Advertisement
ಜಿಲ್ಲಾಡಳಿತದ ಮೂಲಕ ಆಯಾ ಜಿಲ್ಲೆಗಳಲ್ಲಿ ನೆರೆಯಿಂದ ಸಂಪೂರ್ಣ ಹಾನಿಗೊಂಡ, ಭಾಗಶಃ ಮತ್ತು ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳೆಂಬ ವರ್ಗೀಕರಣ ಮಾಡಿ ಸಂತ್ರಸ್ತರನ್ನು ಗುರುತಿಸ ಲಾಗುತ್ತಿದೆ. ಕಳೆದ ಮೂರು ಮಳೆಗಾಲಗಳಲ್ಲಿ ಪರಿಹಾರಕ್ಕೆ ಅರ್ಹರಾದ ಒಟ್ಟು 54,401 ಫಲಾನುಭವಿಗಳಿಗೆ ನಿಗಮದ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡುವ ಕಾರ್ಯಕ್ಕೆ ಇನ್ನೂ ಚಾಲನೆ ದೊರೆತಿಲ್ಲ.
2019ರಲ್ಲಿ ಅತಿವೃಷ್ಟಿ ಮತ್ತು ಮಹಾರಾಷ್ಟ್ರದ ಅಣೆಕಟ್ಟುಗಳಿಂದ ರಾಜ್ಯಕ್ಕೆ ಹರಿದು ಬಂದ ಪ್ರವಾಹದಿಂದಾಗಿ ನೆರೆ ಹಾನಿಯಾಗಿತ್ತು. ಆಗ ಸರಕಾರ ಒಟ್ಟು 29 ಜಿಲ್ಲೆಗಳ 103 ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಿತ್ತು. ರಾಜೀವ್ ಗಾಂಧಿ ವಸತಿ ನಿಗಮದಡಿ ಒಟ್ಟು 1,37,336 ಮಂದಿಯನ್ನು ನೆರೆ ಸಂತ್ರಸ್ತರೆಂದು ಗುರುತಿಸಿ ಪುನರ್ವಸತಿಗೆ ಕ್ರಮ ತೆಗೆದುಕೊಳ್ಳಲಾಯಿತು. ಆಗ ಸಂತ್ರಸ್ತರಾದ ಒಟ್ಟು 1.37 ಲಕ್ಷ ಮಂದಿಯ ಪೈಕಿ ಸುಮಾರು 1,12,972 ಮಂದಿಗೆ ಪೂರ್ಣ ಪುನರ್ವಸತಿ ಲಭಿಸಿದೆ. 2019ರ ಸುಮಾರು 10 ಸಾವಿರ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಗತಿ ಹಂತದಲ್ಲಿದ್ದು, ಒಟ್ಟು 7,164 ಮನೆಗಳ ನಿರ್ಮಾಣ ಕಾರ್ಯವೇ ಪ್ರಾರಂಭವಾಗಿಲ್ಲ.
Related Articles
2020ರಲ್ಲಿ 39,172 ಮಂದಿ ನೆರೆ ಸಂತ್ರಸ್ತರನ್ನು ಗುರುತಿಸಲಾಗಿದ್ದು, 6,556 ಮಂದಿಗಷ್ಟೇ ಪುನರ್ವಸತಿ ಲಭಿಸಿದೆ. 4,910 ಮಂದಿಯ ಪುನರ್ವಸತಿ ಪ್ರಗತಿಯಲ್ಲಿದ್ದರೆ, 26,061 ಸಂತ್ರಸ್ತರ ಮನೆ ನಿರ್ಮಾಣ ಆರಂಭವಾಗಿಲ್ಲ. 2021ರಲ್ಲಿಯೂ 25,529 ನೆರೆ ಸಂತ್ರಸ್ತರನ್ನು ಪುನರ್ವಸತಿಗೆ ಅನುಮೋದಿಸಲಾಗಿದ್ದು, ಕೇವಲ 114 ಮನೆಗಳನ್ನಷ್ಟೇ ದುರಸ್ತಿಗೊಳಿಸಲಾಗಿದೆ. 3,774 ಮನೆ ಪ್ರಗತಿ ಹಂತದಲ್ಲಿದ್ದರೆ, 21,176 ಮನೆಗಳ ದುರಸ್ತಿ ಕಾರ್ಯ ಕಡತದಲ್ಲೇ ಇದೆ. ಇನ್ನೊಂದೆಡೆ, ಸರಕಾರದ ಮಾಹಿತಿಯಂತೆ 2019 ಮತ್ತು 20ರಲ್ಲಿ ಒಟ್ಟು 1,65,032 ಮನೆಗಳಿಗೆ ವಿವಿಧ ಹಂತಗಳಲ್ಲಿ ಹಣ ಪಾವತಿ ಮಾಡಲಾಗಿದೆ.
Advertisement
ಹಣದ ಕೊರತೆ3 ವರ್ಷಗಳಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಒಟ್ಟು 2.29 ಲಕ್ಷ ಮಂದಿಯ ಪುನರ್ವಸತಿಗೆ 3,884.17 ಕೋ.ರೂ. ಅನುದಾನ ಅಂದಾಜಿಸಲಾಗಿತ್ತು. ಮೂರು ವರ್ಷಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಂತಹಂತವಾಗಿ ಸರಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತಿದೆ. 2019ರಲ್ಲಿ ಕಾಮಗಾರಿ ಪ್ರಾರಂಭಗೊಂಡ ಹಲವು ಮನೆಗಳಿಗೆ ಇನ್ನೂ ಒಂದೆರಡು ಕಂತು ಬಿಡುಗಡೆ ಬಾಕಿ ಇರುವ ಪ್ರಕರಣಗಳಿವೆ. ಸರಕಾರದಿಂದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ 2074.36 ಕೋಟಿ ರೂ. ಈಗ ಮತ್ತೂಂದು ಮಳೆಗಾಲ ಪ್ರಾರಂಭವಾಗುತ್ತಿದ್ದರೂ ಈ ಹಿಂದಿನ ನೆರೆ ಸಂತ್ರಸ್ತರ ಪುನರ್ವಸತಿಗೆ 1,809.81 ಕೋಟಿ ರೂ. ಬೇಕಿದೆ. ರಾಜೀವ್ ಗಾಂಧಿ ವಸತಿ ನಿಗಮ 1,958.53 ಕೋ.ರೂ. ಮತ್ತು ಆಯಾ ಜಿಲ್ಲಾಡಳಿತಗಳು 400 ಕೋಟಿ ರೂ. ಖರ್ಚು ಮಾಡಿದೆ. 2019ರ ಅನಂತರದ ನೆರೆ ಪುನರ್ವಸತಿಗೆ 1,500 ಕೋ.ರೂ.ಗಳಿಗೂ ಅಧಿಕ ಮೊತ್ತ ಅಗತ್ಯವಿದ್ದರೆ, ವಸತಿ ನಿಗಮದಲ್ಲಿ ಲಭ್ಯವಿರುವ ಮೊತ್ತ 115.83 ಕೋ.ರೂ. ಮಾತ್ರ. ಸರಕಾರದ ಮಾನದಂಡಗಳಂತೆ, ಕಳೆದ ಮೂರು ಮಳೆಗಾಲಗಳಲ್ಲಿ ನೆರೆಯಿಂದಾಗಿ ಒಟ್ಟು 2,03,869 ಮಂದಿ ಮನೆಗಳನ್ನು ಕಳೆದುಕೊಂಡು ನೆರೆ ಸಂತ್ರಸ್ತರೆನಿಸಿಕೊಂಡಿದ್ದಾರೆ. 2019ರಿಂದ 2021ರ ವರೆಗೆ ನೆರೆ ಸಂತ್ರಸ್ತರಾದ ಕುಟುಂಬಗಳಿಗೆ ರಾಜೀವ ಗಾಂಧಿ ವಸತಿ ನಿಗಮದ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡುವ ಕಾರ್ಯ ಪ್ರಗತಿಯಲ್ಲಿದೆ. ನೆರೆ ಸಂತ್ರಸ್ತರ ಪುನರ್ವಸತಿ
ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳ ಖಾತೆಗಳಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಆಗಾಗ ಪ್ರಗತಿ ಪರಿಶೀಲನೆ ನಡೆಯುತ್ತಿದ್ದು, ವಿಳಂಬವಾದ ಕಡೆ ಅಗತ್ಯ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳ ಲಾಗುವುದು. ಮುಖ್ಯಮಂತ್ರಿಗಳು ಕೂಡ ಆದ್ಯತೆ ಮೇರೆಗೆ ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸುವ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
-ಡಾ| ಎಸ್. ಬಸವರಾಜು
ವ್ಯವಸ್ಥಾಪಕ ನಿರ್ದೇಶಕರು, ರಾಜೀವ ಗಾಂಧಿ ವಸತಿ ನಿಗಮ -ಸುರೇಶ್ ಪುದುವೆಟ್ಟು