Advertisement
ನಿದ್ದೆ ಬಾರದೆ ಅವನು ಇನ್ನೊಮ್ಮೆ ಮಗ್ಗುಲು ಬದಲಾಯಿಸಿದ. ಅಸಹನೆಯಿಂದ ಕೈ ಚಾಚಿ ಮೊಬೈಲ್ ತೆಗೆದ. ಇನ್ನೂ ಬೆಳಗ್ಗಿನ ಜಾವ 3 ಗಂಟೆ ತೋರಿಸಿತು. “2.30ಕ್ಕೆ ಮಲಗಿದ್ದು, ಇನ್ನೂ ಅರ್ಧ ಗಂಟೆ ಆಯಿತಷ್ಟೆಯಾ?ಸಮಯವೂ ನನ್ನ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ’ ಮನಸ್ಸಿನಲ್ಲೇ ಹೇಳಿಕೊಂಡ. ಇನ್ನು ನಿದ್ದೆ ಹತ್ತಿರ ಸುಳಿಯದು ಎಂದು ಎದ್ದು ಬಾಲ್ಕನಿಯಲ್ಲಿ ಶತಪಥ ಹಾಕತೊಡಗಿದ.
Related Articles
Advertisement
ಗೆಳೆಯ ಅವನನ್ನು ಕರೆದುಕೊಂಡು ಕಾಡಂಚಿಗೆ ಬಂದಿದ್ದ. ಅದು ಶಿಶಿರ ಋತು. ಗಿಡ ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿದ್ದವು. ಬಂಡೆಯೊಂದರಲ್ಲಿ ಕುಳಿತ ಮೇಲೆ ಗೆಳೆಯ ಮಾತನಾಡತೊಡಗಿದ, ಹಸುರಿನಿಂದ ನಳನಳಿಸುತ್ತಿದ್ದ ಗಿಡ, ಮರಗಳೆಲ್ಲ ಈಗ ಸೊರಗಿವೆ. ಹಾಗಂತ ಇದು ಅವುಗಳ ಕೊನೆ ಅಲ್ಲ. ಈ ಕಷ್ಟದ ದಿನಗಳನ್ನು ಕಳೆದರೆ ಮತ್ತೆ ಸಮೃದ್ಧಿಯ ದಿನಗಳು ಬರುತ್ತವೆ. ವಸಂತ ಬಂದಾಗ ಚಿಗುರೊಡೆಯುತ್ತವೆ. ನಮ್ಮ ಜೀವನವೂ ಅದೇ ರೀತಿ. ಕಷ್ಟದ ದಿನಗಳು ಬರುತ್ತವೆ. ಹಾಗಂತ ಅದೇ ಕೊನೆಯಲ್ಲ. ಹಿಂದೆ ಹಿರಿಯರು ಹೇಳುತ್ತಿದ್ದಂತೆ ದುಃಖ, ಕಷ್ಟ ಮನುಷ್ಯರಿಗಲ್ಲದೆ ಬಂಡೆ, ಮರಗಳಿಗೆ ಬರುತ್ತವೆಯೇ? ನಿಧಾನವಾಗಿ ಗೆಳೆಯನ ಮಾತುಗಳು ಇವನ ಮನಸ್ಸಿನಾಳಕ್ಕೆ ಇಳಿಯತೊಡಗಿದವು. ಗೆಳೆಯ ಮಾತು ಮುಂದುವರಿಸಿದ, ನೋಡು ಬ್ರೋ. ನೀನು ಎಡವಿ ಬಿದ್ದಿದ್ದಿಯಾ. ಹಾಗಂತ ಇದೇ ಕೊನೆ ಅಂತಲ್ಲ. ಅದನ್ನು ಮೀರಿ ಎದ್ದು ಬರಬೇಕು. ಹಿಂದೆ ಫೀನಿಕ್ಸ್ ಹಕ್ಕಿಯ ಕಥೆ ಕೇಳಿದ್ದಿಯಲ್ಲ? ಅದರಂತೆ ಕಷ್ಟಗಳನ್ನು ಮೆಟ್ಟಿ ಎದ್ದು ಬರಬೇಕು. ನಾವು ಚೆಂಡನ್ನು ನೆಲಕ್ಕೆ ಬಡಿದರೆ ಏನಾಗುತ್ತದೆ ಹೇಳು. ಪುಟಿದೇಳುತ್ತದೆ ತಾನೆ? ಅದರಂತೆ ಇದು. ಈ ಕಷ್ಟಗಳೆಲ್ಲ ನಿನ್ನ ಸಾಮರ್ಥ್ಯಕ್ಕೆ ಒಡ್ಡಿದ ಪರೀಕ್ಷೆ ಅಂದುಕೋ. ಇಷ್ಟಕ್ಕೂ ನೀನು ಯಾವುದೇ ತಪ್ಪು ಮಾಡಿಲ್ಲವಲ್ಲಾ? ಮತ್ಯಾಕೆ ಕೊರಗುತ್ತೀಯಾ? ಇವನು ಆಲೋಚಿಸತೊಡಗಿದ. ಕ್ರಮೇಣ ಮುಖದಲ್ಲಿನ ಚಿಂತೆಯ ಗೆರೆಗಳು ಮರೆಯಾಗತೊಡಗಿತು. ಬಾ ಹೋಗೋಣ ಹೊಸ ಉತ್ಸಾಹದಿಂದ ಎದ್ದುನಿಂತು ಬೈಕ್ ಕೀ ತಗೊಂಡ. ಗೆಳೆಯನ ಮುಖದಲ್ಲಿ ನಗು ಮೂಡಿತು.
ಸೋಲು ಕೊನೆಯಲ್ಲಪ್ರತಿ ಬಾರಿ ಗೆಲುವು, ಯಶಸ್ಸು ನಮ್ಮದಾಗುತ್ತದೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ ಪ್ರತಿ ಬಾರಿಯೂ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಭಗವದ್ಗೀತೆಯಲ್ಲಿ ಹೇಳಿದಂತೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಸುಮ್ಮನಿದ್ದು ಬಿಡಬೇಕು. ಅದರ ಫಲಾಫಲದ ನಿರೀಕ್ಷೆಯಲ್ಲಿ ಇರಬಾರದು. ಅತಿಯಾದ ನಿರೀಕ್ಷೆ, ಇತರರೊಂದಿಗಿನ ಹೋಲಿಕೆ ನೋವು ತರುತ್ತದೆ ಎನ್ನುವುದು ನೆನಪಿರಲಿ. ಸಂಕೀರ್ಣಗೊಳಿಸಬೇಡಿ
ಜೀವನ ಮತ್ತು ಬಂಡಿ ಮಧ್ಯೆ ಬಹಳಷ್ಟು ಸಾಮ್ಯತೆ ಇದೆ. ಚಕ್ರದ ಒಂದು ಭಾಗ ಒಮ್ಮೆ ಮೇಲಿದ್ದರೆ ಇನ್ನೊಮ್ಮೆ ಕೆಳಗೆ ಬರಲೇ ಬೇಕು. ಹಾಗಂತ ಚಕ್ರ ನಿಶ್ಚಲವಾಗಿದ್ದರೆ ಬಂಡಿ ಮುಂದೆ ಸಾಗದು. ಅದೇ ರೀತಿ ಜೀವನವೂ. ಸಿಹಿ, ಕಹಿ ಅನುಭವಗಳ ಮಿಶ್ರಣಗಳಿಂದ ಕೂಡಿರುವುದೇ ಜೀವನ. ಇಲ್ಲಿ ಯಾವ ಭಾವವೂ ಶಾಶ್ವತವಲ್ಲ. ಬಂದದ್ದನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಸು ನಮ್ಮದಾದರೆ ಜೀವನ ಸುಲಭ. ಇಲ್ಲದ ಯೋಚನೆ, ಋಣಾತ್ಮಕ ಚಿಂತನೆಗಳಿಂದ ಸರಳ ಜೀವನವನ್ನು ನಾವೇ ಸಂಕೀರ್ಣಗೊಳಿಸುತ್ತೇವಷ್ಟೆ. -ರಮೇಶ್ ಬಳ್ಳಮೂಲೆ