ಮೈಸೂರು: ಮುಂಬೈನಿಂದ ಮೈಸೂರಿಗೆ ವಾಪಸ್ಸಾಗಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ ಬೆಂಗಳೂರು ಬಿಟ್ಟರೆ ಹೆಚ್ಚು ಸೋಂಕಿತರು ಮೈಸೂರಿನಲ್ಲಿದ್ದರು. 2 ತಿಂಗಳಲ್ಲಿ 90 ಸೋಂಕಿತರು ಗುಣಮುಖರಾಗಿದ್ದರು. ಮೈಸೂರು ಹಸಿರು ವಲಯದತ್ತ ಮುಖ ಮಾಡಿತ್ತು.
ಬಳಿಕ ಮೈಸೂರಿಗೆ ಮುಂಬೈನಿಂದ ವಾಪಸ್ಸಾಗಿ ಕ್ವಾರಂಟೈನ್‌ನಲ್ಲಿದ್ದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಮುಂಬೈನಿಂದ ವಾಪಸ್ಸಾಗಿ ಕ್ವಾರಂಟೈನ್ ನಲ್ಲಿದ್ದ 18 ವರ್ಷದ ಯುವಕನಿಗೆ (ಪಿ 1510) ಸೋಂಕು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರಿಗೂ ಮುಂಬೈ ಕಂಟಕ: ಮುಂಬೈನಿಂದ ಮೈಸೂರಿಗೆ ಸುಮಾರು 3,500ಕ್ಕೂ ಹೆಚ್ಚು ಜನ ಆಗಮಿಸಬೇಕಿದೆ. ಇದರೊಡನೆ ದೇಶದ ವಿವಿಧ ಭಾಗದಿಂದ ಸುಮಾರು 10 ಸಾವಿರ ಮಂದಿ ಜಿಲ್ಲೆಗೆ ಬರುವ ನಿರೀಕ್ಷೆ ಇದೆ. ಇವರೆಲ್ಲರೂ ಹೊರ ರಾಜ್ಯಗಳಲ್ಲಿಯೇ ನೆಲೆಸಿದ್ದಾರೆ. ಈಗಾಗಲೇ ಸುಮಾರು 300ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಇನ್ನೂ ಸಾವಿರಾರು ಮಂದಿ ಮುಂಬೈನಿಂದ ಆಗಮಿಸಬೇಕಿದೆ. ಇವರ ಆಗಮಿಸಿದರೆ ಪಾಸಿಟಿವ್ ಪ್ರಕರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಡೀಸಿ ಅಭಿರಾಂ ಜಿ.ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಮತ್ತೂಂದು ಪಾಸಿಟಿವ್ ಪ್ರಕರಣ ದೃಢವಾಗಿದ್ದು, ಇದೀಗ ಕೋವಿಡ್ ಆಸ್ಪತ್ರೆಯಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಅವರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಮಹಾ ರಾಷ್ಟ್ರದ ಮುಂಬೈಯಿಂದ ಆಗಮಿಸಿರುವ 18 ವರ್ಷದ ಯುವಕನಾಗಿದ್ದು, ಈತನ ಟ್ರಾವೆಲ್ ಹಿಸ್ಟರಿ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.