ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಉದ್ಯಾನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿದ್ದ ನಗರ ಹೃದಯ ಭಾಗದ 200 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 2 ಎಕರೆ 39.5 ಗುಂಟೆ ಜಮೀನನ್ನು ಬಿಲ್ಡರ್ ಒಬ್ಬರ ಪರವಾಗಿ ಡಿನೋಟಿಫೈ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಎಸಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ನಗರದ ಲಾಲ್‌ಬಾಗ್‌ಗೆ ಹೊಂದಿಕೊಂಡಿರುವ ಸಿದ್ದಾಪುರ ಗ್ರಾಮದ (ಈಗಿನ ಜಯನಗರ 1ನೇ ಬ್ಲಾಕ್) ಸರ್ವೇ ನಂ. 27/1, 28/4, 28/5 ಮತ್ತು 28/6ರಲ್ಲಿ ಉದ್ಯಾನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿದ್ದ 2 ಎಕರೆ 39.5 ಗುಂಟೆ ಜಮೀನನ್ನು ಅಶೋಕ್ ಧಾರೀವಾಲ್ ಎಂಬ ಖಾಸಗಿ ಬಿಲ್ಡರ್ ಪರವಾಗಿ 2014ರ ನ. 18ರಂದು ಡಿನೋಟಿಫೈ ಮಾಡಲಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಬದಲು “ರೀ ಡು’ ಎಂಬ ಪದ ಬಳಸಿ ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ ಎಂದು ಅವರು ದೂರಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಈ ಡಿನೋಟಿಫಿಕೇಷನ್ ರದ್ದುಗೊಳಿಸಿ ಸದರಿ ಭೂಮಿಯನ್ನು ಮತ್ತೆ ಉದ್ಯಾನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು. ಶೀಘ್ರದಲ್ಲೇ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭೂಮಿ ರೀ ಡೂ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಾಕಷ್ಟು ಲೋಪಗಳಾಗಿರುವ ಬಗ್ಗೆ ನ್ಯಾ.ಕೆಂಪಣ್ಣ ಆಯೋಗ ಪ್ರಸ್ತಾಪಿಸಿದ್ದು, ಈ ಕಾರಣಕ್ಕಾಗಿಯೇ ಸರ್ಕಾರ ವರದಿಯನ್ನು ಸದನದಲ್ಲಿ ಮಂಡಿಸಲು ಹಿಂದೇಟು ಹಾಕುತ್ತಿದೆ. ಸರ್ಕಾರಕ್ಕೆ ಧೈರ್ಯವಿದ್ದರೆ ವರದಿಯನ್ನು ಸದನದಲ್ಲಿ ಮಂಡಿಸಲಿ.
– ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ಉಪನಾಯಕ