Advertisement

ಮತ್ತೊಂದು ವಾಯು ಗುಣಮಟ್ಟ ಮಾಪನ ಕೇಂದ್ರ 

04:28 AM Mar 21, 2019 | |

ಮಹಾನಗರ: ಧೂಳಿನ ಕಣಗಳ ಸಾಂದ್ರತೆ ಹೆಚ್ಚಳದಿಂದಾಗಿ ವಾಯು ಮಾಲಿನ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ತಪಾಸಣೆ ನಡೆಸುವ ಉದ್ದೇಶದಿಂದ ಕರಾವಳಿಯಲ್ಲಿ 2.3 ಕೋ. ರೂ. ವೆಚ್ಚದಲ್ಲಿ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರದ ಸ್ಥಾಪನೆಯಾಗಲಿದೆ.

Advertisement

ಉಡುಪಿ ಜಿಲ್ಲೆಯ ಬೋರ್ಡ್‌ ಹೈಸ್ಕೂಲ್‌ ಬಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸರ್ಕೀಟ್‌ ಹೌಸ್‌ ನಲ್ಲಿ ಈಗಾಗಲೇ ವಾಯು ಗುಣಮಟ್ಟ ಮಾಪನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಪನ್ಮೂಲಗಳ ಅನುದಾನದಿಂದ ಇದೀಗ ಮಂಗಳೂರಿನಲ್ಲಿ ಮತ್ತೊಂದು  ಕೇಂದ್ರ ಸ್ಥಾಪನೆಯಾಗಲಿದೆ.

ವರ್ಷದೊಳಗೆ ಸ್ಥಾಪನೆ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಜ್ಯದಲ್ಲಿ ಈಗಾ ಗಲೇ 29 ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರಕಾರವು ಮತ್ತಷ್ಟು ಕೇಂದ್ರಗಳನ್ನು ತೆರೆಯಲು ಈ ಹಿಂದೆಯೇ ತೀರ್ಮಾನಿಸಿತ್ತು. ಆ ಪ್ರಕಾರ ಪ್ರತಿ ಘಟಕಕ್ಕೆ 2.3 ಕೋಟಿ ರೂ. ವೆಚ್ಚದಂತೆ 73.6 ಕೋ. ರೂ. ವ್ಯಯಿಸಿ 22 ಜಿಲ್ಲೆಗಳಲ್ಲಿ 32 ಕೇಂದ್ರಗಳ ಸ್ಥಾಪನೆಯಾಗಲಿದೆ. ಬಳ್ಳಾರಿ, ಕಲಬುರ್ಗಿ, ಚಿತ್ರದುರ್ಗ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ, ಇನ್ನುಳಿದ ಜಿಲ್ಲೆಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಪನ್ಮೂಲಗಳಿಂದ ಕೇಂದ್ರಗಳನ್ನು ವರ್ಷದ ಅವಧಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸ್ಥಾಪನೆ ಉದ್ದೇಶ
ಗಣಿಗಾರಿಕೆ, ಖನಿಜ ಸಾಗಾಟ-ಸಂಸ್ಕರಣೆ, ಕ್ರಷರ್‌ಗಳ ಬಳಕೆ, ವಾಹನಗಳ ಹೊಗೆ ಸಹಿತ ಧೂಳಿನ ಕಣಗಳ ಸಾಂದ್ರತೆ ಹೆಚ್ಚಳದಿಂದ ಉಂಟಾಗುವ ವಾಯು ಮಾಲಿನ್ಯವು ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುವುದರ ಜತೆಗೆ ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿದೆ. ಅದನ್ನು ತಡೆಗಟ್ಟುವ ಉದ್ದೇಶದಿಂದ ವಾಯು ಮಾಲಿನ್ಯದ ನಿಯಂತ್ರಣ ಮತ್ತು ನಿವಾರಣೆಗೆ ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಮಾಲಿನ್ಯಕಾರಕ ಅಂಶಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದ್ದಲ್ಲಿ ಅದಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗೆ ವರದಿ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಘಟಕ ಸಹಕಾರಿಯಾಗಲಿದೆ.

22 ಜಿಲ್ಲೆಗಳಲ್ಲಿ 32 ಕೇಂದ್ರ 
ಬೆಂಗಳೂರು ನಗರ ಜಿಲ್ಲೆಯಲ್ಲಿ 4, ಬಳ್ಳಾರಿ-4, ಕಲಬುರ್ಗಿ- 3, ಮೈಸೂರು- 2, ಚಿತ್ರದುರ್ಗದಲ್ಲಿ 2 ಕೇಂದ್ರಗಳು. ಉಳಿದಂತೆ ದ.ಕ., ಬೆಂಗಳೂರು ಗ್ರಾಮಾಂತರ, ರಾಮನಗರ, ಧಾರವಾಡ, ದಾವಣಗೆರೆ, ಬೆಳಗಾವಿ, ತುಮಕೂರು, ವಿಜಯಪುರ, ಶಿವಮೊಗ್ಗ, ಮಂಡ್ಯ, ಯಾದಗಿರಿ, ಚಾಮರಾಜನಗರ, ಬಾಗಲಕೋಟೆ, ರಾಯಚೂರು, ಹಾಸನ, ಉತ್ತರ ಕನ್ನಡ,ಕೊಪ್ಪಳ ಜಿಲ್ಲೆಗಳಲ್ಲಿ ತಲಾ 1 ಕೇಂದ್ರಗಳು ಸ್ಥಾಪನೆಯಾಗಲಿವೆ.

Advertisement

ಬಜೆಟ್‌ನಲ್ಲಿ ಘೋಷಣೆ
ರಾಜ್ಯದಲ್ಲಿ ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2018-19ನೇ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದು, ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ 96 ಕೋಟಿ ರೂ. ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ
ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಉಲ್ಲೇಖೀಸಿದ್ದರು.

ಮಾಹಿತಿಯಿಲ್ಲ
ನಗರದ ಸರ್ಕೀಟ್‌ ಹೌಸ್‌ನಲ್ಲಿ ಈಗಾಗಲೇ ವಾಯುಗುಣಮಟ್ಟ ಮಾಪನ ಕೇಂದ್ರವಿದೆ. ಇದು ನಗರದಲ್ಲಿ ವಾಯುಗುಣಮಟ್ಟ ಪ್ರಮಾಣ ಕಂಡುಹಿಡಿಯಲು ಸಹಕಾರಿಯಾಗುತ್ತದೆ. ಈಗ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಮಾಪನ ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
 - ಜಯಪ್ರಕಾಶ ನಾಯಕ್‌,
ಮಾಲಿನ್ಯ ನಿಯಂತ್ರಣ ಮಂಡಳಿಯ
ಹಿರಿಯ ವೈಜ್ಞಾನಿಕ ಅಧಿಕಾರಿ

‌ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next