ಮೂಢನಂಬಿಕೆಗೆ ಜನರು ಬಲಿಯಾಗಬಾರದು, ಅದು ಸಮಾಜದಿಂದ ತೊಲಗಬೇಕು ಎಂಬ ಸಾರವನ್ನಿಟ್ಟುಕೊಂಡು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಅವಂತಿಕ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಈ ಚಿತ್ರದ ಆಶಯ ಕೂಡಾ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಕಂದಾಚಾರಗಳು ತೊಲಗಬೇಕೆಂಬುದು. ಕೆಂಪೇಗೌಡ ಮಾಗಡಿ ಈ ಚಿತ್ರದ ನಿರ್ದೇಶಕರು. ಕಥೆಯಲ್ಲಿ ಸಸ್ಪೆನ್ಸ್ ಅಂಶ ಹೆಚ್ಚಿರುವುದರಿಂದ ಚಿತ್ರದ ಬಗ್ಗೆ ಹೆಚ್ಚು ವಿವರ ಬಿಟ್ಟುಕೊಡಲಾಗುವುದಿಲ್ಲ ಎಂದು ಚಿತ್ರದ ಬಗ್ಗೆ ನಿರ್ದೇಶಕರು ಹೆಚ್ಚು ಮಾತನಾಡಲಿಲ್ಲ.
ಎಲ್ಲಾ ಓಕೆ, ಚಿತ್ರದ ಕಥೆ ಏನು, ಯಾವ ಅಂಶಗಳ ಸುತ್ತ ಸಾಗುತ್ತದೆ ಎಂದರೆ, ನಿಧಿಯೊಂದರ ಸುತ್ತ ಎಂಬ ಉತ್ತರ ಬರುತ್ತದೆ. ಮೂಢನಂಬಿಕೆಗೆ ಒಳಗಾದ ತಂಡವೊಂದು ನಿಧಿಯ ಆಸೆಗಾಗಿ ಮಗನನ್ನು ಬಲಿ ಕೊಡಲು ಮುಂದಾಗುತ್ತದೆ. ಹೀಗಿರುವಾಗ ತಾಯಿ ಅವರ ವಿರುದ್ಧ ಹೋರಾಡಿ, ಹೇಗೆ ತನ್ನ ಮಗನನ್ನು ರಕ್ಷಿಸಿಕೊಳ್ಳುತ್ತಾಳೆ ಹಾಗೂ ಮುಂದೆ ಸಮಾಜದಲ್ಲಿ ಬದಲಾವಣೆ ತರಲು ಹೇಗೆಲ್ಲಾ ಶ್ರಮಿಸುತ್ತಾಳೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ ಎಂದು ಚಿತ್ರತಂಡ ವಿವರ ನೀಡಿತು.
ಚಿತ್ರದಲ್ಲಿ ತಾಯಿಯಾಗಿ ರತ್ನಾ ಚಂದನ್ ನಟಿಸುವುದರ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ. ಈ ಹಿಂದೆ ರಂಗಭೂಮಿ, ಕಿರುತೆರೆಯಲ್ಲಿ ನಟಿಸಿದ ರತ್ನಾ ಚಂದನ್ ಅವರು ಕೂಡ “ಅವಂತಿಕ’ ಬಗ್ಗೆ ಖುಷಿ ಹಂಚಿಕೊಂಡರು. ಚಿತ್ರದಲ್ಲಿ ರಮೇಶ್ ಪಂಡಿತ್ ಊರಗೌಡನಾಗಿ ನಟಿಸಿದ್ದಾರೆ. ಪಾತ್ರದ ಜೊತೆಗೆ ಛಾಯಾಗ್ರಹಣದ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು ರಮೇಶ್ ಪಂಡಿತ್. ಉಳಿದಂತೆ ಅರ್ಪಿತ್ ಗೌಡ, ಅಮೃತಾ ನಾಯರ್, ಸಂಜು ಬಸಯ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ.
ಮಂಗಳೂರು, ಮಾಗಡಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕೆ ವಿನು ಮನಸು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಶ್ರೀ ಸಂಜಯ ಕುಮಾರನಂದ ಸ್ವಾಮಿ, ಶ್ರೀ ಸಾಧ್ವಿ ಯೋಗಿ ಮಾತಾ, ಮಾಜಿ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಸೇರಿದಂತೆ ಅನೇಕರು ಹಾಜರತಿದ್ದು, ಚಿತ್ರತಂಡಕ್ಕೆ ಶುಭಕೋರಿದರು.