ಅಮೃತ್ ಸರ್:ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ಮತ್ತೊಬ್ಬ ಹಿಂದೂ ಯುವತಿಯನ್ನು ಅಪಹರಿಸಿರುವ ಘಟನೆ ನಡೆದಿದೆ ಎಂದು ಆಂಗ್ಲ ದೈನಿಕದ ಅಂತರ್ಜಾಲ ತಾಣಗಳು ವರದಿ ಮಾಡಿವೆ.
ಸಿಂಧ್ ಪ್ರಾಂತ್ಯದಲ್ಲಿ ಕಳೆದ ಒಂದು ತಿಂಗಳೊಳಗೆ ಸುಮಾರು ಏಳು ಮಂದಿ ಹಿಂದೂ ಯುವತಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ವರದಿ ವಿವರಿಸಿದ್ದು, ಏತನ್ಮಧ್ಯೆ ಇಬ್ಬರು ಹಿಂದೂಗಳ ಹತ್ಯೆ ಕೂಡಾ ನಡೆದಿದೆ ಎಂದು ತಿಳಿಸಿದೆ.
ಸೋಮವಾರ ತಡರಾತ್ರಿ ಸಿಂಧ್ ನ ಬಾಡಿನ್ ಜಿಲ್ಲೆಯಲ್ಲಿ 16 ವರ್ಷದ ಮಾಲಾ ಕುಮಾರಿ ಮೆಘಾವರ್ ಎಂಬ ಹಿಂದೂ ಬಾಲಕಿಯನ್ನು ಮನೆಯಿಂದಲೇ ಅಪಹರಿಸಿಕೊಂಡು ಹೋಗಲಾಗಿದೆ ಎಂದು ವರದಿ ಹೇಳಿದ್ದು, ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿರುವುದಾಗಿ ಹೆಸರು ಹೇಳಲು ಇಚ್ಛಿಸದ ಹಿಂದೂ ಮುಖಂಡರೊಬ್ಬರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಅಲ್ಲದೇ ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ, ಮತಾಂತರಗೊಳಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯರು ಹಾಗೂ ಅವರ ಗಂಡಂದಿರು ಕೋರ್ಟ್ ಮೊರೆ ಹೋಗಿ ರಕ್ಷಣೆ ಒದಗಿಸುವಂತೆ ಕೋರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ, ಇಸ್ಲಾಮಾಬಾದ್ ಡೆಪ್ಯುಟಿ ಕಮಿಷನರ್ ಮತ್ತು ಮಾನವ ಹಕ್ಕುಗಳ ನಿರ್ದೇಶಕರ ಕಸ್ಟಡಿಗೆ ಇವರನ್ನು ವಹಿಸಿದ್ದಾರೆ. ಅಲ್ಲದೇ ಏಪ್ರಿಲ್ 2ರಂದು ತನಿಖಾ ವರದಿ ಸಲ್ಲಿಸಬೇಕೆಂದು ಪಾಕ್ ಕೋರ್ಟ್ ಸೂಚಿಸಿತ್ತು.