ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿಗೊಳಗಾದವರ ಸಂಖ್ಯೆ 98 ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೆ ಒಟ್ಟು 10 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 98ಕ್ಕೇರಿದ್ದು, ಆರು ಜನರು ಗುಣಮುಖರಾಗಿದ್ದರೆ, ಮೂವರು ಸಾವನ್ನಪ್ಪಿದ್ದಾರೆ.
ಇಂದು ಬೆಂಗಳೂರು ಹಾಗು ಮೈಸೂರಿನಲ್ಲಿ ತಲಾ ಇಬ್ಬರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮೈಸೂರು ಜಿಲ್ಲೆಯಲ್ಲಿ ಮಂಗಳವಾರ ಮತ್ತೆರಡು ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ನಂಜನಗೂಡು ಜೂಬಿಲಿಯಂಟ್ ಕಾರ್ಖಾನೆಯ ರೋಗಿ ಸಂಖ್ಯೆ 52 ರ ಸಂಪರ್ಕದಿಂದ ಇನ್ನೂ ಇಬ್ಬರಿಗೆ ಸೋಂಕು ತಗುಲಿದ್ದು, ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ.
ದುಬೈನಿಂದ ಆಗಮಿಸಿದ್ದ 34 ವರ್ಷದ ದಕ್ಷಿಣ ಕನ್ನಡದ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ಈತನನ್ನು ಮಂಗಳೂರಿನ ನಿಯೋಜಿತ ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗುತ್ತಿದೆ.