Advertisement

ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿ ಮಾಡಲ್ಲ​​​​​​​

06:00 AM Jun 10, 2018 | Team Udayavani |

ಬೆಂಗಳೂರು: ಸಚಿವ ಸ್ಥಾನ ಸಿಗದೆ ತೀವ್ರ ಅಸಮಾಧಾನಗೊಂಡು ಉಪ ಮುಖ್ಯಮಂತ್ರಿ ಪಟ್ಟದ ಬೇಡಿಕೆ ಇಟ್ಟಿದ್ದ ಎಂ.ಬಿ.ಪಾಟೀಲ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ನಿರಾಸೆಯುಂಟು ಮಾಡಿದ್ದು, ಮತ್ತೂಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ ಎಂದಿದೆ. 

Advertisement

ಜತೆಗೆ ಎರಡನೇ ಕಂತಿನಲ್ಲಿ ಸಂಪುಟ ಸೇರುವ ಅವಕಾಶ ಕಲ್ಪಿಸಲಾಗುವುದು ಎಂಬ ಭರವಸೆಯನ್ನಷ್ಟೇ ನೀಡಿದೆ.
ಜತೆಗೆ ತಕ್ಷಣದಿಂದಲೇ ಅತೃಪ್ತ ಶಾಸಕರ ಸಭೆ ಸೇರಿದಂತೆ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ಉಂಟಾಗುವ ಚಟುವಟಿಕೆ ನಿಲ್ಲಿಸಿ ಎಂಬ ಸೂಚನೆಯನ್ನೂ ನೀಡಿದೆ.  ಸಂಪುಟದಲ್ಲಿ ಖಾಲಿ ಉಳಿದಿರುವ ಆರು ಸ್ಥಾನ ಶೀಘ್ರ ಭರ್ತಿ ಮಾಡುವ ಭರವಸೆಯನ್ನು ನೀಡಿದೆ.

ಈ ಮಧ್ಯೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಹುಲ್‌ಗಾಂಧಿಯವರ ಜತೆ  ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದು , ರಾಹುಲ್‌ಗಾಂಧಿ ಸಹ ರಾಜ್ಯ ನಾಯಕರ ಜತೆಯೂ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಸಚಿವ ವಂಚಿತ ಕಾಂಗ್ರೆಸ್‌ ಶಾಸಕರ ಜತೆ ದೂರವಾಣಿ ಮೂಲಕ ಮಾತನಾಡಿ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಕ್ಷೇತ್ರದ ಕೆಲಸ ಕಾರ್ಯಗಳಿಗೆ ನಾನು ನಿಮ್ಮ ಜತೆಗಿರುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಹೈಕಮಾಂಡ್‌ ಸೂಚನೆ ಮೇರೆಗೆ ಶನಿವಾರ ಸಚಿವ ಸ್ಥಾನ ವಂಚಿತ ಎಚ್‌.ಕೆ.ಪಾಟೀಲ್‌ ನಿವಾಸಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ಸಮಾಧಾನಪಡಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ನಾಯಕ ಜಾಫ‌ರ್‌ ಷರೀಫ್ ಸಹ ಭೇಟಿ ನೀಡಿ ಮಾತನಾಡಿದರು. ಹೈಕಮಾಂಡ್‌ನ‌ ಸೂಚನೆ  ಹಿನ್ನೆಲೆಯಲ್ಲಿ ಅತೃಪ್ತರು ಸಮಾಧಾನಗೊಳ್ಳುತ್ತಾರಾ ಅಥವಾ ಬೇರೆ ಸ್ವರೂಪ ಪಡೆಯುತ್ತಾ ಕಾದು ನೋಡಬೇಕಾಗಿದೆ.

Advertisement

ರಾಹುಲ್‌ ಭೇಟಿ ಮಾಡಿದ ಎಂ.ಬಿ.ಪಾಟೀಲ್‌ ಹೈಕಮಾಂಡ್‌ ಬುಲಾವ್‌ ಮೇರೆಗೆ ದೆಹಲಿಯಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ, ಸಂಪುಟಕ್ಕೆ ಸೇರ್ಪಡೆ ಸರಿ, ಆದರೆ, ಉಪ ಮುಖ್ಯಮಂತ್ರಿಯೇ ಆಗಬೇಕು ಎಂದರೆ ಕಷ್ಟ. ಸಚಿವ ಸ್ಥಾನ ಬೇಡ ಎಂದಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಾದರೂ ಸರಿ ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯ ದೃಷ್ಟಿಯಿಂದ ರಾಷ್ಟ್ರಾದ್ಯಂತ ರಾಜಕೀಯ ಧ್ರುವೀಕರಣ ಆಗುತ್ತಿದ್ದು ಕರ್ನಾಟದಲ್ಲೂ ನಾವು ಕೆಲವೊಂದು ತೀರ್ಮಾನ ಕೈಗೊಂಡಿದ್ದೇವೆ. ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯುವುದು ನಮಗೆ ಅಗತ್ಯ. ನೀವು ಪಕ್ಷದ ನಾಯಕತ್ವ ವಹಿಸಿಕೊಂಡು ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಸಂಘಟನೆ ಮಾಡಿ ಎಂಬ ಮಾತನ್ನೂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟ ಸೇರುವುದಾದರೆ ಎರಡನೇ ಕಂತಿನಲ್ಲಿ ಅವಕಾಶ ಕಲ್ಪಿಸಿ ಒಳ್ಳೆಯ ಖಾತೆ ನೀಡಲಾಗುವುದು ಎಂಬ ಭರವಸೆ ಸಹ ನೀಡಲಾಯಿತು ಎಂದು ಹೇಳಲಾಗಿದೆ.

ಆದರೆ, ಸಂಪುಟ¨ಲ್ಲಿ  ಎಂ.ಬಿ.ಪಾಟೀಲ್‌  ಬಯಸಿದ್ದ ಜಲಸಂಪನ್ನೂಲ ಖಾತೆ  ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಿರುವುದರಿಂದ ಸಚಿವ ಸಂಪುಟ ಸೇರಿ ಬೇರೆ ಖಾತೆ ಪಡೆಯುತ್ತಾರಾ? ಎಂಬ ಪ್ರಶ್ನೆಯೂ ಇದೆ.
ರಾಹುಲ್‌ಗಾಂಧಿ ಭೇಟಿ ಸಂದರ್ಭದಲ್ಲಿ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆಯೂ ಎಂ.ಬಿ.ಪಾಟೀಲ್‌ ಮಾಹಿತಿ ನೀಡಿದ್ದು, ಅನುಸರಿಸಿಕೊಂಡು ಹೋಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ನಾಳೆ ಸತೀಶ್‌ ಜಾರಕಿಹೊಳಿ ಸಭೆ:  ಸೋಮವಾರ ಸತೀಶ್‌ ಜಾರಕಿಹೊಳಿ ಸೇರಿದಂತೆ ಅತೃಪ್ತ ಶಾಸಕರ ಸಭೆ ಕರೆಯಲಾಗಿದ್ದು ಅಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ನಡೆದ ಮಾತುಕತೆ ವಿವರ ನೀಡಿ ಮುಂದಿನ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.

ಮತ್ತೂಂದೆಡೆ ಅತೃಪ್ತ ಸಚಿವರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌, ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುವುದು ಸರಿಯಲ್ಲ.  ಈಗ ಚುನಾವಣೆಗೆ ಹೋಗಲು ಯಾವ ಶಾಸಕರೂ ತಯಾರಿಲ್ಲ. ಸೋಮವಾರ ಒಂದು ಹಾಗೂ ಎರಡು ಬಾರಿ ಗೆದ್ದಿರುವ 40 ಶಾಸಕರ ಸಭೆ ನಡೆಸಿ ನಾವೂ ಒಂದು ಸಂದೇಶ ರವಾನಿಸಲಿದ್ದೇವೆ ಎಂದು ಹೇಳಿದ್ದಾರೆ.

ಸಿಎಂಗೆ “ಭಿನ್ನ’ ತಲೆನೋವು
ಸಾಲಮನ್ನಾ ಕುರಿತು ಮಾರ್ಗಸೂಚಿ ಹೊರಡಿಸಲು ರೂಪು-ರೇಷೆ ಹಾಗೂ ಹೊಸ ಬಜೆಟ್‌ ಮಂಡಿಸುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ  ಕಾಂಗ್ರೆಸ್‌ ಪಕ್ಷದಲ್ಲಿನ ಬೆಳವಣಿಗೆಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ತಲೆನೋವು ತಂದಿದೆ.

ಜೆಡಿಎಸ್‌ನಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೂ ಕಾಂಗ್ರೆÕಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಸರ್ಕಾರದ ಮೇಲೆ ಜನಸಾಮಾನ್ಯರಲ್ಲಿ ಬೇರೆ ರೀತಿಯ ಭಾವನೆ ಬರುವಂತಾಗಿದೆ. ಎಂ.ಬಿ.ಪಾಟೀಲ್‌, ಎಚ್‌.ಕೆ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ರೋಷನ್‌ಬೇಗ್‌, ರಾಮಲಿಂಗಾರೆಡ್ಡಿ, ಶಾಮನೂರು ಶಿವಶಂಕರಪ್ಪ ಅವರಂತಹ ಹಿರಿಯ ನಾಯಕರ ಅಸಮಾಧಾನ ಸರ್ಕಾರದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವೂ ಕಾಡುತ್ತಿದೆ ಎಂದು ಹೇಳಲಾಗಿದೆ.

ಕೆಪಿಸಿಸಿ ಹೊಣೆ ದಿನೇಶ್‌ ಗುಂಡೂರಾವ್‌ಗೆ?
ಡಿಸಿಎಂ ಪಟ್ಟ ಬೇಡಿಕೆ ಇಟ್ಟಿರುವ ಎಂ.ಬಿ.ಪಾಟೀಲ್‌ ಸಚಿವ ಸ್ಥಾನ ಒಪ್ಪದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡರೆ ನೀಡಲು ಸಿದ್ಧ ಇರುವ ಎಐಸಿಸಿ, ಎಂ.ಬಿ.ಪಾಟೀಲ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡ ಎಂದರೆ ಆ ಸ್ಥಾನಕ್ಕೆ ದಿನೇಶ್‌ಗುಂಡೂರಾವ್‌ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಕೆಪಿಸಿಸಿ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ಹಾಗೂ ಕೃಷ½ಬೈರೇಗೌಡ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಕೃಷ್ಣಬೈರೇಗೌಡ ಸಚಿವರಾಗಿದ್ದರಿಂದ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ಗುಂಡೂರಾವ್‌ ನೇಮಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಜತೆಗೆ ದಲಿತ ಹಾಗೂ ಹಿಂದುಳಿದ ವರ್ಗದ ಇಬ್ಬರನ್ನೂ ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಮನಸ್ಸು ಮಾಡಿದರೆ…!
ಈ ನಡುವೆ, ಬಸವಕಲ್ಯಾಣ ಶಾಸಕ ನಾರಾಯಣ ಅವರು, ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ ಸರ್ಕಾರ ಉರುಳುತ್ತದೆ. ಸಿದ್ದರಾಮಯ್ಯ ಅವರನ್ನು ಯಾರೂ ಏನೂ ಮಾಡಿಕೊಳ್ಳಲಾಗದು. ಅವರಿಲ್ಲದಿದ್ದರೆ ಸರ್ಕಾರವೇ ಇಲ್ಲ, ಅವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ಸಿದ್ದರಾಮಯ್ಯ ಬಾದಾಮಿಯಲ್ಲೇ ಇರುವುದು.   ಅಸಮಾಧಾನಿತರ ಸಮಾಧಾನ ಮಾಡುವ ಹೊಣೆ ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌, ದಿನೇಶ್‌ಗುಂಡೂರಾವ್‌ ಅವರ ಮೇಲೆ ಬಿದ್ದಿರುವುದು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಸುಮ್ಮನಾಗಿಸಿದ ಎಚ್‌ಡಿಕೆ
ಅತ್ತ ಜೆಡಿಎಸ್‌ನಲ್ಲಿ ಸಚಿವಗಿರಿ ವಿಚಾರದಲ್ಲಿ ಅಸಮಾಧಾನ ಇಲ್ಲದಿದ್ದರೂ ಖಾತೆ ವಿಚಾರದಲ್ಲಿ ಜಿ.ಟಿ.ದೇವೇಗೌಡ ಹಾಗೂ ಸಿ.ಎಸ್‌.ಪುಟ್ಟರಾಜು ಬೇಸರಗೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಖಡಕ್‌ ತಿರುಗೇಟು ನೀಡಿ ಸುಮ್ಮನಾಗಿಸಿದ್ದಾರೆ.

ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಬೆಂಗಳೂರಿಗೆ ವಾಪಸ್‌ ತೆರಳಿದ ನಂತರ ಜತೆಯಲ್ಲಿರುವ 15-20 ಶಾಸಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್‌ ಬಿಡುವ ಮಾತೇ ಇಲ್ಲ.
– ಎಂ.ಬಿ.ಪಾಟೀಲ್‌, ಕಾಂಗ್ರೆಸ್‌ ನಾಯಕ

ಗೊಂದಲ ನಿವಾರಿಸಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದೇವೆ. ಸದ್ಯ ಪ್ರಕ್ರಿಯೆ ಜಾರಿಯಲ್ಲಿದೆ ಅಷ್ಟೇ. ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.
– ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next