ನವದೆಹಲಿ: ಕೋವಿಡ್ ನಿಂದಾಗಿ ಯುಪಿಎಸ್‌ಸಿ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಂಥ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದೆ.
ಇಂತಹ ಅಭ್ಯರ್ಥಿಗಳಿಗೆ ಒಂದು ಬಾರಿಯ ವಿನಾಯ್ತಿಯೆಂಬಂತೆ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಲು ಸಿದ್ಧರಿದ್ದೇವೆ ಎಂದು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಅರ್ಹ ವಯೋಮಿತಿಯ ಒಳಗಿನವರಿಗೆ ಮಾತ್ರ ಈ ಅವಕಾಶ ಸಿಗಲಿದೆ ಎಂದೂ ಸ್ಪಷ್ಟಪಡಿಸಿದೆ.
ಅರ್ಹ ವಯೋಮಿತಿಯನ್ನು ದಾಟದಿರುವ ಹಾಗೂ ತಮ್ಮ ಕೊನೆಯ ಪ್ರಯತ್ನವಾಗಿ 2020ರ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮಾತ್ರವೇ ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ ಎಂದೂ ಸರ್ಕಾರ ತಿಳಿಸಿದೆ. ಇದನ್ನು ಸ್ವಾಗತಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿತು.
ಇದನ್ನೂ ಓದಿ:ಉಪ್ಪಿನಂಗಡಿ: ಸಿಮೆಂಟ್ ಮಿಕ್ಸರ್ ವಾಹನ- ಬೈಕ್ ನಡುವೆ ಅಪಘಾತ, ಮಹಿಳೆ ಸಾವು
ಕಳೆದ ವರ್ಷ ಮೇ 31ರಂದು ನಡೆಯಬೇಕಿದ್ದ ಯುಪಿಎಸ್‌ಪಿ ಪ್ರಾಥಮಿಕ ಪರೀಕ್ಷೆಯನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಿ ಅ.4ರಂದು ನಡೆಸಲಾಗಿತ್ತು. ಆದರೆ, ಸೋಂಕು ಹಾಗೂ ಲಾಕ್‌ಡೌನ್‌ನ ಒತ್ತಡದಿಂದಾಗಿ ತಮಗೆ ಪರೀಕ್ಷೆಗೆ ಸೂಕ್ತ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಮತ್ತೊಂದು ಅವಕಾಶ ನೀಡಿ ಎಂದು ಕೋರಿ ಅಭ್ಯರ್ಥಿಯೊಬ್ಬರು ಸುಪ್ರೀಂ ಮೆಟ್ಟಿಲೇರಿದ್ದರು.