ದುಬೈ : ರೋಹಿತ್ ಶರ್ಮಾ ನಾಯತ್ವದ ಭಾರತ ತಂಡ 2021-22 ರ ಋತುವಿನಲ್ಲಿ ತವರಿನಲ್ಲಿ ಪ್ರಭಾವಶಾಲಿ ಪ್ರದರ್ಶನಗಳ ನಂತರ ಬುಧವಾರ ಐಸಿಸಿ ಬಿಡುಗಡೆ ಮಾಡಿದ ವಾರ್ಷಿಕ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಟಿ20 ತಂಡವಾಗಿಹೊರ ಹೊಮ್ಮಿದೆ. ಆದರೆ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದ್ದು, ಭಾರತ ಆಸೀಸ್ ಗಿಂತ 9 ಅಂಕಗಳನ್ನು ಕಡಿಮೆ ಹೊಂದಿದೆ. ನ್ಯೂಜಿಲೆಂಡ್‌ನ ವಿಶ್ವದ ನಂ.1 ಏಕದಿನ ತಂಡವಾಗಿ ಹೊರ ಹೊಮ್ಮಿದೆ.
ಇಂದು ಘೋಷಣೆಯಾದ ರ‍್ಯಾಂಕಿಂಗ್ ನಲ್ಲಿ ಐಸಿಸಿ ಪುರುಷರ ಟೆಸ್ಟ್ ತಂಡ ಶ್ರೇಯಾಂಕದಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಆರನೇ ಸ್ಥಾನಕ್ಕೆ ತಳ್ಳಿದರೆ, ಆಸ್ಟ್ರೇಲಿಯಾವು ಎರಡನೇ ಸ್ಥಾನದಲ್ಲಿರುವ ಭಾರತಕ್ಕಿಂತ ಒಂಬತ್ತು ಅಂಕಗಳ ಮುನ್ನಡೆ ಹೊಂದಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಸತತ 5 ವರ್ಷಗಳ ಕಾಲ ಟೆಸ್ಟ್ ನಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತವನ್ನು ಆಸ್ಟ್ರೇಲಿಯಾ ಈ ವಾರ್ಷಿಕ ಶ್ರೇಯಾಂಕದಲ್ಲಿ ಹಿಂದಿಕ್ಕಿದೆ. ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.
ಭಾರತವು ಟಿ20ಯಲ್ಲಿ ಅಗ್ರಸ್ಥಾನದಲ್ಲಿದೆ, ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ಗಿಂತ ತಮ್ಮ ಮುನ್ನಡೆಯನ್ನು ಒಂದರಿಂದ ಐದು ಅಂಕಗಳಿಗೆ ವಿಸ್ತರಿಸಿದೆ. ಇದೀಗ ಆರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಅನ್ನು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಹಿಂದಿಕ್ಕಿವೆ. ಅದೇ ರೀತಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಈಗ ಅಫ್ಘಾನಿಸ್ತಾನಕ್ಕಿಂತ (10ನೇ ಸ್ಥಾನ) ಮುಂದಿವೆ. ಪಾಕಿಸ್ತಾನ ಮೂರನೇ ಸ್ಥಾನ, ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನ ಐದನೇ ಸ್ಥಾನ ದಲ್ಲಿ ಆಸ್ಟ್ರೇಲಿಯಾ , ಆ ಬಳಿಕ ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ಇದೆ.
ನವೀಕರಿಸಿದ ಏಕದಿನ ಶ್ರೇಯಾಂಕದಲ್ಲಿ, ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ ಆದರೆ ಇಂಗ್ಲೆಂಡ್ ವಿರುದ್ಧದ ಅವರ ಮುನ್ನಡೆ ಮೂರರಿಂದ ಒಂದು ಅಂಕಕ್ಕೆ ಕಡಿಮೆಯಾಗಿದೆ. ಇಂಗ್ಲೆಂಡ್ ಹಾಗೂ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ನಡುವಿನ ಅಂತರ ಏಳರಿಂದ 17ಕ್ಕೆ ಏರಿಕೆಯಾಗಿದೆ. ಏಕದಿನದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.5 ನೇ ಸ್ಥಾನದಲ್ಲಿ ಪಾಕಿಸ್ತಾನವಿದೆ.