Advertisement

ಕಲುಷಿತ ನೀರು ಸೇವಿಸಿ ಮತ್ತೂಬ್ಬ ಮಹಿಳೆ ಸಾವು

08:22 PM Feb 16, 2023 | Team Udayavani |

ಗುರುಮಠಕಲ್‌: ತಾಲೂಕಿನ ಅನಪೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಮಹಿಳೆ ಮೃತಪಟ್ಟಿದ್ದು, ಒಟ್ಟು ಮೂವರು ಸಾವಿಗೀಡಾದರು.

Advertisement

ಬುಧವಾರ ತಡರಾತ್ರಿ ನರಸಮ್ಮ (71) ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ರಾತ್ರಿ ಸಾವಿತ್ರಮ್ಮ (25) ಹಾಗೂ ಬುಧವಾರ ಬೆಳಗ್ಗೆ ಸಾಯಮ್ಮ(72) ಮೃತಪಟ್ಟಿದ್ದರು. ಮೂರು  ದಿನಗಳಿಂದ ಅನಪೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 60ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲಾಗಿದ್ದರು.

ವಾಂತಿ ಬೇಧಿಯಿಂದ ಬಳಲುತ್ತಿದ್ದವರು ಮಂಗಳವಾರ ತಡ ರಾತ್ರಿ ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ 25 ಮಂದಿ ಅಸ್ವಸ್ಥರಾಗಿದ್ದು, ಇವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಸದನದಲ್ಲಿ ಪ್ರಸ್ತಾವ :

ಮೂವರ ಸಾವಿನ ಪ್ರಕರಣ ಸದನದಲ್ಲೂ ಪ್ರತಿಧ್ವನಿಸಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತನಿಖೆಗೆ ಆಗ್ರಹಿಸಿವೆ. ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ನಾಗನಗೌಡ ಕುಂದಕೂರ್‌ ವಿಷಯ ಪ್ರಸ್ತಾವಿಸಿ, ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದಾರೆ. ತತ್‌ಕ್ಷಣ ಈ ಬಗ್ಗೆ ತನಿಖೆ ನಡೆಸಿ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

Advertisement

ಇದಕ್ಕೆ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಯು.ಟಿ.ಖಾದರ್‌, ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಧ್ವನಿಗೂಡಿಸಿದರು. ಪ್ರಕರಣದಲ್ಲಿ ಅಸ್ವಸ್ಥಗೊಂಡಿರುವವರು ತೆಲಂಗಾಣದಲ್ಲಿ  ಚಿಕಿತ್ಸೆ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಆ ಭಾಗದಲ್ಲಿ ಉತ್ತಮ ಆಸ್ಪತ್ರೆ ವ್ಯವಸ್ಥೆ ಇಲ್ಲ. ಇದು ಡಬಲ್‌ ಎಂಜಿನ್‌ ಸರಕಾರದ ಸಾಧನೆ ಎಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯ ಸಚಿವರ ಪರವಾಗಿ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಕರಣದ ಮಾಹಿತಿ ತರಿಸಿಕೊಂಡು ಅಧಿಕಾರಿಗಳ ವೈಫ‌ಲ್ಯ ಇದ್ದರೆ ಕ್ರಮ ಕೈಗೊಳ್ಳಲಾಗುವುದು. ಪರಿಹಾರದ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಹೇಳಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕು, ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next