Advertisement

ಕಡಲಾಳದಲ್ಲಿ ಅವಶೇಷ ಪತ್ತೆಗೆ ಮತ್ತೂಂದು ಸರ್ವೆ

12:57 AM Jun 03, 2019 | Team Udayavani |

ಮಹಾನಗರ: ಕಡಲ್ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ಉಳ್ಳಾಲ ಮೊಗವೀರಪಟ್ಣ ಭಾಗದ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಡ್ರೆಜರ್‌ ಐಬಿಎಸ್‌ ಬಾರ್ಜ್‌’ ಮುಳುಗಡೆಯಾಗಿ ಇಂದಿಗೆ ಎರಡು ವರ್ಷಗಳು. ಇದೀಗ ಬಾರ್ಜ್‌ನ ಬಹುತೇಕ ಅವಶೇಷಗಳನ್ನು ತೆರವು ಮಾಡಲಾಗಿದ್ದು, ಆದರೂ ಕಡಲಾಳದಲ್ಲಿ ಅವಶೇಷಗಳಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮತ್ತೂಂದು ಸರ್ವೆ ನಡೆಸಲು ಬಂದರು ಇಲಾಖೆ ನಿರ್ಧರಿಸಿದೆ.

Advertisement

ಸಮುದ್ರದಲ್ಲಿ ನೌಕೆ ಮುಳುಗಡೆ ಪ್ರಕರಣಕ್ಕೆ ಸಂಬಂಧಿಸಿ, ಮಂಗಳೂರಿನಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಬಹುತೇಕ ಪ್ರಮಾಣದಲ್ಲಿ (ಬಂದರು ಇಲಾಖೆಯ ಪ್ರಕಾರ ಶೇ.99)ಅವಶೇಷಗಳನ್ನು ಮೇಲಕ್ಕೆತ್ತಲಾಗಿದೆ ಎಂಬುದು ವಿಶೇಷ.

ಮಳೆಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಅವಶೇಷ ಮೇಲಕ್ಕೆತ್ತುವ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಮಳೆ ಮುಗಿದ ಬಳಿಕ ಸರ್ವೆ ಕಾರ್ಯ ನಡೆಯಲಿದೆ. ಸರ್ವೆಯ ಪ್ರಕಾರ ಯಾವುದೇ ಅವಶೇಷ ಸಮುದ್ರದಲ್ಲಿ ಉಳಿದಿಲ್ಲ ಎಂಬುದು ಖಾತ್ರಿಯಾದರೆ ಬಳಿಕ ಏಜೆನ್ಸಿಯವರ ಯಂತ್ರೋಪಕರಣಗಳನ್ನು ಮಂಗಳೂರಿನಿಂದ ಕೊಂಡೊಯ್ಯಲಾಗುತ್ತದೆ.

ಇದೊಂದು ಸುಧಾರಿತ ಬಾರ್ಜ್‌ ಆಗಿದ್ದು, ಒಟ್ಟು 65 ಮೀಟರ್‌ ಉದ್ದವಿತ್ತು. ಜತೆಗೆ ಬೀಮ್‌ 32 ಮೀಟರ್‌ ಇದ್ದು, 4.50 ಮೀಟರ್‌ ಆಳಮಟ್ಟವನ್ನು ಹೊಂದಿತ್ತು. 2,964 ಟನ್‌ಗಳಷ್ಟು ಭಾರವನ್ನೂ ಹೊಂದಿತ್ತು.

ಈ ಬಾರ್ಜ್‌ನಲ್ಲಿ ದೊಡ್ಡ ಗಾತ್ರದ ಒಂದು ಕ್ರೇನ್‌ ಕೂಡ ಇತ್ತು. ಸಮುದ್ರದಲ್ಲಿ ಸಂಚರಿಸುವುದಕ್ಕೆ ಬೇಕಾಗುವ ಎಲ್ಲ ಸಂಪರ್ಕ ಸಾಧನ ವ್ಯವಸ್ಥೆ, ಏಕಕಾಲಕ್ಕೆ ಸುಮಾರು 65 ಮಂದಿ ಕಾರ್ಮಿಕರು ನಿಂತು ಕೆಲಸ ಮಾಡುವಷ್ಟು ವಿಶಾಲವಾಗಿತ್ತು. ಒಂದು ಅಡುಗೆ ಕೋಣೆ, ಒಂದು ಸ್ನಾನದ ಕೋಣೆ ಇತ್ತು. ಅವಶೇಷಗಳನ್ನು ಗುಜಿರಿಗೆ ಬಳಸಲಾಗಿದೆ.

Advertisement

ಡೆನ್‌ಡೆನ್‌ ಅವಶೇಷ ತೆರವಿಗೆಹಲವು ವರ್ಷ!
ಇರೀಟ್ರಿಯಾ ದೇಶದ ‘ಡೆನ್‌ ಡೆನ್‌’ ಹಡಗು ಫರ್ನೆಸ್‌ಗೆ ಬಳಸುತ್ತಿದ್ದ 7,000 ಮ್ಟೆರಿಕ್‌ ಟನ್‌ ಕಚ್ಚಾ ಇಂಧನವನ್ನು ನವಮಂಗಳೂರು ಬಂದರಿನಿಂದ ದುಬಾೖಗೆ ಸಾಗಿಸುತ್ತಿದ್ದಾಗ 2007, ಜೂ. 23ರಂದು ತಣ್ಣೀರುಬಾವಿ ಬಳಿ ಅಪಾಯಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ಅದರಲ್ಲಿದ್ದ 24 ಸಿಬಂದಿ ಪೈಕಿ 3 ಮಂದಿ ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು. ಜೂ. 22ರಂದು ಎನ್‌ಎಂಪಿಟಿಯಿಂದ ಹೊರಟ ಕೆಲವೇ ಸಮಯದಲ್ಲಿ ಡೆನ್‌ಡೆನ್‌ ನೌಕೆಯ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ನೌಕೆಯನ್ನು ದುರಸ್ತಿಗಾಗಿ ವಾಪಾಸ್‌ ಎನ್‌ಎಂಪಿಟಿ ಕಡೆಗೆ ತರಲು ಯತ್ನಿಸಿದಾಗ ಬಲವಾದ ಗಾಳಿ, ಪ್ರತೀಕೂಲ ಹವಾಮಾನದಿಂದಾಗಿ ತಣ್ಣೀರುಬಾವಿ ಕಡೆಗೆ ಸಾಗಿ ಅಲ್ಲಿ ತಳಭಾಗವು ನೆಲಕ್ಕೆ ತಗುಲಿ ಮರುದಿನ (ಜೂ. 23) ಮುಳುಗಡೆಯಾಗಿತ್ತು. ಈ ಹಡಗನ್ನು ಮೇಲೆತ್ತಲು ಸಾಧ್ಯವಾಗದ ಕಾರಣ 2 ವರ್ಷಗಳ ಬಳಿಕ ಅದನ್ನು ಗುಜಿರಿಗೆ ಮಾರಾಟ ಮಾಡಲಾಗಿತ್ತು. ಆದರೆ ಸಂಪೂರ್ಣವಾಗಿ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈಗಲೂ ಇದರ ಕೆಲವು ಅವಶೇಷಗಳು ಮೀನುಗಾರಿಕಾ ಬೋಟಿಗೆ ಸಮಸ್ಯೆಯಾಗುತ್ತದೆ ಎಂದು ಮೀನುಗಾರರು ಆರೋಪಿಸುತ್ತಿದ್ದಾರೆ.

‘ಏಶಿಯನ್‌ ಫಾರೆಸ್ಟ್‌’ ನೌಕೆಯದ್ದೂ ಇದೇ ಕಥೆ!
2007ರ ಸಪ್ಟೆಂಬರ್‌ನಲ್ಲಿ ಎನ್‌ಎಂಪಿಟಿ ಬಂದರಿನಿಂದ ಕಬ್ಬಿಣದ ಅದಿರನ್ನು ಹೇರಿಕೊಂಡು ಚೀನಕ್ಕೆ ಹೊರಟಿದ್ದ ಹಡಗು ‘ಚಾಂಗ್‌ ಲಿ ಮನ್‌’ ಪ್ರತಿಕೂಲ ಹವಾಮಾನದಿಂದ ತಣ್ಣೀರು ಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿತ್ತು. ಆದರೆ ಈ ಹಡಗು ಮುಳುಗಡೆ ಆಗಿರಲಿಲ್ಲ. 2008 ಜು. 17ರಂದು ನವಮಂಗಳೂರು ಬಂದರಿನಿಂದ 13,000 ಟನ್‌ ಮ್ಯಾಂಗನೀಸ್‌ ಅದಿರನ್ನು ಹೊತ್ತು ಚೀನಕ್ಕೆ ಹೊರಟಿದ್ದ ಇತಿಯೋಪಿಯಾದ ‘ಏಶಿಯನ್‌ ಫಾರೆಸ್ಟ್‌’ ಹಡಗು ಪ್ರತಿಕೂಲ ಹವಾಮಾನದಿಂದ ಮುಂದಕ್ಕೆ ಚಲಿಸಲಾಗದೆ ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು. 18) ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ನೌಕೆಯಲ್ಲಿದ್ದ ಎಲ್ಲ 18 ಮಂದಿಯನ್ನು ರಕ್ಷಿಸಲಾಗಿತ್ತು. ಅದರ ಅವಶೇಷವನ್ನು ಪೂರ್ಣವಾಗಿ ತೆಗೆಯಲು ಕೆಲವು ವರ್ಷಗಳೇ ಬೇಕಾಯಿತು.

ಎಡಿಬಿ ಯೋಜನೆಯಡಿ 223 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ ಕೆಲವು ವರ್ಷಗಳಿಂದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಆಂಧ್ರಪ್ರದೇಶ ಮೂಲದ ‘ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್‌ ಅನ್ನು ಉಳ್ಳಾಲಕ್ಕೆ ತರಿಸಲಾಗಿತ್ತು. ಇಲ್ಲಿನ ಸಮುದ್ರ ದಡದಿಂದ 700 ಮೀ. ದೂರದಲ್ಲಿ ಬಾರ್ಜ್‌ ನಿಲ್ಲಿಸಿ ಕಾಮಗಾರಿ ನಡೆಸಲಾಗುತ್ತಿತ್ತು. ಇದರಲ್ಲಿ ಸುಮಾರು 27 ಕಾರ್ಮಿಕರು ಕೆಲಸ ನಿರತರಾಗಿದ್ದರು. ಜೂ. 3ರಂದು ಮಧ್ಯಾಹ್ನದಿಂದ ಕಡಲು ಪ್ರಕ್ಷುಬ್ಧ ವಾಗತೊಡಗಿ ಅಲೆಗಳ ಹೊಡೆತಕ್ಕೆ ಬಾರ್ಜ್‌ ಅಪಾಯಕ್ಕೆ ಸಿಲುಕಿತ್ತು. ಬಾರ್ಜ್‌ ಅಂದು ರೀಫ್‌ (ತಡೆ ದಂಡೆ)ಗೆ ಬಡಿದು ಹಾನಿಯಾಗಿ ಸಮುದ್ರದ ನೀರು ಬಾರ್ಜ್‌ ನ ಕಂಪಾರ್ಟ್‌ಗಳಿಗೆ ನುಗ್ಗಿದ್ದರಿಂದ ಮೋಟಾರ್‌ ಸಹಿತ ಯಂತ್ರಗಳಿರುವ ಭಾಗ ಸಮುದ್ರದೊಳಗೆ ಮುಳುಗಿತ್ತು. ಜತೆಗೆ ಅದರಲ್ಲಿದ್ದ ಸಾಮಗ್ರಿಗಳು ಸಮುದ್ರ ತೀರಕ್ಕೆ ಬಂದಿತ್ತು.

ಎರಡು ವರ್ಷಗಳ ಹಿಂದೆ… ಇದೇ ದಿನ!

ಎಡಿಬಿ ಯೋಜನೆಯಡಿ 223 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ ಕೆಲವು ವರ್ಷಗಳಿಂದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಆಂಧ್ರಪ್ರದೇಶ ಮೂಲದ ‘ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್‌ ಅನ್ನು ಉಳ್ಳಾಲಕ್ಕೆ ತರಿಸಲಾಗಿತ್ತು. ಇಲ್ಲಿನ ಸಮುದ್ರ ದಡದಿಂದ 700 ಮೀ. ದೂರದಲ್ಲಿ ಬಾರ್ಜ್‌ ನಿಲ್ಲಿಸಿ ಕಾಮಗಾರಿ ನಡೆಸಲಾಗುತ್ತಿತ್ತು. ಇದರಲ್ಲಿ ಸುಮಾರು 27 ಕಾರ್ಮಿಕರು ಕೆಲಸ ನಿರತರಾಗಿದ್ದರು. ಜೂ. 3ರಂದು ಮಧ್ಯಾಹ್ನದಿಂದ ಕಡಲು ಪ್ರಕ್ಷುಬ್ಧ ವಾಗತೊಡಗಿ ಅಲೆಗಳ ಹೊಡೆತಕ್ಕೆ ಬಾರ್ಜ್‌ ಅಪಾಯಕ್ಕೆ ಸಿಲುಕಿತ್ತು. ಬಾರ್ಜ್‌ ಅಂದು ರೀಫ್‌ (ತಡೆ ದಂಡೆ)ಗೆ ಬಡಿದು ಹಾನಿಯಾಗಿ ಸಮುದ್ರದ ನೀರು ಬಾರ್ಜ್‌ ನ ಕಂಪಾರ್ಟ್‌ಗಳಿಗೆ ನುಗ್ಗಿದ್ದರಿಂದ ಮೋಟಾರ್‌ ಸಹಿತ ಯಂತ್ರಗಳಿರುವ ಭಾಗ ಸಮುದ್ರದೊಳಗೆ ಮುಳುಗಿತ್ತು. ಜತೆಗೆ ಅದರಲ್ಲಿದ್ದ ಸಾಮಗ್ರಿಗಳು ಸಮುದ್ರ ತೀರಕ್ಕೆ ಬಂದಿತ್ತು.

ಅವಶೇಷ ಬಹುತೇಕ ವಿಲೇವಾರಿ

ಸಮುದ್ರದಲ್ಲಿ ಮುಳುಗಿದ ನೌಕೆಯ ಪೈಕಿ 2017ರಲ್ಲಿ ಉಳ್ಳಾಲದಲ್ಲಿ ಮುಳುಗಿದ ಬಾರ್ಜ್‌ನ ಶೇ.99ರಷ್ಟು ಅವಶೇಷಗಳನ್ನು ಮೇಲಕ್ಕೆತ್ತಲಾಗಿದೆ. ಆದರೂ ಸಮುದ್ರದಾಳದಲ್ಲಿ ಇರಬಹುದಾದ ಅವಶೇಷ ಗಳನ್ನು ಪತ್ತೆಹಚ್ಚುವ ನೆಲೆಯಲ್ಲಿ ಕೊನೆಯ ಹಂತದ ಸರ್ವೆ ನಡೆಸಲಾಗುವುದು.
– ಗೌಸ್‌ ಆಲಿ, ಬಂದರು ಸಂರಕ್ಷಣಾಧಿಕಾರಿ, ಮಂಗಳೂರು
Advertisement

Udayavani is now on Telegram. Click here to join our channel and stay updated with the latest news.

Next