Advertisement

ಬಂತು ಮತ್ತೂಂದು ಗೊಮ್ಮಟಮೂರ್ತಿ!

03:15 PM Jan 15, 2018 | Team Udayavani |

ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲಸಿರುವ 58.8 ಎತ್ತರದ ವಿಶ್ವ ವಿಖ್ಯಾತ ಶ್ರೀ ಬಾಹುಬಲಿಮೂರ್ತಿಗೆ ಫೆ.17ರಿಂದ ನಡೆಯುವ 82ನೇ ಮಹಾಮಸ್ತಕಾಭಿಷೇಕಕ್ಕೆ ಭರದ ಸಿದ್ಧತೆ ನಡೆಯತ್ತಿದೆ. ಈ ಸಂದರ್ಭದಲ್ಲಿಯೇ 12 ಅಡಿ ಬಾಹುಬಲಿಮೂರ್ತಿಯ ಪ್ರತಿಷ್ಠಾಪನೆಯ ಸಂಭ್ರಮವೂ ಶ್ರವಣಬೆಳಗೊಳದಲ್ಲಿ ಆರಂಭವಾಗಿದೆ. ಮಿನಿ ಬಾಹುಬಲಿಮೂರ್ತಿ ಈ ಬಾರಿಯ ಮಹಾಮಸ್ತಕಾಭಿಷೇಕದ ಪ್ರಮುಖ ಆಕರ್ಷಣೆ ಆಗಲಿದೆ.

Advertisement

ನಾಲ್ಕು ವರ್ಷಗಳಿಂದ ರಾಮನಗರ ಜಿಲ್ಲೆ ಬಿಡದಿ ಬಳಿ 12 ಅಡಿ ಬಾಹುಬಲಿಮೂರ್ತಿಯ ಕೆತ್ತನೆ ನಡೆಯುತ್ತಿತ್ತು. ಭಾನುವಾರ ಸಂಕ್ರಮಣದ ಶುಭ ಸಂಭ್ರಮದಲ್ಲಿ ಹೊಸ ಮೂರ್ತಿ ಶ್ರವಣಬೆಳಗೊಳದ ಪುರ ಪ್ರವೇಶ ಮಾಡಿದೆ. ಸಂಜೆ 7.30ರ ವೇಳೆಗೆ ಲಾರಿಯಲ್ಲಿ ಶ್ರವಣಬೆಳಗೊಳ ಪ್ರವೇಶ ಮಾಡಿದ ಗೊಮ್ಮಟನ ಹೊಸ ಮೂರ್ತಿಯನ್ನು ಶ್ರವಣಬೆಳಗೊಳದ ಜೈನ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನ ಅನುಸರಿಸಿ ಸ್ವಾಗತಿಸಿದರು.

ಏಕೆ ಮಿನಿ ಬಾಹುಬಲಿ ಮೂರ್ತಿ?: ಕ್ರಿ.ಶ. 980ರಲ್ಲಿ ಶ್ರವಣಬೆಳಗೊಳದ ವಿಂಧ್ಯಗಿರಿಯ ತುತ್ತ ತುದಿಯಲ್ಲಿ ನಿರ್ಮಾಣವಾದ 58.8 ಅಡಿ ಎತ್ತರದ ಏಕ ಶಿಲಾ ಶ್ರೀ ಗೊಮ್ಮಟಮೂರ್ತಿ ಭೂ ಮಟ್ಟದಿಂದ ಸುಮಾರು 438 ಅಡಿ ಎತ್ತರದಲ್ಲಿದೆ. ಅಷ್ಟು ಎತ್ತರದ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿಯೇ ಜಗದ್ವಿಖ್ಯಾತ ಶ್ರೀ ಗೊಮ್ಮಟೇಶ್ವರ ಮೂರ್ತಿಯ ದರ್ಶನ ಮಾಡಬೇಕು. ಆದರೆ ಅಷ್ಟು ಎತ್ತರದ ಬೆಟ್ಟ ಹತ್ತಲಾಗದ ವಯೋವೃದ್ಧರು, ರೋಗಿಗಳು ಬಾಹುಬಲಿಮೂರ್ತಿಯ ದರ್ಶನದಿಂದ ವಂಚಿತರಾಗಬಾರದೆಂದು 10.1 ಅಡಿ ಎತ್ತರದ (ಪೀಠ ಸೇರಿ 12 ಅಡಿ) ಗೊಮ್ಮಟ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವಿಂಧ್ಯಗಿರಿಯಲ್ಲಿ ನೆಲಸಿರುವ ಗೊಮ್ಮಟಮೂರ್ತಿ ದರ್ಶನ ಮಾಡಲು ಸಾಧ್ಯವಾಗದವರು ಮಿನಿ ಗೊಮ್ಮಟಮೂರ್ತಿ ದರ್ಶನ ಮಾಡಲಿ ಎಂಬುದು ಉದ್ದೇಶ. ಶ್ರವಣಬೆಳಗೊಳದ ವಿಂಧ್ಯಗಿರಿ ಪ್ರವೇಶದ್ವಾರದ ಸಮೀಪವೇ ಇರುವ ಜೈನ ಮಠದ ಆವರಣದಲ್ಲಿ ಹೊಸ ಗೊಮ್ಮಟಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಮಹಾ ಮಸ್ತಕಾಭಿಷೇಕ ಆರಂಭ ಆಗುವುದರೊಳಗೆ ಶುಭ ಮುಹೂರ್ತದಲ್ಲಿ ಹೊಸ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ.

ಯಾರ ಕೊಡುಗೆ?: ಬೆಂಗಳೂರಿನ ವ್ಯಾಪಾರೋದ್ಯಮಿ ಮಹಾವೀರ ಪ್ರಸಾದ್‌ ಜೈನ್‌ ಹಾಗೂ ನವೀನ್‌ ಕುಮಾರ್‌ ಜೈನ್‌ ಸಹೋದರರು 12 ಅಡಿ ಗೊಮ್ಮಟಮೂರ್ತಿಯನ್ನು ಕೊಡುಗೆ ನೀಡಿದ್ದಾರೆ. ರಾಜಸ್ಥಾನದಿಂದ ತರಿಸಿದ ಶಿಲೆಯಲ್ಲಿ
ಬಿಡದಿ ಬಳಿ ಖ್ಯಾತ ಶಿಲ್ಪಿ ಅಶೋಕ್‌ ಗುಡಿಗಾರ್‌ ಸುಂದರ ಮೂರ್ತಿಯನ್ನು ರೂಪಿಸಿದ್ದಾರೆ. ಗುಡಿಗಾರ್‌ ಅವರೊಂದಿಗೆ ಗೌತಮ್‌ ಮತ್ತು ಕುಮಾರ್‌ ಸತತ 4 ವರ್ಷಗಳಿಂದ ನಿರ್ಮಿಸಿದ್ದಾರೆ.

ಹೊಸ ಗೊಮ್ಮಟಮೂರ್ತಿಯೊಂದಿಗೆ ಶ್ರವಣಬೆಳಗೊಳಕ್ಕೆ ಆಗಮಿಸಿದ ಶಿಲ್ಪಿಗಳನ್ನು ಶ್ರೀ ಚಾರುಕೀರ್ತಿ ಸ್ವಾಮೀಜಿ ಸನ್ಮಾನಿಸಿದರು. ಶ್ರವಣಬೆಳಗೊಳಕ್ಕೆ ಏನಾದರೂ ಕೊಡುಗೆ (ಹರಕೆ ರೂಪದಲ್ಲಿ) ನೀಡಬೇಕೆಂದು ಪ್ರಸಾದ್‌ ಜೈನ್‌ ಕುಟುಂಬದವರು ನಿಶ್ಚಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ 12 ಅಡಿ ಬಾಹುಬಲಿಮೂರ್ತಿಯನ್ನೇ ಕೊಡುಗೆ ನೀಡಲು ನಿರ್ಧರಿಸಿದೆವು ಎಂದು ಪ್ರಸಾದ್‌ ಜೈನ್‌ ಅವರ ಕುಟುಂಬದ ಪ್ರಸಾದ್‌ ಜೈನ್‌ ಶ್ರವಣಬೆಳಗೊಳದಲ್ಲಿ ಭಾನುವಾರ ಮಾಹಿತಿ ನೀಡಿದರು. 

Advertisement

ಅಂತೂ ಶ್ರವಣಬೆಳಗೊಳದಲ್ಲಿ ವಿಂಧ್ಯಗಿರಿಯಲ್ಲಿ ನೆಲೆನಿಂತಿರುವ 58.8 ಎತ್ತರದ ಏಕ ಶಿಲಾ ಗೊಮ್ಮಟಮೂರ್ತಿಯ ಜೊತೆಗೆ ಇನ್ನು ಮುಂದೆ 12 ಅಡಿ ಗೊಮ್ಮಟಮೂರ್ತಿಯೂ ಮತ್ತೂಂದು ಆಕರ್ಷಣೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next