಡೆಲ್ಲಿಯ ಬೌಲಿಂಗ್ ಬಲಿಷ್ಠ ಹಾಗೂ ಘಾತಕಗೊಳ್ಳಲಿದೆ ಎಂಬ ನಿರೀಕ್ಷೆ ಲಕ್ನೋ ಎದುರಿನ ಪಂದ್ಯದಲ್ಲಿ ಹುಸಿಯಾಗಿದೆ. ಅವರು 2.2 ಓವರ್‌ಗಳಲ್ಲಿ 35 ರನ್ ನೀಡಿ ದುಬಾರಿಯಾದರು.
ಈ ನಡುವೆ ನೋರ್ಜೆ ಅವರನ್ನು 3ನೇ ಓವರ್ ನಡುವೆಯೇ ಬೌಲಿಂಗ್‌ನಿಂದ ಹಿಂದೆ ಸರಿಸಿದ ವಿದ್ಯಮಾನವೊಂದು ಈ ಪಂದ್ಯದ ವೇಳೆ ಸಂಭವಿಸಿತು. ಇದಕ್ಕೇನು ಕಾರಣ ಎಂಬುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ.
ನೋರ್ಜೆ ಡೆಲ್ಲಿ ಇನ್ನಿಂಗ್ಸ್‌ನ 16ನೇ ಹಾಗೂ ತಮ್ಮ 3ನೇ ಓವರ್ ಎಸೆಯಲು ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಆಗ ದೀಪಕ್ ಹೂಡಾ ಸ್ಟ್ರೈಕಿಂಗ್ ತುದಿಯಲ್ಲಿದ್ದರು. ನೋರ್ಜೆ ಅವರ ದ್ವಿತೀಯ ಎಸೆತ ಬೀಮರ್ ಆಗಿತ್ತು (ಹೈ ಫುಲ್ ಟಾಸ್). ಇದನ್ನು ಅಂಪಾಯರ್ ನೋಬಾಲ್ ಎಂದು ಘೋಷಿಸಿದರು.
ಇದನ್ನೂ ಓದಿ:ಕೊರಿಯ ಓಪನ್ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಸೆಮಿಫೈನಲಿಗೆ
ಅಷ್ಟೇ ಅಲ್ಲ, ಅವರಿಗೆ ಬೌಲಿಂಗ್ ಮುಂದುವರಿಸಲು ಅವಕಾಶ ನೀಡಲಿಲ್ಲ. ಕಾರಣ, ಇದಕ್ಕೂ ಮೊದಲು ನೋರ್ಜೆ ಬೀಮರ್ ಒಂದನ್ನು ಎಸೆದಿದ್ದರು. ಕ್ರಿಕೆಟ್ ನಿಯಮದಂತೆ, ಪಂದ್ಯದಲ್ಲಿ ಬೌಲರ್ ಓರ್ವ 2 ಬೀಮರ್ ಎಸೆಯುವಂತಿಲ್ಲ. ಆಗ ಆ ಬೌಲರ್ ಬೌಲಿಂಗ್ ಮುಂದುವರಿಸುವಂತಿಲ್ಲ.
ನೋರ್ಜೆ ಅರ್ಧದಲ್ಲಿ ಬಿಟ್ಟ ಓವರನ್ನು ಕುಲದೀಪ್ ಯಾದವ್ ಪೂರ್ತಿಗೊಳಿಸಿದರು. ಇವರಿಗೆ ಕ್ವಿಂಟನ್ ಡಿ ಕಾಕ್ ಸತತ 2 ಬೌಂಡರಿಗಳ ಬಿಸಿ ಮುಟ್ಟಿಸಿದರು. ಆದರೆ ಅಂತಿಮ ಎಸೆತದಲ್ಲಿ ಕುಲದೀಪ್ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸ್ಟ್ರೈಕ್ ಬೌಲರ್ ನೋರ್ಜೆ ಅವರಿಗೆ ಬೌಲಿಂಗ್ ಆರಂಭಿಸಲು ಅವಕಾಶ ನೀಡದ ಬಗ್ಗೆಯೂ ಟೀಕೆಗಳು ಕೇಳಿಬಂದಿವೆ. ಅವರನ್ನು 2ನೇ ಬೌಲಿಂಗ್ ಬದಲಾವಣೆಯ ರೂಪದಲ್ಲಿ ದಾಳಿಗೆ ಇಳಿಸಲಾಗಿತ್ತು.