ನವದೆಹಲಿ:ಮುಂದಿನ ವರ್ಷ(2021) ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ ನಡೆಯುವ ಮುನ್ನವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗಿದ್ದು, ಶುಕ್ರವಾರ(ಡಿಸೆಂಬರ್ 18, 2020) ಶಾಸಕ ಸಿಲ್ ಭದ್ರಾ ದತ್ತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಧ್ಯಮದ ವರದಿಯ ಪ್ರಕಾರ, ಉತ್ತರ 24 ಪರಾಗಣ್ ನ ಬರ್ಯಾಕ್ ಪೋರ್ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ದತ್ತಾ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ ವರಿಷ್ಠೆ, ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಇ ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಸಿದೆ.
ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಜತೆ ಅಸಮಾಧಾನ ಹೊಂದಿರುವ ಹಲವು ಮುಖಂಡರು ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹ ದಟ್ಟವಾಗಿ ಹಬ್ಬಿತ್ತು.ಮತ್ತೊಂದೆಡೆ ಪ್ರತಿಕ್ರಿಯೆ ನೀಡಿರುವ ದತ್ತಾ, ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಉಜಿರೆ ಬಾಲಕ ಅಪಹರಣ ಪ್ರಕರಣ: ಎಸ್ ಪಿ ಭೇಟಿ, ಪ್ರಕರಣ ಬೇಧಿಸಲು ನಾಲ್ಕು ತಂಡ ರಚನೆ
ಪಶ್ಚಿಮಬಂಗಾಳ ಸರ್ಕಾರ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಿದ ನಂತರ ಸುವೇಂದು ಅಧಿಕಾರಿ ಪಕ್ಷಕ್ಕೆ ರಾಜೀನಾಮೆ ನೀಡಿ ನಂತರ ಶಾಸಕರ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಅಧಿಕಾರಿ ನಂತರ ಪಾಂಡವೇಶ್ವರ್ ಶಾಸಕ ,ಅಸಾನ್ ಸೋಲ್ ಆಡಳಿತ ಮಂಡಳಿ ಅಧ್ಯಕ್ಷ ಜಿತೇಂದ್ರ ತಿವಾರಿ ಪಕ್ಷ ತೊರೆದಿದ್ದರು. ಇವರಿಬ್ಬರು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿ ದಟ್ಟವಾಗಿರುವುದಾಗಿ ವರದಿ ತಿಳಿಸಿದೆ.