ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೂಬ್ಬ ಸಜಾ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಮೂಲದ ಮಾಸ್ತಿ ಕುಮಾರ್ (32) ಆತ್ಮಹತ್ಯೆ ಮಾಡಿಕೊಂಡ ಕೈದಿ. ಗುರುವಾರ ರಾತ್ರಿ ಜೈಲಿನ ಎ ಬ್ಯಾರಕ್‌ನ ಸಂಗೀತ ಪಾಠ ಶಾಲೆಯ ಕಿಟಕಿಗೆ ಟವಲ್‌ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ 2015ರಲ್ಲಿ ಬರ್ಬರವಾಗಿ ಹತ್ಯೆಗೈದಿದ್ದ ಮಾಸ್ತಿ ಕುಮಾರ್‌ಗೆ ಸ್ಥಳೀಯ ನ್ಯಾಯಾಲಯ 2017ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ 10 ತಿಂಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಕುಮಾರ್, ಇನ್ನೆಂದೂ ಜೈಲಿನಿಂದ ಹೊರ ಹೋಗಲು ಸಾಧ್ಯವಿಲ್ಲ ಎಂದರಿತು ಮಾನಸಿಕವಾಗಿ ಕುಗ್ಗಿದ್ದ. ಅಲ್ಲದೆ, ಆತನ ಆರೋಗ್ಯದಲ್ಲೂ ಏರುಪೇರಾಗಿದ್ದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಕೇಪ್ ಆಗಿದ್ದ: 10 ತಿಂಗಳ ಹಿಂದೆ ಕಾರಾಗೃಹ ಸೇರಿದ್ದ ಮಾಸ್ತಿ ಕುಮಾರ್, ಈ ಹಿಂದೆ ಫೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಈತ ಆಸ್ಪತ್ರೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಕಣ್ಣ ತಪ್ಪಿಸಿ ಪಾರಾರಿಯಾಗಿದ್ದ. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ವಿವಿ ಪುರಂ ಪೊಲೀಸರು, ಚಿತ್ರದುರ್ಗದ ಪ್ರೇಯಸಿ ಮನೆಯಲ್ಲಿ ಅಡಗಿದ್ದ ಆತನನ್ನು ಬಂಧಿಸಿ ಮತ್ತೆ ಜೈಲಿಗೆ ಕಳಿಸಿದ್ದರು.
ಸಂಗೀತ ಶಾಲೆಯಲ್ಲೇ ಸಾವು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮನಪರಿವರ್ತನೆ ಹಾಗೂ ಮನರಂಜನೆಗಾಗಿ ಸಂಗೀತ ಶಾಲೆ ನಡೆಸಲಾಗುತ್ತಿದೆ. ಎಲ್ಲ ಕೈದಿಗಳಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆಗಳ ಕಾಲ ಸಂಗೀತ ಹೇಳಿಕೊಡಲಾಗುತ್ತದೆ. ಗುರುವಾರ ಸಂಜೆ ಕೂಡ ಮಾಸ್ತಿ ಕುಮಾರ್ ಸಂಗೀತ ಶಾಲೆಗೆ ಹೋಗಿದ್ದಾನೆ. ಆದರೆ, ವಾಪಸ್ ಬಂದಿಲ್ಲ.
ಸಂಜೆ 7 ಗಂಟೆಗೆ ಎಂದಿನಂತೆ ಕೈದಿಗಳ ಲೆಕ್ಕ ಪಡೆಯವಾಗ ಮಾಸ್ತಿ ಕುಮಾರ್ ಕಾಣಿಸಿಲ್ಲ. ಇದರಿಂದ ಅನುಮಾನಗೊಂಡು ಸಂಗೀತ ಶಾಲೆಯಲ್ಲಿ ಪರಿಶೀಲಿಸಿದಾಗ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಇದೇ ಫೆ.26ರ ರಾತ್ರಿ ತ್ರಿವಳಿ ಕೊಲೆ ಅಪರಾಧಿ ಸೈಕೋ ಜೈಶಂಕರ್ ಬ್ರೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.