Advertisement

ರಕ್ತಚರಿತ್ರೆಯ ಇನ್ನೊಂದು ಅಧ್ಯಾಯ

06:14 PM Mar 16, 2018 | |

ಇವೆಲ್ಲವೂ ಪೊಲೀಸರು ಕಟ್ಟಿದ ಕಥೆಯಾ? ಕಳೆದ ವರ್ಷ ಬಿಡುಗಡೆಯಾದ “ದಂಡುಪಾಳ್ಯ 2′ ಚಿತ್ರ ನೋಡಿ ಹೊರಬಂದವರೆಲ್ಲರೂ ಇಂಥದ್ದೊಂದು ಮಾತು ಕೇಳಿದ್ದರು. ಏಕೆಂದರೆ, ಆ ಚಿತ್ರದಲ್ಲಿ ದಂಡುಪಾಳ್ಯದವರನ್ನು ನಿರಪರಾಧಿಗಳೆಂದು ಮತ್ತು ಪೊಲೀಸರನ್ನು ವಿಲನ್‌ಗಳೆಂಬಂತೆ ಬಿಂಬಿಸಲಾಗಿತ್ತು. ಹಾಗಾದರೆ, ಮೂರನೆಯ ಭಾಗದಲ್ಲಿ ಚಿತ್ರ ಹೇಗೆ ಮುಂದುವರೆಯುತ್ತದೆ ಎಂಬ ಕುತೂಹಲವೂ ಇತ್ತು. ಇವೆಲ್ಲವೂ ಪೊಲೀಸರು ಕಟ್ಟಿದ ಕಥೆಯಾ?

Advertisement

ಇಂಥದ್ದೊಂದು ಪ್ರಶ್ನೆಯೊಂದಿಗೆ ಶುರುವಾಗುವುದು “ದಂಡುಪಾಳ್ಯ 3′. ಚಿತ್ರ ಮುಗಿಯುವಾಗ ಒಂದು ಸಂದೇಶ ತೆರೆಯ ಮೇಲೆ ಕಾಣಿಸುತ್ತದೆ. “ಇವರು ಕ್ರಿಮಿನಲ್ಸ್‌ ಆಗಿರಬಹುದು ಅಥವಾ ಅಮಾಯಕರೇ ಆಗಿರಬಹುದು. ಇವರಿಗೆ ಸಜೆ ಆಗಬಹುದು ಅಥವಾ ನಿರಪರಾಧಿಗಳೆಂದು ಆಚೆ ಬರಬಹುದು. ನಡೆದಿರುವ ಕೊಲೆಗಳನ್ನು ಇವರು ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಕೊಲೆಗಳಾಗಿರುವುದಂತೂ ನಿಜ.

ಸಮಾಜದಲ್ಲಿ ಇಂಥವರು ಇನ್ನೂ ಎಷ್ಟು ಜನ ಇದ್ದಾರೋ ಏನೋ? ಯಾವುದಕ್ಕೂ ನಿಮ್ಮ ಮನೆ ಡೋರ್‌ ಬೆಲ್‌ ಸೌಂಡ್‌ ಆದಾಗ, ಬಾಗಿಲು ತೆಗೆಯುವ ಮುನ್ನ ಜಾಗ್ರತೆಯಿಂದಿರಿ …’ ಎಂಬ ಒಂದು ಸಂದೇಶವನ್ನು ಕೊಟ್ಟು ಚಿತ್ರ ಮುಗಿಸುತ್ತಾರೆ ಶ್ರೀನಿವಾಸ್‌ ರಾಜು. “ದಂಡುಪಾಳ್ಯ’ದ ಮೂರನೆಯ ಭಾಗದಲ್ಲೇನಾಗುತ್ತದೆ ಎಂದು ಹೇಳುವುದು ಕಷ್ಟ. ಇಲ್ಲಿ ಭಾಗ 1 ಮತ್ತು 2ರ ಒಂದಿಷ್ಟು ಅಂಶಗಳಿವೆ. ಇವೆರಡರ ಮಧ್ಯೆ ಈ ಚಿತ್ರದ ಕಥೆ ಇದೆ.

ಅದೇನೆಂದರೆ, ಈ ದಂಡುಪಾಳ್ಯದ ಹಂತಕರಿಗೆ ದೊಡ್ಡ ಇತಿಹಾಸವಿದೆ. ಹಂತಕರು ಕೊಲೆ ಮಾಡುವುದು ಬೆಂಗಳೂರಿನಲ್ಲಾದರೂ, ಅವರು ಚಿಕ್ಕವರಿದ್ದಾಗಲೇ ತಮ್ಮ ಊರಿನಲ್ಲಿ ಸಾಕಷ್ಟು ಕೃತ್ಯಗಳನ್ನು ಮಾಡಿರುತ್ತಾರೆ. ಒಂದು ಹಂತದಲ್ಲಿ ಬೆಂಗಳೂರಿಗೆ ಬರುವ ಅವರು, ಇಲ್ಲಿ ಒಂದಿಷ್ಟು ದರೋಡೆ ಮಾಡುವುದುಕ್ಕೆ ಸ್ಕೆಚ್‌ ಹಾಕುತ್ತಾರೆ. ಹಾಗೆ ದರೋಡೆಗೆ ಹೋದ ಸಂದರ್ಭದಲ್ಲಿ ಈ ಗ್ಯಾಂಗ್‌ನ ಜನ ಕೊಲೆ, ರೇಪ್‌ಗೆ ಮುಂದಾಗುತ್ತಾರೆ.

ಕ್ರಮೇಣ ಇದು ಅವರಿಗೆ ಅಭ್ಯಾಸವಾಗಿ ಹೋಗುತ್ತದೆ. ಒಂದು ಹಂತದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದರೆ, ಸಾಕ್ಷ್ಯಗಳ ಅಭಾವದಿಂದಾಗಿ ಅವರು ಖುಲಾಸೆಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪೊಲೀಸರು ಬುದ್ಧಿ ಉಪಯೋಗಿಸಿ, ಅವರನ್ನು ಇನ್ನಷ್ಟು ಆಳವಾಗಿ ಸಿಕ್ಕಿ ಹಾಕಿಸುತ್ತಾರೆ. ಕೊನೆಗೆ, “ಯಾವುದಕ್ಕೂ ನಿಮ್ಮ ಮನೆ ಡೋರ್‌ ಬೆಲ್‌ ಸೌಂಡ್‌ ಆದಾಗ, ಬಾಗಿಲು ತೆಗೆಯುವ ಮುನ್ನ ಜಾಗ್ರತೆಯಿಂದಿರಿ …’ ಎಂಬ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ.

Advertisement

“ದಂಡುಪಾಳ್ಯ’ ಸರಣಿಯ ಚಿತ್ರಗಳು ಏನೇ ಇರಲಿ, ಹೇಗೆ ಇರಲಿ. ಕನ್ನಡದ ಮಟ್ಟಿಗೆ ಅದೊಂದು ವಿಭಿನ್ನ ಪ್ರಯತ್ನ ಎಂದರೆ ತಪ್ಪಿಲ್ಲ. ಸಾಮಾನ್ಯವಾಗಿ ಒಂದು ಕಥೆಯನ್ನು ಒಂದು ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಆದರೆ, ದಂಡುಪಾಳ್ಯದ ಹಂತಕರ ಕುರಿತಾದ ಕಥೆಯನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ನೋಡಲಾಗಿದೆ. ಮೊದಲ ಭಾಗವು ಒಂದಿಷ್ಟು ಕೊಲೆಗಳಾಗಿ, ಅದರ ಸುತ್ತ ಪೊಲೀಸ್‌ ವಿಚಾರಣೆ ನಡೆಯುತ್ತದೆ.

ಎರಡನೆಯ ಭಾಗದಲ್ಲಿ ಪತ್ರಕರ್ತೆಯೊಬ್ಬಳಿಗೆ ಇಡೀ ಘಟನೆಯ ಬಗ್ಗೆ ಅನುಮಾನ ಬಂದು, ಇನ್ನೊಂದು ಆ್ಯಂಗಲ್‌ನಲ್ಲಿ ತನಿಖೆ ಮಾಡಿದಾಗ ಅದೆಲ್ಲಾ ಪೊಲೀಸರು ಮಾಡಿದ ಕುತಂತ್ರ ಎಂದು ತೋರಿಸಲಾಗುತ್ತದೆ. ಮೂರನೆಯ ಭಾಗದಲ್ಲಿ ಇನ್ನೊಂದು ಮಜಲಿದೆ. ಅದೇನೆಂದರೆ, ದ್ವಿತೀಯಾರ್ಧದಲ್ಲಿ ದಂಡುಪಾಳ್ಯದ ಹಂತಕರು ಪತ್ರಕರ್ತೆಗೆ ಹೇಳಿದ್ದೆಲ್ಲಾ ಸುಳ್ಳು ಮತ್ತು ದ್ವಿತೀಯಾರ್ಧವೆಲ್ಲಾ ಪತ್ರಕರ್ತೆ ಮತ್ತು ಪ್ರೇಕ್ಷಕರನ್ನು ದಾರಿ ತಪ್ಪಿಸುವ ಒಂದು ತಂತ್ರ ಎಂಬಹುದು ಗೋಚರವಾಗುತ್ತದೆ.

ಅದರ ಜೊತೆಗೆ ದಂಡುಪಾಳ್ಯ ಹಂತಕರ ಇನ್ನಷ್ಟು ರಕ್ತಸಿಕ್ತ ಇತಿಹಾಸವನ್ನು ತೋರಿಸಲಾಗಿದೆ. ಏನೇ ಪ್ರಯತ್ನವಾದರೂ ಹಿಂಸೆ, ಕೊಲೆ, ರಕ್ತಪಾತ, ರೇಪು, ಚಿತ್ರಹಿಂಸೆ, ಬೈಗುಳ … ಇದರ ಸುತ್ತವೇ ಸುತ್ತುತ್ತದೆ. “ಬಾಗಿಲು ತೆಗೆಯುವ ಮುನ್ನ ಜಾಗ್ರತೆಯಿಂದಿರಿ …’ ಎಂಬ ಒಂದು ಸಂದೇಶ ಹೇಳುವುದುಕ್ಕಾಗಿ, ಇಂಥದ್ದೊಂದು ರಕ್ತಸಿಕ್ತ ಇತಿಹಾಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿರುವುದು ಹಲವರಿಗೆ ವಾಕರಿಕೆ ತರಬಹುದು.

ಮಿಕ್ಕಂತೆ ಮೊದಲಾರ್ಧ ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧ ನಿಧಾನವಾಗುತ್ತದೆ ಮತ್ತು ಒಂದು ಹಂತದಲ್ಲಿ ಜಾಳುಜಾಳಾಗು¤ದೆ. ಚಿತ್ರವನ್ನು ಟ್ರಾಕಿಗೆ ತರುವ ಪ್ರಯತ್ನವನ್ನು ಶ್ರೀನಿವಾಸ್‌ ರಾಜು ಮಾಡುವ ಹೊತ್ತಿಗೆ ಚಿತ್ರವೇ ಮುಗಿದಿರುತ್ತದೆ. ಚಿತ್ರದಲ್ಲಿ ಅಷ್ಟೊಂದು ಕಲಾವಿದರ ಪೈಕಿ ಗಮನಸೆಳೆಯುವುದು ರವಿಶಂಕರ್‌ ಒಬ್ಬರೇ. ಇಡೀ ಚಿತ್ರ ಅವರ ಸುತ್ತವೇ ಸುತ್ತುತ್ತದೆ.

ಪೂಜಾ ಗಾಂಧಿ, ಮಕರಂದ್‌ ದೇಶಪಾಂಡೆ, ಮುನಿ, ಪೆಟ್ರೋಲ್‌ ಪ್ರಸನ್ನ, ರವಿ ಕಾಳೆ, ಡ್ಯಾನಿ, ಕರಿಸುಬ್ಬು, ಜಯದೇವ್‌, ಶ್ರುತಿ, ರಮೇಶ್‌ ಪಂಡಿತ್‌ … ಹೀಗೆ ಪಾತ್ರಧಾರಿಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿಯೇ ಯಾರಿಗೂ ಹೆಚ್ಚು ಸ್ಕೋಪ್‌ ಸಿಕ್ಕಿಲ್ಲ ಮತ್ತು ಎಲ್ಲರೂ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಇನ್ನು ವೆಂಕಟ್‌ ಪ್ರಸಾದ್‌ ಛಾಯಾಗ್ರಹಣದಲ್ಲಿ ಒಂದೆರೆಡು ಅದ್ಭುತವೆನಿಸುವ ದೃಶ್ಯಗಳನ್ನು ನೋಡಬಹುದು. ಕಥೆಗೆ ಪೂರಕವಾಗಿ ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತವಿದೆ.

ಚಿತ್ರ: ದಂಡುಪಾಳ್ಯ 3
ನಿರ್ಮಾಣ: ರಾಮ್‌ ತಳ್ಳೂರಿ
ನಿರ್ದೇಶನ: ಶ್ರೀನಿವಾಸ್‌ ರಾಜು
ತಾರಾಗಣ: ರವಿಶಂಕರ್‌, ಪೂಜಾ ಗಾಂಧಿ, ರವಿ ಕಾಳೆ, ಮಕರಂದ್‌ ದೇಶಪಾಂಡೆ, ಮುನಿ, ಡ್ಯಾನಿ, ಜಯದೇವ್‌, ಕರಿಸುಬ್ಬು ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next