Advertisement

ಬೆಂಗಳೂರಿಂದ ಕರಾವಳಿಗೆ ಮತ್ತೊಂದು ರೈಲು

11:39 PM Feb 11, 2020 | Lakshmi GovindaRaj |

ಕುಂದಾಪುರ/ ಉಡುಪಿ: ಬೆಂಗಳೂರಿನಿಂದ ಕರಾವಳಿಯತ್ತ ಬರುವ ಜನರ ಅನುಕೂಲಕ್ಕಾಗಿ ಬೆಂಗಳೂರು - ಕಾರವಾರ- ವಾಸ್ಕೋ ಹೊಸ ವಿಶೇಷ ರೈಲನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಘೋಷಿಸಿದ್ದಾರೆ. ಈ ಹೊಸ ರೈಲಿನ ವೇಳಾಪಟ್ಟಿ ಮತ್ತು ಇನ್ನಿತರ ತಾಂತ್ರಿಕ ಗೊಂದಲ ಈಗಾಗಲೇ ನಿವಾರಣೆಯಾಗಿದ್ದು, ಸಂಚಾರ ಆರಂಭಕ್ಕೆ ಸಚಿವರಿಂದ ಹಸಿರು ನಿಶಾನೆಯಷ್ಟೇ ಬಾಕಿ ಇದೆ.

Advertisement

ಕರಾವಳಿಯ ಅದರಲ್ಲೂ ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಜನರ ಅನುಕೂಲಕ್ಕಾಗಿ ಉತ್ತಮ ವೇಳಾಪಟ್ಟಿಯ ಹೊಸ ರೈಲಿಗಾಗಿ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಈ ಹಿಂದೆ ಬೇಡಿಕೆ ಸಲ್ಲಿಸಿತ್ತು. ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ಮಂಗಳೂರಿನ ಪಡೀಲ್‌ ಮಾರ್ಗವಾಗಿ ಬೆಂಗಳೂರಿನಿಂದ ಗೋವಾದ ವಾಸ್ಕೋಗೆ ಸಂಚರಿಸಲಿರುವ ಹೊಸ ರೈಲನ್ನು ಕೊಡುಗೆಯಾಗಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸಭೆ: ರೈಲಿನ ಘೋಷಣೆಯಾದರೂ ವೇಳಾಪಟ್ಟಿ ಬಗ್ಗೆ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿ ದ್ದರಿಂದ ನೈಋತ್ಯ ರೈಲ್ವೇ ವಲಯದ ಮುಖ್ಯಸ್ಥರಾದ ಎ.ಕೆ. ಸಿಂಗ್‌ ಅವರನ್ನು ಹುಬ್ಬಳ್ಳಿಯಲ್ಲಿ ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿತು. ಈ ವೇಳೆ ರೈಲು ವೇಳಾಪಟ್ಟಿ ಬಗ್ಗೆ ಗೊಂದಲಗಳಿದ್ದು, ಈ ಬಗ್ಗೆ ಎ.ಕೆ. ಸಿಂಗ್‌ ಮತ್ತು ವಲಯದ ನಿಯಂತ್ರಕ ಹರಿಶಂಕರ್‌ ವರ್ಮ ನೇತೃತ್ವದ ತಂಡವು ಸಮಿತಿಗೆ ಹಲವು ತಾಂತ್ರಿಕ ತೊಂದರೆಗಳ ಬಗ್ಗೆ ವಿವರಿಸಿದರು. ಈಗ ತಾತ್ಕಾಲಿಕವಾಗಿ ವೇಳಾಪಟ್ಟಿ ತಯಾರಿಸಲಾಗಿದ್ದು, ಇನ್ನೂ ಅನುಕೂಲಕರ ರೀತಿಯಲ್ಲಿ ಸಿದ್ಧಪಡಿಸಲಾಗುವುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಸಂಸದೆ ಟ್ವೀಟ್‌: ರೈಲ್ವೆ ಸಚಿವ ಸುರೇಶ್‌ ಅಂಗಡಿ ಹೊಸ ವಿಶೇಷ ರೈಲನ್ನು ಮಂಜೂರುಗೊಳಿಸಿದ ವಿಚಾರವನ್ನು ಸಂಸದೆ ಶೋಭಾ ಕರಂದ್ಲಾಜೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ರೈಲು ಪ್ರಯಾಣಿಕರ ಸಮಿತಿಯ ಪ್ರಯತ್ನವನ್ನು ಸ್ಮರಿಸಿಕೊಂಡಿದ್ದಾರೆ. ಈ ರೈಲು ಪಡೀಲ್‌ ಬೈಪಾಸ್‌ ಮೂಲಕ ಉಡುಪಿಯತ್ತ ಸಾಗುವುದರಿಂದ ಮಂಗಳೂರು ಸೆಂಟ್ರಲ್‌ ಮತ್ತು ಜಂಕ್ಷನ್‌ ನಿಲ್ದಾಣಗಳಲ್ಲಿ ಎರಡೂವರೆ ತಾಸಿಗೂ ಅಧಿಕ ಹೊತ್ತು ಅನಗತ್ಯ ಕಾಯುವಿಕೆಯನ್ನು ತಪ್ಪಿಸುತ್ತದೆ. ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ತಮ್ಮ ಊರನ್ನು ತಲುಪಲು ಅನುಕೂಲ ಮಾಡಿಕೊಡಲಿದೆ.

ವೇಳಾಪಟ್ಟಿ
ಸಮಯ: ಪ್ರತಿದಿನ ಸಂಜೆ 6.45
ನಿಲ್ದಾಣ: ಯಶವಂತಪುರ, ಬೆಂಗಳೂರು
ಮಾರ್ಗ: ಹಾಸನ, ಸುಬ್ರಹ್ಮಣ್ಯ ಬೆಳಗ್ಗೆ 3.30ಕ್ಕೆ ಪಡೀಲ್‌ ಬೆಳಗ್ಗೆ 4.10ಕ್ಕೆ ಸುರತ್ಕಲ್‌, 4.50ಕ್ಕೆ ಉಡುಪಿ, 5.20ಕ್ಕೆ ಕುಂದಾಪುರ, 5.40ಕ್ಕೆ ಬೈಂದೂರು, 8.30ಕ್ಕೆ ಕಾರವಾರ, ಬೆ.10.30ಕ್ಕೆ ವಾಸ್ಕೋ

Advertisement

ಮರುಪ್ರಯಾಣ
ನಿಲ್ದಾಣ: ವಾಸ್ಕೊ
ಸಮಯ: ಸಂಜೆ 4.40
ಮಾರ್ಗ: ಸಂಜೆ 7ಕ್ಕೆ ಕಾರವಾರ, ರಾತ್ರಿ 10.33ಕ್ಕೆ ಬೈಂದೂರು, ರಾತ್ರಿ 10.55ಕ್ಕೆ ಕುಂದಾಪುರ, ರಾತ್ರಿ 11.25ಕ್ಕೆ ಉಡುಪಿ, 12.20ಕ್ಕೆ ಪಡೀಲ್‌, ಬೆಳಗ್ಗೆ 9ಕ್ಕೆ ಯಶವಂತಪುರ.

ಕರಾವಳಿ ಕನಸು ನನಸು ಶೋಭಾ ಕರಂದ್ಲಾಜೆ
ಬೆಂಗಳೂರು: ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ನಡುವೆ ಹೊಸ ರೈಲಿನಿಂದ ಕರಾವಳಿಯ ದಶಕಗಳ ಕನಸು ನನಸಾಗಿದ್ದು, ಸುಮಾರು ಎರಡೂವರೆ ತಾಸು ಸಂಚಾರ ಸಮಯ ಉಳಿತಾಯ ಆಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಉದ್ದೇಶಿತ ಹೊಸ ರೈಲು ಪಡೀಲ್‌ ಬೈಪಾಸ್‌ ಮೂಲಕ ಉಡುಪಿ ತಲುಪಲಿದೆ.

ಇದರಿಂದ ಮಂಗಳೂರು ಸೆಂಟ್ರಲ್‌ ಹಾಗೂ ಜಂಕ್ಷನ್‌ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಷ್ಟು ಅನಗತ್ಯ ಕಾಯುವಿಕೆ ತಪ್ಪಿದಂತಾಗಿದೆ. ಈ ಸಂಬಂಧ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಲಾಗಿತ್ತು. ಆಗ, ಖುದ್ದು ಸಚಿವರು ತನ್ನ ಸಮ್ಮುಖದಲ್ಲಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಅಲ್ಲದೆ, ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ನ್ಯಾಯವನ್ನೂ ಒದಗಿಸಿದ್ದಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next