Advertisement

ಅಕ್ರಮ ಸಕ್ರಮಕ್ಕೆ ಮತ್ತೊಂದು ಅವಕಾಶ

03:46 PM May 09, 2017 | |

ಧಾರವಾಡ: ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಕೂಡಲೇ ಕಂದಾಯ ಉಪವಿಭಾಗಾಧಿಕಾರಿಗಳಿಗೆ ನಮೂನೆ 53 ರಲ್ಲಿ ಅರ್ಜಿ ಸಲ್ಲಿಸಿ ತಮ್ಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಅರ್ಜಿ ತಿರಸ್ಕೃತಗೊಂಡವರು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. 

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬರ ಪರಿಹಾರ, ಅರಣ್ಯ ಹಕ್ಕು ಸಮಿತಿ, ನಮೂನೆ 94 ಸಿ-94 ಸಿಸಿ ಹಾಗೂ 50-53ರ ಅಡಿಯಲ್ಲಿ ವಿಲೇವಾರಿಯಾಗಿರುವ ಹಾಗೂ ಬಾಕಿಯಿರುವ ಪ್ರಕರಣಗಳ ಬಗ್ಗೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಸುಮಾರು 13 ಸಾವಿರ ಅರ್ಜಿಗಳು ಬಂದಿದ್ದು, ಅವುಗಳಲ್ಲಿ 4 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು. 

ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ 1,53,606 ಹೆಕ್ಟೇರ್‌ ಕ್ಷೇತ್ರದಲ್ಲಿ ಬೆಳೆಹಾನಿಯಾಗಿದೆ. 104.13 ಕೋಟಿ ರೂಪಾಯಿಗಳ ಪರಿಹಾರ ಧನ ಕೋರಲಾಗಿದೆ. 2016-17ನೇ ಸಾಲಿನ ಮುಂಗಾರು ಬೆಳೆ ಹಾನಿಗೊಳಗಾದ 78,904 ರೈತರಿಗೆ 53 ಕೋಟಿ 40 ಲಕ್ಷ ರೂ. ಗಳ ಪರಿಹಾರ ಪಾವತಿಸಲಾಗಿದೆ ಎಂದರು. 

ಜಿಲ್ಲೆಯ ಒಟ್ಟು 18 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಯಾವುದೇ ನಗರ ಅಥವಾ ಗ್ರಾಮಗಳಲ್ಲಿ ಸಮಸ್ಯೆ ತಲೆದೋರಿದರೆ ಕೂಡಲೇ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಪೂರೈಕೆಗಾಗಿ 47.26 ಕೋಟಿ ರೂ.ಗಳನ್ನು ಜಿಲ್ಲೆಗೆ ಒದಗಿಸಲಾಗಿದೆ. 

ಇದರಲ್ಲಿ ಈಗಾಗಲೇ ಶೇ.85ರಷ್ಟು ಹಣ ಖರ್ಚಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಹಣ ಒದಗಿಸಲಾಗುವುದು ಎಂದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬ ಜಾಬ್‌ ಕಾರ್ಡ್‌ದಾರರಿಗೆ ಕನಿಷ್ಠ ನೂರು ದಿನಗಳ ಉದ್ಯೋಗ ಒದಗಿಸುವ ಅಂದಾಜಿನೊಂದಿಗೆ ಬಜೆಟ್‌ ಪ್ರಸ್ತಾವನೆಗಳನ್ನು ಅಧಿಕಾರಿಗಳು ಸಲ್ಲಿಸಬೇಕು.

Advertisement

ಉದ್ಯೋಗ ಎಲ್ಲರ ಹಕ್ಕಾಗಿದೆ. ಪಂಚಾಯತರಾಜ್‌ ವ್ಯವಸ್ಥೆಯಡಿ ಯಾವುದೇ ಗ್ರಾಪಂಗಳು ಉತ್ತಮವಾದ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿದರೆ ಸಾಕಷ್ಟು ಕೆಲಸ ಮಾಡಲು ಸಾಧ್ಯವಿದೆ ಎಂದರು. ಕಲಘಟಗಿ ತಾಲೂಕು ಡವಗಿ ನಾಲಾ ಮತ್ತು ಬೆಣಚಿ ಕೆರೆಯ ಹೂಳೆತ್ತಲು ತ್ವರಿತ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಸಂಸದ ಪ್ರಹ್ಲಾದ ಜೋಶಿ ಸೂಚಿಸಿದರು. 

ಜಿಲ್ಲೆಯಲ್ಲಿನ 27 ಸಾವಿರಕ್ಕೂ ಅಧಿಕ ಜಾನುವಾರುಗಳಿಗೆ 50,854 ಮೆ.ಟನ್‌ ಮೇವು ಲಭ್ಯವಿದೆ. 16 ಮೇವು ಬ್ಯಾಂಕ್‌ ಗಳನ್ನು ತೆರೆಯಲಾಗಿದೆ. ಅಲ್ಲಿ 9549 ಮೆ. ಟನ್‌ ಮೇವು ಸಂಗ್ರಹಿಸಲಾಗಿತ್ತು. 9070 ಮೆ.ಟನ್‌ ಮೇವು ಮಾರಾಟವಾಗಿದೆ. ಮೇವು ಬೆಳೆಯಲು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಜಮೀನು ಗುರುತಿಸಿ ವಿನ ಕಿರು ಪೊಟ್ಟಣಗಳನ್ನು ಪೂರೈಸಲಾಗಿದೆ ಎಂದು ಜಿಲ್ಲಾಧಿಕಾರಿ  ಡಾ| ಎಸ್‌.ಬಿ.ಬೊಮ್ಮನಹಳ್ಳಿ ಸಭೆಗೆ ವಿವರಿಸಿದರು. 

ನರೇಗಾ ಯೋಜನೆಯಲ್ಲಿ ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ತ್ವರಿತ ಒಪ್ಪಿಗೆ ಒದಗಿಸಬೇಕು ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಸಭೆಯಲ್ಲಿ ಮನವಿ ಮಾಡಿಕೊಂಡರು. ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next