Advertisement

ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೂಂದು ನೆರೆ ಸವಾಲು

11:28 AM Jun 07, 2020 | Suhan S |

ಬೆಳಗಾವಿ: ಕಳೆದ ವರ್ಷ ಪ್ರವಾಹದ ಸಂಕಷ್ಟಕ್ಕೆ ನಲುಗಿ, ಕೊಚ್ಚಿ ಹೋಗಿದ್ದ ಬದುಕು ಕಟ್ಟಿಕೊಳ್ಳುವುದಿರಲಿ, ಅಬ್ಟಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಈಗ ಮತ್ತೂಂದು ಸವಾಲಿಗೆ ಎದೆ ಒಡ್ಡಿ ನಿಲ್ಲಬೇಕಾದ ಸ್ಥಿತಿ ಇದೆ. ಕೃಷ್ಣಾ ತೀರದ ಸಂತ್ರಸ್ತರಿಗೆ ಇನ್ನೂ ಪುನರ್ವಸತಿ ಇಲ್ಲದೇ ಅಳಿದುಳಿದ ಮನೆಯಲ್ಲಿಯೇ ಜೀವನ ದೂಡುತ್ತ ಕಣ್ಣೆದುರು ಸಾಲು ಸಾಲು ಪ್ರಶ್ನೆಗಳು ಕಾಡುತ್ತಿವೆ.

Advertisement

ಕೃಷ್ಣಾ ತೀರದ ಅಥಣಿ, ಕಾಗವಾಡ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಹಳ್ಳಿಗಳು ಪ್ರವಾಹದ ಹೊಡೆತಕ್ಕೆ ನಲುಗಿ ಹೋಗಿವೆ. ಧಾರಾಕಾರ ಮಳೆ ಹಾಗೂ ನದಿ ಪ್ರವಾಹದಿಂದ ಮನೆಗಳು ಧರೆಗುರುಳಿವೆ. ಆದರೆ ಇನ್ನೂ ಆ ಸೂರು ಕಟ್ಟಿಕೊಳ್ಳದೇ ಜನರು ಅತಂತ್ರರಾಗಿದ್ದಾರೆ. ಇತ್ತ ಮನೆಗಳೂ ಇಲ್ಲ. ಸರ್ಕಾರದ ಪರಿಹಾರವೂ ಇಲ್ಲದೇ ಬದುಕು ಚಿಂತಾಜನಕ ಸ್ಥಿತಿಯಲ್ಲಿದೆ.

ತಾತ್ಕಾಲಿಕ ಮನೆಗಳೇ ಆಶ್ರಯ: ಕಳೆದ ಅಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಅನೇಕ ಮನೆಗಳು ಬಿದ್ದು ಜನರು ಅತಂತ್ರರಾಗಿದ್ದಾರೆ. ಆಗ ತಾತ್ಕಾಲಿಕ ಶೆಡ್‌ ಹಾಗೂ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಜೀವನ ಸಾಗಿಸಿದ್ದಾರೆ. ಮನೆ ಬಿದ್ದವರಿಗೆ ಎ, ಬಿ ಹಾಗೂ ಸಿ ಕೆಟೆಗರಿ ಎಂದು ವಿಂಗಡಿಸಿ ಸೂರು ಕಟ್ಟಿಕೊಳ್ಳಲು ಸರ್ಕಾರ ಪರಿಹಾರ ನೀಡುತ್ತಿದೆ.

ಸಮಸ್ಯೆಯ ಸುಳಿಯಲ್ಲಿ ಸಂತ್ರಸ್ತರು: ಕೆಟೆಗರಿ ವಿಂಗಡಣೆಯಾದ ಬಳಿಕ ಕೂಡಲೇ ಸಂತ್ರಸ್ತರಿಗೆ ಮೊದಲ ಹಾಗೂ ಎರಡನೇ ಕಂತಿನ ಹಣ ಬಂದಾಗ ಶೇ. 25ರಷ್ಟು ಪ್ರಮಾಣದಲ್ಲಿ ಮನೆ ನಿರ್ಮಾಣಗೊಂಡಿವೆ. ಕೆಲವರಿಗೆ ಮಾತ್ರ ಮೂರನೇ ಕಂತಿನ ಪರಿಹಾರವೂ ಸಿಕ್ಕಿದೆ. ಇದರ ಮಧ್ಯೆ ಕೋವಿಡ್ ಮಹಾಮಾರಿಯಿಂದಾಗಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತಗೊಂಡಿತು. ಎರಡು ತಿಂಗಳು ವ್ಯರ್ಥವಾಗುವುದರ ಜತೆಗೆ ಪರಿಹಾರವೂ ಸಿಗದೇ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಜೂನ್‌ ಆರಂಭದಲ್ಲಿಯೇ ಜಿಲ್ಲೆಯಲ್ಲಿ ಮಳೆ ಕಾಲಿಟ್ಟಿದ್ದು, ಮುಂಗಾರು ಪೂರ್ವ ಗಾಳಿ-ಮಳೆ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿದೆ. ಪ್ರವಾಹ ಪರಿಹಾರದ ಮೊದಲೆರಡು ಕಂತಿನಲ್ಲಿ ಅರ್ಧಂಬರ್ಧ ನಿರ್ಮಾಣಗೊಂಡು ಕಾಮಗಾರಿ ಸ್ಥಗಿತಗೊಂಡಿರುವ ಮನೆಗಳು ಬರುವ ಮಳೆಯಲ್ಲಿ ಬಿದ್ದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಸಂತ್ರಸ್ತರು.

ನೆರೆ ಸಂತ್ರಸ್ತರ ಮನೆಗಳು ಅರ್ಧಂಬರ್ಧ ನಿರ್ಮಾಣಗೊಂಡಿದ್ದು, ಲಾಕ್‌ಡೌನ್‌ ತೆರವು ಆಗುವಷ್ಟರಲ್ಲಿಯೇ ಮತ್ತೆ ಮಳೆ ಆರಂಭಗೊಂಡಿದೆ. ಈ ವರ್ಷವೂ ಮನೆ ನಿರ್ಮಾಣ ಆಗದಿದ್ದರೆ ಸಂತ್ರಸ್ತರ ಬದುಕು ಊಹಿಸಲೂ ಆಸಾಧ್ಯವಾಗಿದೆ. ಸ್ವಂತ ಮನೆಗಳು ಕೊಚ್ಚಿ ಹೋಗಿದ್ದರಿಂದ ಈಗ ಹೊಸ ಮನೆಯೂ ಇಲ್ಲದೇ ಜೀವನ ನಡೆಸುವುದಾದರೂ ಎಲ್ಲಿ ಎಂಬ ಪ್ರಶ್ನೆ ಸಂತ್ರಸ್ತರನ್ನು ಕಾಡುತ್ತಿದೆ.

Advertisement

ಮುಳುಗಡೆ ಗ್ರಾಮಗಳ ಸ್ಥಿತಿ ಶೋಚನೀಯ: ಕಳೆದ ವರ್ಷದ ನೆರೆಯಲ್ಲಿ ಮನೆ ಕೊಚ್ಚಿ ಹೋಗುವುದರ ಜತೆಗೆ ಜನರ ದಾಖಲೆ ಪತ್ರ, ಮಕ್ಕಳ ಶಾಲಾ ಪಠ್ಯ ಪುಸ್ತಕಗಳೂ ನೀರುಪಾಲಾಗಿದ್ದವು. ಪ್ರತಿ ಸಲ ಬರುವ ಪ್ರವಾಹದಲ್ಲಿ ಕೃಷ್ಣಾ ತೀರದ ಅನೇಕ ಹಳ್ಳಿಗಳು ಸಂಪೂರ್ಣ ಮುಳುಗಡೆ ಆಗುತ್ತವೆ. ಆದರೆ ಮಳೆ ಬಂತೆಂದರೆ ಇಲ್ಲಿಯ ಜನ ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕು ಸಾಗಿಸುತ್ತಾರೆ. ರಾಯಬಾಗ ತಾಲೂಕಿನ ಬಾವನ ಸಂವದತ್ತಿ,

ಹಳೆ ದಿಗ್ಗೇವಾಡಿ, ಜಲಾಲಪುರ, ಕುಡಚಿ, ಸಿದ್ದಾಪುರ, ಗೌಂಡವಾಡ, ನಸಲಾಪುರ, ಪರಮಾನಂದವಾಡಿ, ಶಿರಗೂರ, ಬಿರಡೆ, ಚಿಂಚಲಿ. ಅಥನಿ ತಾಲೂಕಿನ ಸತ್ತಿ, ದರೂರ, ಸಪ್ತಸಾಗರ, ಇಂಗಳಗಾಂವ, ತೀರ್ಥ, ಶೇಗುಣಸಿ, ಖವಟಕೊಪ್ಪ, ಹುಲಗಬಾಳಿ, ಚಿಕ್ಕೋಡಿ ತಾಲೂಕಿನ ಜುಗೂಳ, ಮಂಗಾವತಿ, ಮಾಂಜರಿ ಸೇರಿದಂತೆ ಅನೇಕ ಗ್ರಾಮಗಳ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ನೆರೆ ಹಾಗೂ ಜೋರಾದ ಮಳೆಯಿಂದಾಗಿ ಸುಮಾರು 11,193 ಕೋಟಿ ರೂ. ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಬೆಳೆ ಹಾನಿ ಹಾಗೂ ಮನೆ ಹಾನಿಯಿಂದಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆ ಹಾನಿಗೊಳಗಾಗಿದೆ. ಮೊದಲ ಕಂತಿನ ಹಣ ಸಂತ್ರಸ್ತರಿಗೆ ಸಿಕ್ಕಿದ್ದು, ಎರಡನೇ ಕಂತಿನ ಹಣ ಬಿಡುಗಡೆ ಆಗುವಷ್ಟರಲ್ಲಿಯೇ ಬೇರೆ ಬೇರೆ ಸಮಸ್ಯೆಗಳು ಎದುರಾಗಿವೆ.

ಕೃಷ್ಣಾ ನದಿ ದಡದ ಸಂತ್ರಸ್ತರು ಅತಿವೃಷ್ಟಿಯಿಂದಾಗಿ ಸಂಕಷ್ಟ ಪಡುತ್ತಿದ್ದಾರೆ. ಸಂತ್ರಸ್ತರ ಪುನರ್ವಸತಿ ಕಾರ್ಯ ಹಾಗೆಯೇ ಉಳಿದುಕೊಂಡಿದೆ. ಈ ಭಾಗದ ಜನರು ನೆರೆ ಬಂದಾಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ. ಪುನರ್ವಸತಿ ಕಾರ್ಯ ಆಗದಿದ್ದರೆ ಸಂತ್ರಸ್ತರ ಬದುಕು ಬಹಳ ಗಂಭೀರ ಆಗಲಿದ್ದು, ಸರ್ಕಾರ ಇತ್ತ ಕಣ್ತೆರೆದು ನೋಡಬೇಕಾದ ಅಗತ್ಯವಿದೆ ಎಂದು ರೈತ ಮುಖಂಡ ಮಹಾದೇವ ಮಡಿವಾಳ ಆಗ್ರಹಿಸಿದ್ದಾರೆ.

ಪ್ರತಿ ಸಲ ನೆರೆ ಬಂದಾಗ ಈ ಭಾಗದ ಸಂತ್ರಸ್ತರ ಕಷ್ಟ ಹೇಳತೀರದಾಗಿದೆ. 2019ರಲ್ಲಿ ಅಪ್ಪಳಿಸಿದ ಮಹಾ ಪ್ರವಾಹದಿಂದಾಗಿ ಅನೇಕ ಮನೆಗಳು ಧರೆಗುರುಳಿವೆ. ಆದರೆ ಸರ್ಕಾರದಿಂದ ಮೊದಲ ಹಾಗೂ ಎರಡನೇ ಕಂತಿನ ಪರಿಹಾರ ಬಿಟ್ಟರೆ ಇನ್ನುಳಿದ ಪರಿಹಾರ ಕೈ ಸೇರಿಲ್ಲ. ಮತ್ತೂಂದು ಮಳೆಗಾಲ ಶುರುವಾಗಿದ್ದು, ಈ ಸಲವೂ ಸೂರು ಕನಸಾಗಿಯೇ ಉಳಿಯಲಿದೆಯೇ? ಅರ್ಧಕ್ಕರ್ಧ ನಿರ್ಮಾಣಗೊಂಡ ಮನೆಗಳ ಸ್ಥಿತಿ ಏನು?  –ರಮೇಶ ಮಡಿವಾಳ, ರೈತ ಮುಖಂಡರು

ಹೋದ ವರ್ಸ ಮಳ್ಯಾಗ ಬಿದ್ದ ಮನಿ ಇನ್ನೂ ಕಟ್ಕೊಳ್ಳಾಕ ಆಗಿಲ್ಲ. ಈಗ ಮತ್ತ ಮಳಿ ಬರಾಕ ಹತ್ತೇತಿ. ಪರಿಹಾರ ಕೊಡ್ತೀನಿ ಅಂತ ಭರೋಸಾ ಕೊಟ್ಟವರು ಇತ್ತ ಸುಳಿದಿಲ್ಲ. ಹೋದ ಸಲಾ ಮನ್ಯಾಗ ಇದ್ದಾಗ ಮಳಿ ಬಂದ್ರ, ಈಗ ಬೀದಿಗಿ ಬಿದ್ದಾಗ ಮಳಿ ಆಗಾತೈತಿ. ಇತ್ತ ಮನಿನೂ ಇಲ್ಲ, ಪರಿಹಾರನೂ ಇಲ್ಲದ ನಮ್ಮ ಜೀವನಾ ಮೂರಾಬಟ್ಟೆ ಆಗೈತಿ. ಒಂದ ಕಂತ ಬಿಟ್ರ ಮುಂದ ರೊಕ್ಕಾನ ಬಂದಿಲ್ಲ. ಹಿಂಗಾದ್ರ ಮನಿ ಇಲ್ಲದ ಇರೋದೆಲ್ಲಿ?  –ನಾಗಪ್ಪ ಮಕ್ಕಳಗೇರಿ, ಚಂದೂರ ನಿವಾಸಿ

 

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next