“ಬಾಜಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಈಗ ಹೊಸ ಚಿತ್ರವೊಂದಕ್ಕೆ ಹೀರೋ ಆಗಿದ್ದಾರೆ. ಹೌದು, “12 ಎಎಂ ಮಧ್ಯರಾತ್ರಿ’ ಚಿತ್ರದ ಬಳಿಕ ಅಭಿಮನ್ಯು ಕಾಶಿನಾಥ್ ಯಾವ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಕಥೆ ಬಂದಿದ್ದರೂ, ಯಾವುದನ್ನೂ ಅವರು ಅಂತಿಮ ಮಾಡಿರಲಿಲ್ಲ. ಈ ನಡುವೆ ಸಿಕ್ಕ ಗ್ಯಾಪ್‌ನಲ್ಲಿ ಅವರು ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿದ್ದರು. ಈಗ ತಮಗೆ ಸರಿಹೊಂದುವ ಕಥೆ ಮತ್ತು ಪಾತ್ರ ಸಿಕ್ಕಿರುವ ಹಿನ್ನೆಲೆಯಲ್ಲಿ ಅಭಿಮನ್ಯು ಕಾಶಿನಾಥ್ ಹೊಸ ಚಿತ್ರದಲ್ಲಿ ನಟಿಸುವ ಮೂಲಕ ಇನ್ನೊಂದು ಇನ್ನಿಂಗ್ಸ್ ಶುರು ಮಾಡಲು ಹೊರಟಿದ್ದಾರೆ.
ಅಂದಹಾಗೆ, ಅಭಿಮನ್ಯು ಕಾಶಿನಾಥ್ ಅಭಿನಯಿಸಲಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರವನ್ನು ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಕಿರಣ್ ಸೂರ್ಯ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ “ದೇವಕಿ’ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಕಿರಣ್ ಸೂರ್ಯ, ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕದಿಂದಲೂ ಹಲವು ಚಿತ್ರಗಳಲ್ಲಿ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆ ಅನುಭವದ ಮೇಲೆ ಈಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಅಭಿಮನ್ಯು ಕಾಶಿನಾಥ್ ಅವರ ಚಿತ್ರವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ.
ಇನ್ನು, ಸುದರ್ಶನ ಆರ್ಟ್ಸ್ ಬ್ಯಾನರ್‌ನಲ್ಲಿ ನಂದೀಶ್ ಎಂ.ಸಿ.ಗೌಡ ಮತ್ತು ಜಿತಿನ್ ಜಿ. ಪಟೇಲ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರಿಗೂ ಇದು ಮೊದಲ ನಿರ್ಮಾಣದ ಚಿತ್ರ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಹೇಳುವ ಕಿರಣ್ ಸೂರ್ಯ, “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಆರಂಭದಿಂದ ಅಂತ್ಯದವರೆಗೂ ಹೊಸ ಬಗೆಯ ಅಂಶಗಳೊಂದಿಗೆ ಕುತೂಹಲ ಕೆರಳಿಸುತ್ತ ಹೋಗುತ್ತದೆ. ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ಇಲ್ಲಿ ಹೊಸ ಅಂಶಗಳು ನೋಡುಗರನ್ನು ಸೆಳೆಯಲಿವೆ’ ಎಂಬ ಗ್ಯಾರಂಟಿ ಕೊಡುವ ಕಿರಣ್ ಸೂರ್ಯ, ಚಿತ್ರದ ಪಾತ್ರಕ್ಕಾಗಿ ಅಭಿಮನ್ಯು ಕಾಶಿನಾಥ್ ಅವರು ವಿಶೇಷವಾಗಿ ತಯಾರಾಗುತ್ತಿದ್ದಾರೆ.
ಪಾತ್ರಕ್ಕೆ ದಾಡಿ, ಹೇರ್‌ಸ್ಟೈಲ್ ಎಲ್ಲವೂ ಹೊಸರೀತಿಯಲ್ಲಿರಲಿದೆ. ಇನ್ನು, ಚಿತ್ರದಲ್ಲಿ ಮುಖ್ಯವಾಗಿ ನಾಲ್ಕು ಪಾತ್ರಗಳು ಬರಲಿದ್ದು, ನಾಯಕಿಯ ಆಯ್ಕೆ ಪ್ರಕ್ರಿಯೆ ಈಗಷ್ಟೇ ಶುರುವಾಗಿದೆ. ಇನ್ನಷ್ಟು ಪ್ರತಿಭೆಗಳಿಗೆ ಆಡಿಷನ್ ನಡೆಸಿ, ಆಯ್ಕೆ ಮಾಡಿಕೊಳ್ಳಲಾಗುತ್ತದೆ’ ಎಂದು ವಿವರ ಕೊಡುತ್ತಾರೆ ಕಿರಣ್ ಸೂರ್ಯ. ಮಡಿಕೇರಿ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡಕ್ಕಿದೆ. ಚಿತ್ರಕ್ಕೆ ಗೌತಮ್ ಮನು ಛಾಯಾಗ್ರಹಣವಿದೆ. ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಎರಡು ಹಾಡುಗಳು ಇರಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.