ನೀವೇನಾದರೂ, ಚೆಸ್ ಗೇಮ್ ಪ್ರಿಯರಾಗಿದ್ದಾರೆ ನಿಮಗೆ “ಚೆಕ್‌ಮೇಟ್’ ಎಂಬ ಪದ ಚಿರಪರಿಚಿತವಾಗಿರುತ್ತದೆ. ಈಗ ಇದೇ ಪದವನ್ನು ಇಟ್ಟುಕೊಂಡು “ದ ಚೆಕ್‌ಮೇಟ್’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ಸದ್ದಿಲ್ಲದೆ ತೆರೆಗೆ ಬರಲು ತಯಾರಾಗುತ್ತಿದೆ. ಈ ಹಿಂದೆ “ಪಾರು ಐ ಲವ್ ಯೂ’ ಚಿತ್ರದ ಮೂಲಕ ಗಾಂಧಿನಗರಕ್ಕೆ ಪರಿಚಯವಾಗಿದ್ದ ರಂಜನ್ ಹಾಸನ್, “ಜಗದ್ ಜ್ಯೋತಿ ಮೂವೀ ಮೇಕರ್’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಶ ವಸಿಷ್ಠ ಮತ್ತು ಸಂತೋಷ ಚಿಪ್ಪಾಡಿ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಒಂದಷ್ಟು ಮಾತನಾಡಿತು.
“ಕಥಾನಾಯಕ ಮತ್ತು ಆತನ ಮೂವರು ಸ್ನೇಹಿತರು ಬ್ರೇಕಪ್ ಪಾರ್ಟಿ ಮಾಡಲು ಒಂದೆಡೆ ಸೇರುತ್ತಾರೆ. ಅಲ್ಲಿ ತಮ್ಮ ಲವ್ ಬ್ರೇಕಪ್ ಪ್ರಸಂಗಗಳನ್ನು ವಿನೋದವಾಗಿ ಹಂಚಿಕೊಳ್ಳುತ್ತಾರೆ. ಇದರ ನಡುವೆ ಅವರಿಗಾಗುವ ಅನುಭವಗಳು ಅಲ್ಲಿ ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸುತ್ತವೆ. ನಾಲ್ವರು ಕೂಡ ಚದುರಂಗದಾಟದ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗೆ ಶುರುವಾದ ಆಟ ಕೊನೆಗೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಅನ್ನೋದೆ ಸಿನಿಮಾದ ಕ್ಲೈಮ್ಯಾಕ್ಸ್. ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಕಾಮಿಡಿ, ಸೆಂಟಿಮೆಂಟ್, ಎಮೋಶನ್ಸ್ ಎಲ್ಲವನ್ನೂ ಇಲ್ಲಿ ಕಾಣಬಹುದು’ ಎಂದು ವಿವರಣೆ ನೀಡಿತು ಚಿತ್ರತಂಡ.
ಚಿತ್ರ ನಿರ್ಮಾಣ ಮತ್ತು ತನ್ನ ಪಾತ್ರದ ಬಗ್ಗೆ ಮಾತನಾಡಿದ ರಂಜನ್ ಹಾಸನ್, “ಇಂದಿನ ಆಡಿಯನ್ಸ್ ನಿರೀಕ್ಷಿಸುವ ಎಲ್ಲ ಅಂಶಗಳನ್ನೂ ಕಾಣಬಹುದು. “ದ ಚೆಕ್‌ಮೇಟ್’ನ ಬಹುತೇಕ ಕೆಲಸಗಳು ಈಗಾಗಲೇ ಮುಗಿದಿದ್ದು ಸಿನಿಮಾ ಸೆನ್ಸಾರ್ ಮುಂದಿದೆ. ಆದಷ್ಟು ಬೇಗ ಸಿನಿಮಾವನ್ನು ಆಡಿಯನ್ಸ್ ಮುಂದೆ ತರುತ್ತೇವೆ’ ಎಂದು ಮಾಹಿತಿ ನೀಡಿದರು.
ಇನ್ನು “ದ ಚೆಕ್‌ಮೇಟ್’ ಚಿತ್ರದಲ್ಲಿ ಪ್ರೀತು ಪೂಜಾ ಜೋಡಿಯಾಗಿದ್ದಾರೆ.ಉಳಿದಂತೆ, ನೀನಾಸಂ ಅಶ್ವತ್, ವಿಶ್ವ ವಿಜೇತ್, ದಿವ್ಯಾ, ಅಮೃತಾ ನಾಯರ್, ವಿಜಯ ಚೆಂಡೂರ್, ಸುಧೀರ ಕಾಕ್ರೋಚ್, ಸರ್ದಾರ್ ಸತ್ಯ, ರಾಜಶೇಖರ, ಪ್ರದೀಪ ಪೂಜಾರಿ, ವಿಸ್ಮಯಾ, ಸ್ತುತಿ, ಕಾರ್ತಿಕ ಹುಲಿ, ಚಿಲ್ಲರ್ ಮಂಜು, ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಶಶಾಂಕ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸತೀಶ ರಾಜೇಂದ್ರನ್ ಛಾಯಾಗ್ರಹಣ, ಈ.ಎಸ್ ಈಶ್ವರ್, ಸುನೀಲ ಕಶ್ಶಪ್ ಸಂಕಲನವಿದೆ.
ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರೀಕರಣದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬೆಂಗಳೂರು ಸುತ್ತಮುತ್ತ “ದ ಚೆಕ್‌ಮೇಟ್’ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ, ಇದೇ ಏಪ್ರಿಲ್ ವೇಳೆಗೆ “ದ ಚೆಕ್‌ಮೇಟ್’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.