Advertisement

ಜಗಜ್ಯೋತಿ ಕಲಾವೃಂದದ ವಾರ್ಷಿಕ ಕಥಾ ಮತ್ತು ಕಾವ್ಯ ಪ್ರಶಸ್ತಿ ಪ್ರದಾನ

04:49 PM Feb 22, 2017 | |

ಡೊಂಬಿವಲಿ: ಸಾಹಿತ್ಯ ಸೇವೆಯೇ ಮೂಲ ಮಂತ್ರವಾಗಿಸಿಕೊಂಡಿದ್ದ ಓರ್ವ ಮಹಿಳೆಯ ಸವಿನೆನಪಿನಲ್ಲಿ ಮಹಿಳೆಯರಿಗಾಗಿ ಅಖೀಲ ಭಾರತ ಮಟ್ಟದಲ್ಲಿ ಕತೆ ಹಾಗೂ ಕಾವ್ಯ ಸ್ಪರ್ಧೆಯನ್ನು ಸುಮಾರು 20 ವರ್ಷಗಳಿಂದ  ಆಯೋಜಿಸುತ್ತಿರುವ ಜಗಜ್ಯೋತಿ ಕಲಾವೃಂದದ ಕಾರ್ಯ ಅಭಿನಂದನೀಯ. ಇದರೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಇನ್ನಿತರ ಕ್ಷೇತ್ರಗಳಲ್ಲಿ ವೃಂದದ ಕಾರ್ಯ ವೈಖರಿ ಅನುಕರಣೀಯವಾಗಿದೆ. ನಾಡು-ನುಡಿಯ ಬಲ ವರ್ಧನೆಗೆ ಶ್ರಮಿಸುತ್ತಿರುವ ಜಗಜ್ಯೋತಿ ಕಲಾವೃಂದಕ್ಕೆ ಎಲ್ಲರ ಪ್ರೋತ್ಸಾಹ, ಸಹಕಾರ ಅಗತ್ಯವಾಗಿದೆ ಎಂದು ಥಾಣೆ ಬಂಟ್ಸ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆರತಿ ಯೋಗೇಶ್‌ ಶೆಟ್ಟಿ  ಹೇಳಿದರು.

Advertisement

ಇತ್ತೀಚೆಗೆ ಠಾಕೂರ್‌ ಸಭಾಗೃಹದಲ್ಲಿ ಜರಗಿದ ಜಗಜ್ಯೋತಿ ಕಲಾವೃಂದದ ವಾರ್ಷಿಕ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಮತ್ತು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಸ್ಥೆಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಇದರ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಈ ಸಂಸ್ಥೆಯು ಜಾತಿ, ಮತ ಭೇದವಿಲ್ಲದೆ ನಾಡು-ನುಡಿ, ಸಂಸ್ಕೃತಿ ಬಲವರ್ಧನೆಗೆ ಶ್ರಮಿಸುತ್ತಿದೆ. ಕನ್ನಡಾಂಭೆಯ ಇಂತಹ ಕಾರ್ಯಕ್ರಮಗಳಲ್ಲಿ ನಾವೆಲ್ಲರು ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.

ಇನ್ನೋರ್ವ ಅತಿಥಿ ಜಿ. ಎಸ್‌. ಶೆಟ್ಟಿ ಇಂಟರ್‌ ನ್ಯಾಶನಲ್‌ ಶಾಲೆ ಭಾಂಡೂಪ್‌ ಇದರ ಕಾರ್ಯಾ ಧ್ಯಕ್ಷ ಶಂಕರ ಎ. ಶೆಟ್ಟಿ ಅವರು ಮಾತನಾಡಿ ಶುಭ ಹಾರೈಸಿದರು. ಸರ್ಜನ್‌ ಡಾ| ದಿಲೀಪ್‌ ಕೋಪರ್ಡೆ ಅವರು ಮಾತನಾಡಿ, ತಾಯಿ-ತಂದೆಯರ ಋಣ, ಗುರು, ಅನ್ನ, ಮಣ್ಣಿನ ಋಣದ ಮೂಲಕ ನಿಸ್ವಾರ್ಥ ದೃಷ್ಟಿಯಿಂದ ಸಮಾಜಮುಖೀ ಕಾರ್ಯ ಮಾಡಬೇಕು. ಅಂತಹ ಉಧಾತ್ತ ಸೇವೆಯನ್ನು ಮಾಡುತ್ತಿರುವ ಜಗಜ್ಯೋತಿ ಕಲಾವೃಂದದ ಸಮಾಜಮುಖೀ ಕಾರ್ಯಗಳು ಸುವರ್ಣಾಕ್ಷರಗಳಲ್ಲಿ ಉಲ್ಲೇಖೀಸುವಂತದ್ದಾಗಿದೆ ಎಂದು ನುಡಿದರು.

ಸಮಾರಂಭದಲ್ಲಿ ಕಥಾ ಪ್ರಶಸ್ತಿ ಪಡೆದ ಲಲಿತಾ ಹೊಸಪ್ಯಾಟಿ ಬೆಂಗಳೂರು ಅವರು ಮಾತನಾಡಿ, ಬಾಗಲಕೋಟೆಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನಾಲ್ಕು ಮಂದಿಗೆ ಲಭಿಸಿದಂತಾಗಿದೆ. ಈ ಮನಬೆಸೆಯುವ ಸಾಹಿತ್ಯ ಸಂಬಂಧದಿಂದ ಮನಸ್ಸು ಮಲ್ಲಿಗೆಯಾಗಿದೆ. ಹೃದಯವು ಮಧುರವಾಗಿದೆ. ಹೊರನಾಡ ಕನ್ನಡಿಗರ ಸುಸಂಸ್ಕೃತ ಮನಸ್ಸು, ಹೃದಯ ವೈಶಾಲ್ಯತೆ, ಶಿಸ್ತಿನ ಕಾರ್ಯ ಅಭಿನಂದನೀಯ ಎಂದರು.

Advertisement

ಕಾವ್ಯ ಪ್ರಶಸ್ತಿ ವಿಜೇತೆ ರೇಣುಕಾ ರಮಾನಂದ ಅಂಕೋಲ ಅವರು ಮಾತನಾಡಿ, ಸಾಹಿತ್ಯ ಬೇರು ಗಟ್ಟಿಗೊಳ್ಳಲು ಜರಗುವ ಪುರಸ್ಕಾರವು ಸಮಯೋಚಿತ ಜೀವಸತ್ವ ನೀಡುತ್ತದೆ. ಹೊರನಾಡಿರಲ್ಲಿದ್ದರೂ ಮಾತೃ ಭಾಷೆಯನ್ನು ನಿಂತ ನೀರಾಗಿಸದೆ  ಮಿಂಚಿನ ಸಂಚಾರ ನೀಡುತ್ತಿರುವ ಸಂಸ್ಥೆಯ ಕಾರ್ಯ ಮಾದರಿ ಎಂದರು.

ಪ್ರಶಸ್ತಿ ಸಮಿತಿಯ ಸಲಹೆಗಾರ ಶೇಖರ್‌ ಆರ್‌. ಶೆಟ್ಟಿ ಇನ್ನ ಅವರು ಪ್ರಶಸ್ತಿಯ ಹಿನ್ನೆಲೆಯನ್ನು ವಿವರಿಸಿದರು. ಸಮ್ಮಾನ ಸ್ವೀಕರಿಸಿದ ಡಾ| ಜಿ. ಪಿ. ಕುಸುಮಾ ಮಾತನಾಡಿ, ಸಂಸಾರ ಸಾಗರದಲ್ಲಿದ್ದುಕೊಂಡು ಕನ್ನಡ ಮನಸುಗಳನ್ನು ಒಂದುಗೂಡಿಸಿ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ವೃಂದದ ಕಾರ್ಯ ನಿತ್ಯನಿರಂತನವಾಗಿರಲಿ ಎಂದು ಶುಭ ಹಾರೈಸಿದರು. ಗಣ್ಯರು ಸಂಸ್ಥೆಯ ವಾರ್ಷಿಕ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಯೋಗಿನಿ ಶೆಟ್ಟಿ ಮತ್ತು ಸುನಂದಾ ಶೆಟ್ಟಿ ಪ್ರಾರ್ಥನೆಗೈದರು.

ಸಂಸ್ಥೆಯ ಅಧ್ಯಕ್ಷ ವಸಂತ ಸುವರ್ಣ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಂತೋಷ್‌ ಪಿ. ಶೆಟ್ಟಿ ಸಂಘದ ಸಾಧನೆಗಳನ್ನು ವಿವರಿಸಿದರು. ಪ್ರಶಸ್ತಿ ಸಮಿತಿಯ ಸಲಹೆಗಾರ ಸನತ್‌ ಕುಮಾರ್‌ ಜೈನ್‌ ಪ್ರಶಸ್ತಿ ವಿಜೇತರನ್ನು ಪರಿಚಯಿಸಿ, ಸಮ್ಮಾನ ಪತ್ರ ವಾಚಿಸಿದರು. ಅತಿಥಿಗಳನ್ನು ಉಪಾಧ್ಯಕ್ಷ ರಮೇಶ್‌ ಶೆಟ್ಟಿ, ರಾಜು ಆರ್‌. ಸುವರ್ಣ, ಕೋಶಾಧಿಕಾರಿ ಚಂದ್ರ ನಾಯ್ಕ, ಸಂಘಟನಾ ಜತೆ ಕಾರ್ಯದರ್ಶಿ ಬಾಬು ಮೊಗವೀರ ಅವರು ಪರಿಚಯಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರು ಅತಿಥಿಗಳನ್ನು ಗೌರವಿಸಿದರು. ಪ್ರತಿಭಾವಂತ ಮಕ್ಕಳನ್ನು, ಗಣ್ಯರನ್ನು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕಲಾವಿದರನ್ನು ಗೌರವಿಸಲಾಯಿತು. ವೃಂದದ ಮಾಜಿ ಅಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಆಶೀಷ್‌ ಸೀತಾರಾಮ ಶೆಟ್ಟಿ ಹಾಗೂ ಗಣ್ಯರು, ಸಂಘದ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next