ನವದೆಹಲಿ: ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಎದ್ದ ತೌಕ್ತೇ ಚಂಡಮಾರುತ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಅಪಾರ ಹಾನಿ ಉಂಟುಮಾಡಿದ್ದ ಬೆನ್ನಲ್ಲೇ ಇದೀಗ ಮೇ 23ರ ಸುಮಾರಿಗೆ ಮತ್ತೊಂದು ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬೇಡಿ : ಹೆಚ್.ವಿಶ್ವನಾಥ್ ವಾಗ್ದಾಳಿ
ಈ ಚಂಡಮಾರುತ ಬಂಗಾಳಕೊಲ್ಲಿ ಸಮುದ್ರಭಾಗದಲ್ಲಿ ಮೇ 23ರಂದು ಕಡಿಮೆ ಪ್ರಮಾಣದ ಒತ್ತಡದಲ್ಲಿ ಬೀಸಲಿದ್ದು, ಇದಕ್ಕೆ “ಯಾಸ್” ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ವರದಿ ಪ್ರಕಾರ ಮುಂದಿನ ವಾರದಲ್ಲಿ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಈ ಚಂಡಮಾರುತ ಕಡಿಮೆ ಪ್ರಮಾಣದ ಒತ್ತಡದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರ ಇದು ತೀವ್ರವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಈ ಚಂಡಮಾರುತದ ಮುಂದಿನ ಬೆಳವಣಿಗೆ ನೋಡಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹವಾಮಾನ ಇಲಾಖೆಯ ಪ್ರಭಾರ ಅಧಿಕಾರಿ ಸುನೀತಾ ದೇವಿ ತಿಳಿಸಿದ್ದಾರೆ.
ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯ ಮೇಲ್ಮೈ ಉಷ್ಣಾಂಶವು 1-2 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿದೆ. ಇದು ಚಂಡಮಾರುತದ ಬೆಳವಣಿಗೆಗೆ ಅನುಕೂಲಕರವಾಗಿದೆ ಎಂದು ವಿವರಿಸಿದೆ. ಹವಾಮಾನ ಇಲಾಖೆ ಪ್ರಕಾರ, ಈ ಚಂಡಮಾರುತ ಮಯನ್ಮಾರ್ ನತ್ತ ಸಾಗುವ ಸಾಧ್ಯತೆ ಇದ್ದು ಭಾರತಕ್ಕೆ ಅಪ್ಪಳಿಸುವ ಸಂಭವ ಕಡಿಮೆ ಇದೆ ಎಂದು ತಿಳಿಸಿದೆ.