ಕಾಪು: ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಶಿಕ್ಷಕ – ರಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಎರಡು ಹಂತಗಳಲ್ಲಿ ಜು. 8ರಂದು ಶಾಲೆಯ ಸಭಾ ಭವನದಲ್ಲಿ ನಡೆಯಿತು.
ಶಾಲಾ ಸಂಚಾಲಕ ಡಾ| ಕೆ. ಪ್ರಭಾಕರ ಶೆಟ್ಟಿ ಮಾತನಾಡಿ, ಪಿಯುಸಿ ವಿಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷದಂತೆ ಈ ವರ್ಷವೂ ಸುಮಾರು 7 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ. ಇದೇ ರೀತಿಯಲ್ಲಿ ಸಂಸ್ಥೆ ಮುನ್ನಡೆಯ ಬೇಕಾದರೆ ಪೋಷಕರು ಇನ್ನಷ್ಟು ಉತ್ತಮ ರೀತಿಯ ಸಹಕಾರ ನೀಡುವಂತಾಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಜಯ ಪಿ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಹೆತ್ತವರು ಪರಸ್ಪರ ಹೊಂದಾಣಿಕೆಯಿಂದ ಮಕ್ಕಳ ಮತ್ತು ಶಾಲೆಯ ಪ್ರಗತಿಗೆ ಕಾರಣರಾಗಬೇಕು. ಅತ್ಯುತ್ತಮ ಆಡಳಿತ ಮಂಡಳಿಯಿಂದಾಗಿ ವಿದ್ಯಾ ಸಂಸ್ಥೆಯು ಜಿಲ್ಲೆಯಲ್ಲಿ ಗೌರವವನ್ನು ಪಡೆದುಕೊಂಡಿದೆ ಎಂದರು. ಡಾ| ಮನೋಜ್ ಶೆಟ್ಟಿ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಎಸ್. ಎಸ್. ಎಲ್. ಸಿ. ಮತ್ತು ಪಿ. ಯು. ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್, ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಚಿತ್ರಲೇಖ ಟಿ. ಶೆಟ್ಟಿ ವಿವಿಧ ಮಾಹಿತಿ ನೀಡಿದರು. ಆಡಳಿತ ಮಂಡಳಿ ಸದಸ್ಯ ಡಾ| ಕೆ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ಸೂರತ್ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ನೀಲಾನಂದ ನಾಯ್ಕ ವರದಿ ಹಾಗೂ ಲೆಕ್ಕ ಪತ್ರದ ವಿವರಣೆ ನೀಡಿದರು. ಗ್ಯಾಬ್ರಿಯಲ್ ಎಫ್. ಮಸ್ಕರೇನಸ್ ಮತ್ತು ದೆ„ಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಶೆಟ್ಟಿ ವಂದಿಸಿದರು. ಶಿವಣ್ಣ ಬಾಯಾರ್ ಮತ್ತು ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.