ಕಲಬುರಗಿ: ಜಿಲ್ಲೆಯಲ್ಲಿ ಮಂಗಳವಾರ ಮತ್ತೊಬ್ಬರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಮೃತ ಬಟ್ಟೆ ವ್ಯಾಪಾರಿ ಸೋಂಕಿನ ‘ಚೈನ್’ ಗೆ ಒಳಪಟ್ಟ 14 ವರ್ಷದ ಬಾಲಕನಿಗೆ ಮಹಾಮಾರಿ ರೋಗ ದೃಢಪಟ್ಟಿದೆ.
ದೆಹಲಿಯ ಮಸೀದಿಯಿಂದ ಮರಳಿದವರ ಸಂಪರ್ಕಕ್ಕೆ ಬಂದಿದ್ದ ನಗರದ ಮೋಮಿನ್ ಪುರ ನಿವಾಸಿ, 55 ವರ್ಷದ ಬಟ್ಟೆ ವ್ಯಾಪಾರಿ (ಪಿ-205) ಕೋವಿಡ್-19 ಸೋಂಕಿನಿಂದ ಏ.13ರಂದು ಮೃತಪಟ್ಟಿದ್ದರು. ಈತನ ಸಂಪರ್ಕಕ್ಕೆ ಬಂದ 19 ವರ್ಷದ ಯುವಕ (ಪಿ-393) ನಿಗೆ ಸೋಂಕು ಹರಡಿತ್ತು.
ಯುವಕನಿಂದ 26 ವರ್ಷದ ಮಹಿಳೆ (ಪಿ-425) ಸೋಂಕು ವ್ಯಾಪಿಸಿತ್ತು. ಈ ಮಹಿಳೆಯಿಂದ 40 ವರ್ಷದ ಮತ್ತೋರ್ವ ಮಹಿಳೆ (ಪಿ-529) ಗೆ ಮಹಾಮಾರಿ ಪಸರಿಸಿತ್ತು. ಈಗ ಈ ಮಹಿಳೆಯಿಂದ 14 ವರ್ಷದ ಬಾಲಕ (ಪಿ-866) ನಿಗೆ ಕೋವಿಡ್-19 ವಕ್ಕರಿಸಿದೆ.
ಈ ಮೂಲಕ ಜಿಲ್ಲೆಯ ಒಟ್ಟು ಕೋವಿಡ್ -19 ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಇದರಲ್ಲಿ 44 ಜನ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6 ಜನರು ಮೃತಪಟ್ಟಿದ್ದು, ಉಳಿದಂತೆ 23 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇಂದು 42 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದಿರಿಂದ ರಾಜ್ಯದಲ್ಲಿ ಒಟ್ಟು 904 ಪ್ರಕರಣಗಳು ದೃಢವಾಗಿದೆ. ಇದುವರೆಗೆ ಸೋಂಕಿನ ಕಾರಣದಿಂದ 31 ಜನರು ಸಾವನ್ನಪ್ಪಿದ್ದು, 426 ಜನರು ಗುಣಮುಖರಾಗಿದ್ದಾರೆ. ಓರ್ವ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ.