Advertisement

ಆರ್‌ಸಿಬಿ ಮೇಲೆ ಮತ್ತೂಂದು ಸುತ್ತಿನ ನಂಬಿಕೆ

12:04 AM Apr 04, 2021 | Team Udayavani |

ಆರ್‌ಸಿಬಿ ಕನ್ನಡಿಗರ ನೆಚ್ಚಿನ ತಂಡ. ಕರ್ನಾಟಕದ ಸ್ಟಾರ್‌ ಕ್ರಿಕೆಟಿಗರು ಬೇರೆ ಬೇರೆ ತಂಡಗಳಲ್ಲಿ ಹಂಚಿಹೋದರೂ ಬೆಂಗಳೂರು ತಂಡದ ಮೇಲಿನ ಅಭಿಮಾನಕ್ಕೇನೂ ಧಕ್ಕೆ ಆಗಿಲ್ಲ. ಆದರೆ ಒಂದೇ ಒಂದು ಕೊರತೆ, “ಕಪ್‌ ನಮ್ದೇ’ ಎಂದು ಪ್ರತೀ ವರ್ಷವೂ ಘೋಷಿಸಿಕೊಂಡರೂ ಕನ್ನಡಿಗರ ಈ ಆಸೆಯನ್ನು ಮಾತ್ರ ಕೊಹ್ಲಿ ಪಡೆ ಈ ವರೆಗೆ ಈಡೇರಿಸಿಲ್ಲ. ಮೂರೂ ಫೈನಲ್‌ಗ‌ಳಲ್ಲಿ ಸೋಲೇ ಸಂಗಾತಿಯಾಗಿದೆ. ಟೀಮ್‌ ಇಂಡಿಯಾ ನಾಯಕನಾಗಿ ಯಶಸ್ಸು ಕಂಡರೂ ಐಪಿಎಲ್‌ನತ್ತ ಮುಖ ಮಾಡಿದಾಗ ಕೊಹ್ಲಿಯೇಕೋ ಅನ್‌ ಲಕ್ಕಿ ಎನಿಸಿಕೊಳ್ಳುತ್ತಾರೆ.

Advertisement

ಮತ್ತಷ್ಟು ವಿಶ್ವ ದರ್ಜೆ ಕ್ರಿಕೆಟಿಗರು
ಈ ಸಲ ಆರ್‌ಸಿಬಿ ಇನ್ನಷ್ಟು ವಿಶ್ವ ದರ್ಜೆಯ ಆಟಗಾರರನ್ನು ಹಾಗೂ ಯುವ ಪ್ರತಿಭೆಗಳನ್ನು ಸೇರಿಸಿಕೊಂಡು ಹೆಚ್ಚು ವೈವಿಧ್ಯಮ ಯವಾಗಿ ಗೋಚರಿಸುತ್ತಿದೆ. ತನ್ನ 10 ಆಟಗಾರರನ್ನು ಬಿಟ್ಟುಕೊಟ್ಟು ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಡೇನಿಯಲ್‌ ಕ್ರಿಸ್ಟಿಯನ್‌, ಕಿವೀಸ್‌ ವೇಗಿ ಕೈಲ್‌ ಜಾಮೀಸನ್‌, ಆರಂಭಕಾರ ಫಿನ್‌ ಅಲೆನ್‌, ಕೇರಳದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಅಜರುದ್ದೀನ್‌ ಮೊದಲಾದವರಿಗೆ ಬಲೆ ಬೀಸಿದೆ.

ಜತೆಗೆ ಎಂದಿನಂತೆ ಪಡಿಕ್ಕಲ್‌, ಎಬಿಡಿ, ಕೊಹ್ಲಿ, ಚಹಲ್‌, ಸೈನಿ, ಸಿರಾಜ್‌, ಝಂಪ, ವಾಷಿಂಗ್ಟನ್‌ ಇದ್ದಾರೆ. ತಂಡವೊಂದು ಚಾಂಪಿಯನ್‌ ಆಗಿ ಮೂಡಿಬರಲು ಇಷ್ಟೊಂದು ಮೂಲಭೂತ ಸಾಮರ್ಥ್ಯ ಧಾರಾಳ ಸಾಕು. ಆದರೆ ಇಚ್ಛಾಶಕ್ತಿ ಮತ್ತು ಅದೃಷ್ಟ ಇಲ್ಲದೇ ಹೋದರೆ ಯಾರಿದ್ದರೂ ಪ್ರಯೋಜನವಿಲ್ಲ. ಇಷ್ಟು ವರ್ಷ ಆರ್‌ಸಿಬಿ ಎಡವಿದ್ದೇ ಈ ಎರಡು ಕಾರಣದಿಂದ!

ಬ್ಯಾಟಿಂಗೇ ಆರ್‌ಸಿಬಿ ಶಕ್ತಿ
ಬ್ಯಾಟಿಂಗ್‌ ಫೈರ್‌ ಪವರ್‌ ಆರ್‌ಸಿಬಿಯ ಹೆಚ್ಚುಗಾರಿಕೆ. ಪಡಿಕ್ಕಲ್‌, ಕೊಹ್ಲಿ, ಎಬಿಡಿಯ ರೆಡ್‌-ಹಾಟ್‌ ಫಾರ್ಮ್ ಮುಂದುವರಿದರೆ ಆರ್‌ಸಿಬಿಯನ್ನು ತಡೆಯುವುದು ಕಷ್ಟ. ಈ ಸಾಲಿಗೆ ಹೆಚ್ಚುವರಿಯಾಗಿ ಅಲೆನ್‌, ಮ್ಯಾಕ್ಸ್‌ವೆಲ್‌, ಅಜರ್‌, ಸಚಿನ್‌, ಕ್ರಿಸ್ಟಿಯನ್‌ ಇದ್ದಾರೆ.

ಮ್ಯಾಕ್ಸ್‌ವೆಲ್‌ಗೆ ಅಷ್ಟು ದುಡ್ಡು ಸುರಿದು ಖರೀದಿಸಿದ್ದು ಆರ್‌ಸಿಬಿ ಮಾಡಿದ ದೊಡ್ಡ ಬ್ಲಿಂಡರ್‌ ಎಂದೇ ವಿಶ್ಲೇಷಿಸಲಾಗುತ್ತಿದೆ. ಮ್ಯಾಕ್ಸಿ ಕಳೆದ ವರ್ಷ ಅತ್ಯಂತ ಕಳಪೆ ಫಾರ್ಮ್ನಲ್ಲಿದ್ದುದೇ ಇದಕ್ಕೆ ಕಾರಣ. ಆದರೆ ಅನಂತರದ ಬಿಗ್‌ ಬಾಶ್‌ ಲೀಗ್‌ನಲ್ಲಿ ಮ್ಯಾಕ್ಸ್‌ವೆಲ್‌ ನೈಜ ಫಾರ್ಮ್ಗೆ ಮರಳಿದ್ದನ್ನು ಮರೆಯುವಂತಿಲ್ಲ.

Advertisement

ಕಾಸರಗೋಡಿನ ಯುವ ಪ್ರತಿಭೆ ಅಜರುದ್ದೀನ್‌ ಸಯ್ಯದ್‌ ಮುಷ್ತಾಕ್‌ ಅಲಿ ಕೂಟದಲ್ಲಿ 194.54ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಹೊಸ ಭರವಸೆ ಮೂಡಿಸಿದ್ದಾರೆ.

ಪೇಸ್‌ ವಿಭಾಗ ಸಾಮಾನ್ಯ
ಆರ್‌ಸಿಬಿ ಎಷ್ಟೇ ದೊಡ್ಡ ಮೊತ್ತ ಪೇರಿಸಿದರೂ ಇದನ್ನು ಉಳಿಸಿಕೊಡುವಂಥ ಬೌಲಿಂಗ್‌ ಸಾಮರ್ಥ್ಯ ಇಲ್ಲದೇ ಹೋದರೆ ಅಷ್ಟೂ ವ್ಯರ್ಥ. ಹಿಂದಿನ ಅಷ್ಟೂ ಕೂಟಗಳು ಇದಕ್ಕೆ ಸಾಕಷ್ಟು ನಿದರ್ಶನ ಒದಗಿಸಿವೆ. ಈ ಸಮಸ್ಯೆಗೆ ಕೈಲ್‌ ಜಾಮೀಸನ್‌ ಪರಿಹಾರ ಒದಗಿಸಬೇಕಿದೆ. ಹಾಗೆಯೇ ಆಸೀಸ್‌ ತ್ರಿವಳಿಗಳಾದ ಕ್ರಿಸ್ಟಿಯನ್‌, ಸ್ಯಾಮ್ಸ್‌ ಮತ್ತು ಕೇನ್‌ ರಿಚರ್ಡ್‌ಸನ್‌ ಘಾತಕ ಸ್ಪೆಲ್‌ ನಡೆಸಬೇಕಿದೆ. ಆಸ್ಟ್ರೇಲಿಯದಲ್ಲಿ ಮಿಂಚಿದ ಸಿರಾಜ್‌, ಸೈನಿ ಈ ಸಲ ಹೊಸ ಹುರುಪಿನಲ್ಲಿದ್ದಾರೆ.

ಆರ್‌ಸಿಬಿ ಸ್ಪಿನ್‌ ವಿಭಾಗ ಓಕೆ. ಚಹಲ್‌, ಸುಂದರ್‌, ಝಂಪ, ಶಾಬಾಜ್‌ ಇಲ್ಲಿನ ಹುರಿಯಾಳುಗಳು. ಆರ್‌ಸಿಬಿ ತನ್ನ ಲೀಗ್‌ ಪಂದ್ಯಗಳನ್ನು ಚೆನ್ನೈ ಮತ್ತು ಅಹ್ಮದಾಬಾದ್‌ನ ಸ್ಲೋ ಟ್ರ್ಯಾಕ್‌ನಲ್ಲಿ ಆಡಲಿರುವುದರಿಂದ ಇವರಿಂದ ಲಾಭವಾದೀತೆಂಬುದೊಂದು ನಿರೀಕ್ಷೆ.
“ಕಪ್‌ ನಮ್ದೇ’ ಆಗಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಒಂದೇ ಉತ್ತರ, “ಸೀರಿಯಸ್‌ ಆಗಿ ಆಡಬೇಕು!’

ತಂಡ: ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್, ದೇವದತ್ತ ಪಡಿಕ್ಕಲ್‌, ಯಜುವೇಂದ್ರ ಚಹಲ್‌, ಮೊಹಮ್ಮದ್‌ ಸಿರಾಜ್‌, ಕೇನ್‌ ರಿಚರ್ಡ್‌ಸನ್‌, ವಾಷಿಂಗ್ಟನ್‌ ಸುಂದರ್‌, ಪವನ್‌ ದೇಶಪಾಂಡೆ, ಫಿನ್‌ ಅಲೆನ್‌, ಶಾಬಾಜ್‌ ಅಹ್ಮದ್‌, ನವದೀಪ್‌ ಸೈನಿ, ಆ್ಯಡಂ ಝಂಪ, ಕೈಲ್‌ ಜಾಮೀಸನ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ರಜತ್‌ ಪಾಟೀದಾರ್‌, ಸಚಿನ್‌ ಬೇಬಿ, ಮೊಹಮ್ಮದ್‌ ಅಜರುದ್ದೀನ್‌, ಡೇನಿಯಲ್‌ ಕ್ರಿಸ್ಟಿಯನ್‌, ಕೆ.ಎಸ್‌. ಭರತ್‌, ಸುಯಶ್‌ ಪ್ರಭುದೇಸಾಯಿ, ಡೇನಿಯಲ್‌ ಸ್ಯಾಮ್ಸ್‌, ಹರ್ಷಲ್‌ ಪಟೇಲ್‌.

Advertisement

Udayavani is now on Telegram. Click here to join our channel and stay updated with the latest news.

Next