Advertisement

ಅಪಹರಣ ಪ್ರಕರಣದ ಮತ್ತೊಬ್ಬ ಆರೋಪಿ ವಶಕ್ಕೆ

11:27 AM Aug 21, 2017 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆಪ್ತ ವಿನಯ್‌ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಕಾಂತ್‌ ಎಂಬಾತನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿನಯ್‌ ಅಪಹರಣದ ಪ್ರಮುಖ ಆರೋಪಿ ರೌಡಿಶೀಟರ್‌ ಪ್ರಶಾಂತ್‌ನ ಸ್ನೇಹಿತನಾಗಿರುವ ಉಮಕಾಂತ್‌ ಕೋರಮಂಗಲ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ.

Advertisement

ಇದೇ ವೇಳೆ ಆರೋಪಿಯ ಪತ್ತೆಗೆ ಮುಂಬೈ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲಿ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಈ ಮಾಹಿತಿ ಪಡೆದ ಆರೋಪಿ ಮೂರು ದಿನಗಳ ಹಿಂದೆ ಏಕಾಏಕಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾನೆ. ಇದರಿಂದ ಅಚ್ಚರಿಗೊಂಡ ನ್ಯಾಯಾಧೀಶರು ಕೂಡಲೇ ಕೋರಮಂಗಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ವೇಳೆ ಉಮಕಾಂತ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಮಲ್ಲೇಶ್ವರಂ ಠಾಣೆ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್‌ ಒಂದು ದಿನಗಳ ಮಟ್ಟಿಗೆ ವಶಕ್ಕೆ ನೀಡಿದೆ. ಸೋಮವಾರ ಮತ್ತೆ ಕೋರ್ಟ್‌ಗೆ ಹಾಜರು ಪಡಿಸಿ ಅಗತ್ಯಬಿದ್ದ‌ಲ್ಲಿ ವಶಕ್ಕೆ ಪಡೆಯಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಬಿಎಸ್‌ವೈ ಮನೆಯಲ್ಲಿ ಭೇಟಿ
ಕೃತ್ಯಕ್ಕೆ ರೌಡಿಶೀಟರ್‌ ಪ್ರಶಾಂತ್‌ ಮತ್ತು ನಮ್ಮ ತಂಡಕ್ಕೆ ಸುಪಾರಿ ಕೊಟ್ಟಿದ್ದೇ ಪ್ರಕರಣದ ಪ್ರಮುಖ ಆರೋಪಿ ರಾಜೇಂದ್ರ ಅರಸ್‌. ಈತನ ಮೂಲಕವೇ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂದು ಎನ್ನಲಾದ ಸಂತೋಷ್‌ನನ್ನು ಡಾಲರ್ಸ್‌ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮನೆಯಲ್ಲೇ ಎರಡು ಬಾರಿ ಭೇಟಿಯಾಗಿದ್ದೇನೆ.

ಈ ವೇಳೆ ಸಂತೋಷ್‌, ವಿನಯ್‌ ಬಳಿ ತಮಗೆ ಬೇಕಿರುವ ಸಿಡಿ, ಪೆನ್‌ಡ್ರೈವ್‌ ಸೇರಿದಂತೆ ಕೆಲ ದಾಖಲೆಗಳಿವೆ. ಹೇಗಾದರೂ ಮಾಡಿ ಆತನಿಂದ ಕಸಿದುಕೊಂಡು ಬರುವಂತೆ ನಮಗೆ ಸೂಚಿಸಿದ್ದರು. ಅಲ್ಲದೇ, ಅಪಹರಣ ಪ್ರತಿಯೊಂದು ಹಂತವನ್ನು ನಾವು ಸಂತೋಷ್‌ಗೆ ಹೇಳಬೇಕಿತ್ತು ಎಂದು ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಉಮಕಾಂತ್‌ ಹೇಳಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ನ್ಯಾಯಾಲಯಕ್ಕೆ ವರದಿ
ಪ್ರಕರಣದಲ್ಲಿ ಇದುವರೆಗೂ 10 ಮಂದಿಯನ್ನು ಬಂಧಿಸಲಾಗಿದ್ದು, ಬಹಳಷ್ಟು ಮಂದಿಯ ವಿಚಾರಣೆ ನಡೆಸಲಾಗಿದೆ. ಎಲ್ಲ ಆರೋಪಿಗಳು ಸಂತೋಷ್‌ ಪಾತ್ರದ ಕುರಿತು ಸಾಕ್ಷ್ಯಾ ಸಮೇತ ಹೇಳುತ್ತಿದ್ದಾರೆ.ಆದರೆ, ಸಂತೋಷ್‌ ಮಾತ್ರ ಕೃತ್ಯದ ಹಿಂದಿನ ರಹಸ್ಯವನ್ನು ಬಾಯಿ ಬಿಡುತ್ತಿಲ್ಲ.

ಪ್ರತಿ ಬಾರಿಯ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಸದ್ಯದಲ್ಲೇ ಆರೋಪಿಗಳ ಹೇಳಿಕೆಗಳನ್ನು ದಾಖಲೆ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಹಾಗೆಯೇ ಸಂತೋಷ್‌ ತನಿಖೆ ಗೆ ಸಹಕರಿಸದಿರುವ ಕುರಿತು ಕೋರ್ಟ್‌ ಗಮನಕ್ಕೆ ತಂದು, ಆತನ ನಿರೀಕ್ಷಣಾ ಜಾಮೀನನ್ನು ರದ್ದು ಪಡಿಸುವಂತೆ ಅಧಿಕಾರಿಗಳು ಮನವಿ ಮಾಡಲಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.

ವಿನಯ್‌ ಅಪಹರಣಕ್ಕೆ ಮೂಲ ಕಾರಣ ಈತನ ಬಳಿಯಿರುವ ಸಿಡಿ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ, ದೂರುದಾರ ವಿನಯ್‌ ಆಗಲಿ ಆರೋಪಿ ಎನ್ನಲಾದ ಸಂತೋಷ್‌ ಆಗಲಿ ಯಾವುದೇ ಸಿಡಿ ಕುರಿತು ಮಾಹಿತಿ ನೀಡುತ್ತಿಲ್ಲ. ವಿನಯ್‌ ಸಹ ತಮ್ಮ ಬಳಿ ಯಾವುದೇ ಸಿಡಿ ಇಲ್ಲ ಎಂದು ವಾದ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next