Advertisement

ನಾಗರಹೊಳೆಯಲ್ಲಿ ವಾರ್ಷಿಕ ಹುಲಿ ಗಣತಿ ಪ್ರಾರಂಭ

02:14 PM May 31, 2021 | Team Udayavani |

ಹುಣಸೂರು:ಕೋವಿಡ್-19ನಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಈ ಬಾರಿಯ ವಾರ್ಷಿಕ ಹುಲಿ ಗಣತಿಯು ಸ್ವಯಂಸೇವಕರಿಲ್ಲದೆ ಅರಣ್ಯ ಸಿಬ್ಬಂದಿಗಳ ಮೂಲಕವೇ ಕ್ಯಾಮರಾ ಟ್ರ್ಯಾಪಿಂಗ್ ಮೂಲಕ ಆರಂಭಗೊಂಡಿದ್ದು. ಇದೀಗ ಟ್ರಾನ್ಸಾಕ್ಟ್ ಲೈನ್ ಆಧಾರಿತ ಸಸ್ಯಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇಧಗಳ ಗಣತಿ ಕಾರ್ಯ ನಡೆಯುತ್ತಿದೆ.

Advertisement

ನಾಗರಹೊಳೆ ಉದ್ಯಾನದ 8 ವಲಯಗಳನ್ನು ಎರಡು ಬ್ಲಾಕ್‌ಗಳನ್ನಾಗಿ ವಿಂಗಡಿಸಿದ್ದು, ಮೊದಲ ಹಂತದಲ್ಲಿ ಎರಡನೇ ಬ್ಲಾಕ್‌ನ ನಾಗರಹೊಳೆ, ಕಲ್ಲಹಳ್ಳ, ಅಂತರಸಂತೆ, ಡಿ.ಬಿ.ಕುಪ್ಪೆ ವಲಯಗಳಲ್ಲಿ ಕ್ಯಾಮರಾ ಟ್ರ್ಯಾಪಿಂಗ್ ಮೂಲಕ ಹುಲಿ ಗಣತಿ ನಡೆಸಲಾಗಿದೆ. ಭಾನುವಾರದಿಂದ ಆರಂಭವಾಗಿರುವ  ಹುಲಿಯ ಆಹಾರ ಸರಪಳಿಯ ಸಸ್ಯಹಾರಿ ಪ್ರಾಣಿಗಳ ಹಾಗೂ ಸಸ್ಯ ಪ್ರಭೇಧಗಳ ಗಣತಿಕಾರ್ಯವು ಮೂರು ದಿನ ಕಾಲ ನಡೆಯಲಿದೆ.

ಮೇ.1ರಿಂದ ಕ್ಯಾಮರಾ ಟ್ರಾಪಿಂಗ್ ಮೂಲಕ ಗಣತಿ ಕಾರ್ಯ ಆರಂಭಗೊಂಡಿದೆ. ಎ.ಸಿ.ಎಫ್, ಆರ್.ಎಫ್.ಓಗಳು, ಸಿಬ್ಬಂದಿಗಳು ಹಾಗೂ  ಎಪಿಸಿ ವಾಚರ್‍ಸ್ ಸೇರಿದಂತೆ ಸುಮಾರು ೧೫೦ ಸಿಬ್ಬಂದಿಗಳು, ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಜೂನ್ ೧ ರಿಂದ ಮೊದಲ ಬ್ಲಾಕ್‌ನಲ್ಲಿ ಗಣತಿ ಆರಂಭಗೊಳ್ಳಲಿದೆ.

ಸಸ್ಯಹಾರಿ ಪ್ರಾಣಿ-ಸಸ್ಯಪ್ರಬೇಧಗಳ ಸಮೀಕ್ಷೆ:

ನಾಲ್ಕು ವಲಯಗಳ ಎಲ್ಲ ಬೀಟ್‌ಗಳಲ್ಲೂ ಟ್ರ್ಯಾನ್ಸಾಕ್ಟ್ ಲೈನ್ ಮೂಲಕ ಸಿಬ್ಬಂದಿಗಳು ಕಾಲ್ನಡಿಗೆಯಲ್ಲಿ ಎರಡು ಕಿ.ಮೀ ಸಂಚರಿಸಿ, ಚದರ ಕಿ.ಮೀ.ಪ್ರದೇಶದಲ್ಲಿ ಹುಲಿಯ ಆಹಾರವಾದ ಚುಕ್ಕಿಜಿಂಕೆ, ಕಾಡೆಮ್ಮೆ, ಕಾಡುಕುರಿ, ಕಡವೆ ಮತ್ತಿತರ ಸಸ್ಯಹಾರಿ ಪ್ರಾಣಿಗಳ ಗಣತಿ ಜೊತೆಗೆ ಸಸ್ಯಪ್ರಭೇಧಗಳ ಸಾಂದ್ರತೆಯನ್ನು ಸಮೀಕ್ಷೆ ಮಾಡಿ,  ಎಕೋಲಾಜಿಕಲ್ ಆಫ್ ಮೂಲಕ ಮಾಹಿತಿ ದಾಖಲಿಸಿಕೊಳ್ಳಲಿದ್ದಾರೆಂದರು.

Advertisement

ರಾಷ್ಟ್ರೀಯ ಹುಲಿ ಗಣತಿಗೆ ಸಿದ್ದತೆ:

ಪ್ರತಿ ನಾಲ್ಕುವರ್ಷಕ್ಕೊಮ್ಮೆ ನಡೆಯುವ  ೫ನೇ ರಾಷ್ಟ್ರೀಯ ಹುಲಿಗಣತಿಯು ಪ್ರಸ್ತುತ ನಡೆಯುತ್ತಿರುವ ವಾರ್ಷಿಕ ಗಣತಿಯ ನಂತರ ಅಂದರೆ ಬರುವ ಮಾರ್ಚ್ ೨೦೨೨ರೊಳಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾನದಂಡದಂತೆ ೫ನೇ ರಾಷ್ಟ್ರೀಯ ಗಣತಿ ಕಾರ್ಯ ನಡೆಯಲಿದೆ.  ಇದಕ್ಕಾಗಿ ಎಲ್ಲ ಸಿದ್ದತೆ ಕೈಗೊಳ್ಳಲಾಗಿದೆ.

ರಣಹದ್ದುಗಳ ಮಾಹಿತಿಯೂ ಸಮೀಕ್ಷೆಯಲ್ಲಿ ಲಭ್ಯ:

೨೦೧೯-೨೦ರ ವನ್ಯಜೀವಿ ಸಪ್ತಾಹದ ಧ್ಯೆಯವಾಗಿದ್ದ  ರಣಹದ್ದುಗಳ ಸಂರಕ್ಷಣೆ ಕುರಿತ ಯೋಜನೆಯಿಂದಾಗಿ ಈ ಬಾರಿಯ ಹುಲಿ ಗಣತಿ ನಡೆಯುವ ಈ ವೇಳೆ ಸಸ್ಯಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇಧಗಳ ಸಮೀಕ್ಷೆ ಜೊತೆಗೆ ರಣಹದ್ದುಗಳ ಮಾಹಿತಿಯನ್ನೂ ಸಂಗ್ರಹಿಸಲಾಗುವುದು.

ಜೂ.೧ರಿಂದ ಮೊದಲ ಬ್ಲಾಕ್ ನಲ್ಲೂಗಣತಿ:

ಉದ್ಯಾನದ ಹುಣಸೂರು, ವೀರನಹೊಸಹಳ್ಳಿ, ಆನೆಚೌಕೂರು, ಮೇಟಿಕುಪ್ಪೆ ವಲಯಗಳು  ಮೊದಲ ಬ್ಲಾಕ್‌ಗೆ ಸೇರಿದ್ದು. ಜೂನ್.೧ರಿಂದ ಎರಡನೇ ಹಂತದ ಹುಲಿ ಗಣತಿ ಆರಂಭಗೊಳ್ಳಲಿದ್ದು.   ಗಣತಿಗಾಗಿ ಉದ್ಯಾನದಲ್ಲಿ ೪೫೦ ಕ್ಯಾಮರಾ ಅಳವಡಿಸಲಾಗುವುದು. ಹುಲಿಗಣತಿಯಿಂದ ಉದ್ಯಾನ ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ.  ( ಡಿ.ಮಹೇಶ್‌ಕುಮಾರ್, ಮುಖ್ಯಸ್ಥರು, ಹುಲಿಯೋಜನೆ, ನಾಗರಹೊಳೆ.)

Advertisement

Udayavani is now on Telegram. Click here to join our channel and stay updated with the latest news.

Next