Advertisement

ಕಂಕಣ ಸೂರ್ಯಗ್ರಹಣ ಸಮೀಪಿಸುತ್ತಿದೆ!

10:29 AM Dec 08, 2019 | mahesh |

ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ.

Advertisement

ದಕ್ಷಿಣಭಾರತದವರಿಗೆ ಶತಮಾನಕ್ಕೊಮ್ಮೆ ಒದಗುವ ಸುವರ್ಣಾವಕಾಶವಿದು. ಈ ಅವಕಾಶವನ್ನು ಬಿಟ್ಟರೆ, ಈ ರೀತಿಯ ಸಂಪೂರ್ಣ ಸೂರ್ಯಗ್ರಹಣ ಇಲ್ಲೇ ನೋಡಬೇಕಾದರೆ 2064ರ ವರೆಗೆ ಕಾಯಬೇಕಾದೀತು.

ಡಿ. 26 ರ ಬೆಳಿಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. 11 ಗಂಟೆ 3 ನಿಮಿಷಕ್ಕೆ ಮುಕ್ತಾಯ. 9 ಗಂಟೆ 24 ನಿಮಿಷದ ಸುಮಾರಿಗೆ ಬರೇ ಒಂದು ನಿಮಿಷ ಕಂಕಣ ಸೂರ್ಯಗ್ರಹಣ.

ಏನಿದು ಕಂಕಣ ಸೂರ್ಯಗ್ರಹಣ?
ಹೌದು. ಇದೂ ವಿಶೇಷವೇ. 8 ಗಂಟೆ 4 ನಿಮಿಷ ದಿಂದ ಗ್ರಹಣ ಪ್ರಾರಂಭವಾಗಿ ಸೂರ್ಯನನ್ನು ಕತ್ತಲೆ ಆವರಿಸುತ್ತ 9 ಗಂಟೆ 24 ನಿಮಿಷಕ್ಕೆ ಸಂಪೂರ್ಣ ಕಪ್ಪಾಗುತ್ತದೆ. ಆದರೆ, ಚಂದ್ರ ಸೂರ್ಯನನ್ನು ಪೂರ್ತಿ ಮರೆ ಮಾಚಲಾರ. ಸಂಪೂರ್ಣ ಮರೆ ಮಾಚಿದರೆ ಅದು ಖಗ್ರಾಸ ಸೂರ್ಯಗ್ರಹಣವಾಗುತ್ತಿತ್ತು. Total solar eclipse ಎನ್ನುತ್ತಾರಲ್ಲ, ಹಾಗೆ. ಅಂದು ಸೂರ್ಯನನ್ನು ಚಂದ್ರ 93 ಶೇ. ಆವರಿಸಿದ್ದರೂ, ಸೂರ್ಯನ ಹೊರ ವಲಯ ತೆಳ್ಳಗಿನ ಬಿಳಿ ಬಳೆಯಂತೆ ಉಳಿಯುತ್ತದೆ. ಇದನ್ನು ಕಂಕಣ ಸೂರ್ಯಗ್ರಹಣ ಎನ್ನುತ್ತೇವೆ : Annular solar eclipse.

ಈ ಒಂದು ಕ್ಷಣ ಹಗಲಲ್ಲೇ ಕತ್ತಲೆ ! ಈ ದಿನ ಸೂರ್ಯನ ಸಮೀಪವಿರುವ ಗುರು, ಶುಕ್ರ ಹಾಗೂ ಶನಿ ಗ್ರಹಗಳು ಕೂಡ ಹಗಲಿನಲ್ಲಿ ಕಾಣಬಹುದು. ನಕ್ಷತ್ರಗಳೂ ಕಾಣಬಹುದು. ಬರೇ ಒಂದು ನಿಮಿಷ. ಮುಂದೆ ಮರೆಯಾದ ಸೂರ್ಯ, ತೆರೆದುಕೊಳ್ಳುತ್ತ, 11 ಗಂಟೆ 3 ನಿಮಿಷಕ್ಕೆ ಸಂಪೂರ್ಣ ತೆರೆದುಕೊಳ್ಳುತ್ತಾನೆ. ಗ್ರಹಣ ಮುಕ್ತಾಯವಾಗುತ್ತದೆ.  ಇದೇ ಆಕಾಶನಾಟಕ ದಕ್ಷಿಣಭಾರತದವರಿಗಾಗಿ ಮತ್ತೆ ನಡೆಯುವುದು 2064ರಲ್ಲಿ !

Advertisement

ಗ್ರಹಣಾರಂಭ ಎಲ್ಲಿ?
ಈ ಗ್ರಹಣ ಸೌದೀ ಅರೇಬಿಯಾದಲ್ಲಿ ಪ್ರಾರಂಭವಾಗುತ್ತದೆ. ಓಮನ್‌ನಿಂದ ದಕ್ಷಿಣಭಾರತದ ಮೂಲಕ ಶ್ರೀಲಂಕಾದ ಮೇಲಿನಿಂದ ಇಂಡೋನೇಷ್ಯಾ, ಸಿಂಗಾಪುರ, ಮರೀನಾ ಐಲ್ಯಾಂಡ್‌ ತಲುಪಿ, ಮುಂದೆ ಅಂತ್ಯವಾಗಲಿದೆ. ಸುಮಾರು ಬರೇ 118 ಕಿ. ಮೀ. ಅಗಲದ ಆಕಾಶ ಹಾದಿಯಲ್ಲಿ ಕಂಕಣ ಸೂರ್ಯಗ್ರಹಣ. ಇದರ ಇಕ್ಕೆಲದ ಸಾವಿರಾರು ಕಿ. ಮೀ. ವ್ಯಾಪ್ತಿಯವರೆಗೆ ಪಾರ್ಶ್ವ ಸೂರ್ಯಗ್ರಹಣ. ದೆಹಲಿಯಲ್ಲಿ ಪಾರ್ಶ್ವ ಸೂರ್ಯ ಗ್ರಹಣವೇ.

ಕಳೆದ ಶತಮಾನದಲ್ಲಿ 1900ರಿಂದ 2000 ಇಸವಿಯ ವರೆಗೆ ಸುಮಾರು 31 ಸೂರ್ಯ ಗ್ರಹಣಗಳು ಕರ್ನಾಟಕಕ್ಕೆ ಸಂಬಂಧಿಸಿ ಸಂಭವಿಸಿವೆ. ಅವುಗಳಲ್ಲಿ 1980ರ ಒಂದು ಗ್ರಹಣ ಮಾತ್ರ ಖಗ್ರಾಸ ಸೂರ್ಯಗ್ರಹಣವಾಗಿತ್ತು. ಉಳಿದೆಲ್ಲವೂ ಪಾರ್ಶ್ವ ಸೂರ್ಯಗ್ರಹಣಗಳು. ಇಡೀ ಶತಮಾನಕ್ಕೊಂದು ಖಗ್ರಾಸ. ಇದೇ ರೀತಿ ಈ ಶತಮಾನದಲ್ಲಿ ಸುಮಾರು 32 ಸೂರ್ಯ ಗ್ರಹಣಗಳು ಕರ್ನಾಟಕದವರಿಗೆ ಗೋಚರಿಸುವುದಾದರೂ ಇದರಲ್ಲಿ ಎರಡು ಮಾತ್ರ ಕಂಕಣ ಸೂರ್ಯಗ್ರಹಣಗಳು. 2019 ಡಿ. 26 ಮತ್ತು 2064 ಫೆಬ್ರವರಿ 17!

ಸುವರ್ಣಾವಕಾಶ !
ಗ್ರಹಣಗಳಲ್ಲಿ ಎರಡು ವಿಧ. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ. ಸೂರ್ಯನ ಬೆಳಕನ್ನು ಭೂಮಿಯ ಮೇಲೆ ಕೆಲಕ್ಷಣ ಬೀಳದಂತೆ ಚಂದ್ರ ಅಡ್ಡ ಬಂದು ತಡೆದು, ಭೂಮಿಯಲ್ಲಿ ಕೆಲ ಪ್ರದೇಶಗಳಲ್ಲಿ ಕತ್ತಲು ಸೃಷ್ಟಿಯಾದರೆ ಸೂರ್ಯ ಗ್ರಹಣ.

ಅದೇ, ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಅಡ್ಡ ಬಂದು , ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳದಂತೆ ಭೂಮಿ ತಡೆದು ಚಂದ್ರನ ಮೇಲೆ ನೆರಳು ಸೃಷ್ಟಿಸಿದರೆ ಅದು ಚಂದ್ರಗ್ರಹಣ.
ಆಶ್ಚರ್ಯವೆಂದರೆ, ಅಡ್ಡ ಬರುವ ಚಂದ್ರ ಮತ್ತು ಭೂಮಿ, ಗಾತ್ರದಲ್ಲಿ ಒಂದೇ ಸಮನಾಗಿಲ್ಲ.
ಚಂದ್ರ, ಭೂಮಿಗಿಂತ ಸುಮಾರು 45 ಪಟ್ಟು ಗಾತ್ರದಲ್ಲಿ ಸಣ್ಣದು. ಆದುದರಿಂದ ದೊಡ್ಡ ಭೂಮಿ ಸೃಷ್ಟಿಸುವ ಚಂದ್ರ ಗ್ರಹಣ ಸುಮಾರು ಹೆಚ್ಚೆಂದರೆ ಒಂದೂವರೆ ಗಂಟೆಗಳವರೆಗೂ ನಡೆಯಬಹುದು. ಆದರೆ ಚಿಕ್ಕ ಚಂದ್ರ ಸೃಷ್ಟಿಸುವ ಸೂರ್ಯ ಗ್ರಹಣ ಕಡಿಮೆ, ಖಗ್ರಾಸವಾದಾಗ ಹೆಚ್ಚೆಂದರೆ ಏಳೂವರೆ ನಿಮಿಷ !
ಇನ್ನು 28 ದಿನಗಳಿಗೊಮ್ಮೆ ಭೂಮಿಯನ್ನು ಸುತ್ತುತ್ತಿರುವ ಚಂದ್ರ, ಸೂರ್ಯ-ಭೂಮಿಗಳ ನಡುವೆ ಬಂದರೆ ಕಾಣಿಸುವುದೇ ಇಲ್ಲ. ಈ ದಿನವನ್ನು ಅಮಾವಾಸ್ಯೆ ಎನ್ನುತ್ತೇವೆ.

ಅದೇ ಸೂರ್ಯ-ಚಂದ್ರರ ನಡುವೆ ಭೂಮಿ ಬಂದಾಗ ಇಡೀ ಚಂದ್ರ ಗೋಚರಿಸುತ್ತಾನೆ. ಆ ದಿನವನ್ನು ಹುಣ್ಣಿಮೆ ಎನ್ನುತ್ತೇವೆ.

ಈ ಹುಣ್ಣಿಮೆ- ಅಮಾವಾಸ್ಯೆಗಳಲ್ಲಿ ಗ್ರಹಣಗಳು ಸಂಭವಿಸಬೇಕಲ್ಲವೆ? ಯಾಕೆ ಹಾಗಾಗುವುದಿಲ್ಲ ?
ಕಾರಣ, ಈ ದಿನಗಳಲ್ಲಿ ಮೂರೂ ಒಂದೇ ಸರಳರೇಖೆಯಲ್ಲಿ ಇರುವುದಿಲ್ಲ. ಭೂಮಿ ಸೂರ್ಯನನ್ನು ಸುತ್ತುವ ಕಕ್ಷೆಯ ಸಮತಲ ಹಾಗೂ ಚಂದ್ರ ಭೂಮಿಯ ನ್ನು ಸುತ್ತುವ ಕಕ್ಷೆಯ ಸಮತಲ ಒಂದೇ ಆಗಿಲ್ಲ. ಚಂದ್ರನ ಕಕ್ಷೆಯ ಸಮತಲ ಭೂಮಿಯ ಕಕ್ಷೆಯ ಸಮತಲಕ್ಕೆ 5 ಡಿಗ್ರಿ ದೊರೆತಂತಾಗಿದೆ. ಈ ಎರಡು ಸಮತಲಗಳು ಸಂಧಿಸುವ ಅಗೋಚರ ಬಿಂದುಗಳಲ್ಲಿ ಈ ಮೂರೂ, ಸೂರ್ಯ-ಚಂದ್ರ – ಭೂಮಿ ನೇರವಾಗಿರುತ್ತವೆೆ. ಈ ಸಂದರ್ಭದಲ್ಲಿ ಮಾತ್ರ ಬಂದಾಗ ಗ್ರಹಣಗಳಾಗುತ್ತವೆ.

ಎ. ಪಿ. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next