Advertisement

ಜೆಡಿಎಸ್‌ನಿಂದ ಕಳಚಲಿದೆ ಇನ್ನೊಂದು ವಿಕೆಟ್‌?

11:11 PM Aug 13, 2019 | Lakshmi GovindaRaj |

ಬೆಂಗಳೂರು: ಹಿರಿಯ ರಾಜಕಾರಣಿ ಎಚ್‌.ವಿಶ್ವನಾಥ್‌ ನಂತರ ಜೆಡಿಎಸ್‌ನ ಮೈಸೂರು ಭಾಗದ ಮತ್ತೊಬ್ಬ ಪ್ರಭಾವಿ ಮುಖಂಡ ಜಿ.ಟಿ.ದೇವೇಗೌಡರ ಸೆಳೆಯಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ನೆಲೆ ಕಲ್ಪಿಸಲು ಬಿ.ಎಸ್‌.ಯಡಿಯೂರಪ್ಪ ರೂಪಿಸಿರುವ ಕಾರ್ಯತಂತ್ರವಿದು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

Advertisement

ಎಚ್‌.ವಿಶ್ವನಾಥ್‌, ಜಿ.ಟಿ.ದೇವೇಗೌಡ, ವಿ.ಶ್ರೀನಿವಾಸಪ್ರಸಾದ್‌ ಅವರ ಬೆಂಬಲ ಇದ್ದರೆ ಮೈಸೂರು-ಚಾಮರಾಜನಗರ -ಮಂಡ್ಯ ಭಾಗದ ಕ್ಷೇತ್ರವೊಂದರಿಂದ ಪುತ್ರ ವಿಜಯೇಂದ್ರ ಅವರನ್ನು ವಿಧಾನಸಭೆ ಚುನಾವಣೆಗೆ ನಿಲ್ಲಿಸಿ ಆಯ್ಕೆ ಮಾಡುವುದು, ಆ ಭಾಗದ ನಾಯಕತ್ವ ವಹಿಸುವುದು ಯಡಿಯೂರಪ್ಪ ಅವರ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಜೆಡಿಎಸ್‌ ಸಹ ಬಿಜೆಪಿಯು ತಮ್ಮ ಪಕ್ಷದ ಸದಸ್ಯರನ್ನು ಸೆಳೆಯುತ್ತಿರುವ ಮಾಹಿತಿ ಪಡೆದಿದ್ದು, ಅಲ್ಲಿ ಪರ್ಯಾಯ ನಾಯಕರನ್ನು ಹುಡುಕಿ ಚುನಾವಣೆ ನಡೆದರೆ ತಿರುಗೇಟು ನೀಡಲು ಸಜ್ಜಾಗುತ್ತಿದೆ.

ಈ ಕಾರ್ಯತಂತ್ರದ ಭಾಗವಾಗಿ ಜಿ.ಟಿ.ದೇವೇಗೌಡರನ್ನು ಬಿಜೆಪಿಯತ್ತ ಸೆಳೆಯುವ ಯತ್ನ ನಡೆದಿದೆ. ಜಿ.ಟಿ.ದೇವೇಗೌಡರು ಬಿಜೆಪಿಯ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಈಗಾಗಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿರುವ ಜಿ.ಟಿ.ದೇವೇಗೌಡರು ತಾವು ಹಿಂದೆ ಸರಿದು ಪುತ್ರ ಹರೀಶ್‌ಗೌಡ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.

ಎಚ್‌.ವಿಶ್ವನಾಥ್‌ ಮಧ್ಯಸ್ಥಿಕೆಯಲ್ಲೇ ಇಂತದ್ದೊಂದು ಮಾತುಕತೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎರಡು ದಿನಗಳ ಹಿಂದೆ ಮೈಸೂರು ಹಾಲು ಒಕ್ಕೂಟದ ಚುನಾವಣೆ ನೆಪದಲ್ಲಿ ಎಚ್‌.ವಿಶ್ವನಾಥ್‌, ಎಸ್‌.ಟಿ.ಸೋಮಶೇಖರ್‌ ಸಮ್ಮುಖದಲ್ಲೇ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆವರನ್ನು ಭೇಟಿ ಮಾಡಿದಾಗ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮತ್ತೆ ಆಪರೇಷನ್‌?: ಕಾಂಗ್ರೆಸ್‌ನ 12 ಹಾಗೂ ಜೆಡಿಎಸ್‌ ಇನ್ನೂ ಐವರು ಶಾಸಕರು ಬಿಜೆಪಿಗೆ ಬರಲು ಸಿದ್ಧವಾಗಿದ್ದಾರೆ. ಆದರೆ, ಬಿಜೆಪಿ ನಾಯಕರೇ ತಡೆಯುತ್ತಿದ್ದಾರೆ. ಈಗಾಗಲೇ ಓರ್ವ ಪಕ್ಷೇತರ ಹಾಗೂ 17 ಶಾಸಕರನ್ನು ಸೆಳೆದಿದ್ದು ಅವರಿಗೆ ಅಧಿಕಾರ ನೀಡುವುದು ಸವಾಲಾಗಿದೆ. ಬಿಜೆಪಿಯಲ್ಲೂ 105 ಶಾಸಕರಿದ್ದು ಅವರಿಗೂ ಅಸಮಾಧಾನ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ, ಎಲ್ಲರನ್ನೂ ಸೇರಿಸಿಕೊಳ್ಳುವುದಕ್ಕಿಂತ ತಮಗೆ ರಾಜಕೀಯವಾಗಿ ಅನುಕೂಲವಾಗುವವರನ್ನು ಮಾತ್ರ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಉಪ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹುಣಸೂರಿನ ಎಚ್‌.ವಿಶ್ವನಾಥ್‌ , ಕೆ.ಆರ್‌. ಪೇಟೆಯ ನಾರಾಯಣಗೌಡ ಇಬ್ಬರೂ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಜಿ.ಟಿ.ದೇವೇಗೌಡರು ಒಂದೊಮ್ಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾ ದರೂ ಅವರೂ ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ. ಪುತ್ರನಿಗೆ ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟುಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆ, ಮೈಸೂರು-ಚಾಮ ರಾಜನಗರ ಭಾಗದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಭದ್ರಕೋಟೆ ಒಡೆದು ಶಕ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಆ ಭಾಗದ ಪ್ರಮುಖ ಸಮು ದಾಯದ ನಾಯಕರನ್ನು ಸೆಳೆದು ಚುನಾವಣೆಗೆ ತಮ್ಮದೇ ಅಭ್ಯರ್ಥಿಗಳನ್ನು ನಿಲ್ಲಿಸುವ ಕಾರ್ಯತಂತ್ರದಲ್ಲಿ ತೊಡಗಿದೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next