Advertisement

5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ: ಶಿಕ್ಷಣ ಇಲಾಖೆ ಆದೇಶ

12:31 AM Dec 14, 2022 | Team Udayavani |

ಬೆಂಗಳೂರು: ಮಕ್ಕಳ ಶೈಕ್ಷಣಿಕ ಗುಣಮಟ್ಟ ಅಳೆಯಲು 5 ಹಾಗೂ 8ನೇ ತರಗತಿಗಳಿಗೂ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.

Advertisement

ನವೆಂಬರ್‌ 2022ರಿಂದ ಮಾರ್ಚ್‌ 2023ರವರೆಗೆ ಪಠ್ಯಪುಸ್ತಕ ಆಧರಿಸಿ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯು 50 ಅಂಕಗಳಿಗೆ ಇರಲಿದೆ. 2 ಗಂಟೆ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. 40 ಅಂಕದ ಲಿಖೀತ ಪರೀಕ್ಷೆಯಲ್ಲಿ 20 ಅಂಕ ಬಹು ಆಯ್ಕೆ ಮಾದರಿ ಹಾಗೂ 20 ಅಂಕಕ್ಕೆ ವಾಕ್ಯ ರೂಪದಲ್ಲಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ. 40 ಅಂಕಗಳು ಲಿಖೀತ ಪರೀಕ್ಷೆ, 10 ಅಂಕಗಳು ಮೌಖೀಕ ಪರೀಕ್ಷೆಯಾಗಿದೆ.

ಆಯಾ ತಾಲೂಕು ಕೇಂದ್ರದಲ್ಲಿನ ಒಂದು ಶಾಲೆಯ ಮೌಲ್ಯಮಾಪನ ಕೇಂದ್ರವಾಗಿ ನಿಗದಿಪಡಿಸಿ 5ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗುವುದು. ಪ್ರತೀ ಬ್ಲಾಕ್‌ನಲ್ಲಿ ಒಂದು ಶಾಲೆಯಲ್ಲಿ ಗುರುತಿಸಿ 8ನೇ ತರಗತಿಯ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ. ಮುಂದಿನ ವರ್ಷದಿಂದ 50 ಅಂಕಗಳ ಬದಲಾಗಿ 60 ಅಂಕಗಳಿಗೆ ಸಿಸಿಇ, 40 ಅಂಕಗಳಿಗೆ ಲಿಖೀತ ಪರಿಕ್ಷೆ ನಡೆಸಲಿದೆ. ಇನ್ನೂ 8ನೇ ತರಗತಿಗೆ 40 ಅಂಕಗಳಿಗೆ ಸಿಸಿಇ ಮತ್ತು 60 ಅಂಕಗಳಿಗೆ ಲಿಖೀತ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಮಾ. 9ರಿಂದ 17ರೊಳಗೆ ಪರೀಕ್ಷೆ ?
ಪರೀಕ್ಷೆಯು ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಮಾ. 9ರಿಂದ 17ರೊಳಗೆ ನಡೆಯಲಿದೆ. ಮೌಲ್ಯಮಾಪನವು ಮಾ. 21 ಮತ್ತು 28ರಂದು ನಡೆಯಲಿದೆ. ಫಲಿತಾಂಶ ಎ.8ರಿಂದ 10ರೊಳಗೆ ಪ್ರಕಟಿಸಬೇಕಿದೆ ಎಂದು ವೇಳಾಪಟ್ಟಿಯಲ್ಲಿ ಹೇಳಲಾಗಿದೆ.

ಫಲಿತಾಂಶ ನಿಯಮಗಳೇನು?
ಎಫ್‌ಎ-1ರಿಂದ 4 ಅಂಕಗಳು ಹಾಗೂ ಎಸ್‌ಎ-1 ಅಂಕಗಳು ಪ್ರಸ್ತುತ ಎಸ್‌ಎ-2 ಅಂಕಗಳು ಸೇರಿ 100 ಅಂಕಗಳಾಗಲಿದೆ. ಪ್ರತೀ ವಿದ್ಯಾರ್ಥಿ 100 ಅಂಕಕ್ಕೆ ಶೇ. 30 ಅಂಕ ಗಳಿಸಿದಲ್ಲಿ, ಪ್ರಗತಿ ಸಾಧಿಸಿದಂತಾಗುತ್ತದೆ. ಇದಕ್ಕಿಂತ ಕಡಿಮೆ ಅಂಕ ಗಳಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಇನ್ನೂ ಪ್ರಗತಿ ಸಾಧಿಸಬೇಕೆಂದು ನಿರ್ಧರಿಸಿ ಜೂನ್‌- ಜುಲೈ ತಿಂಗಳ ಕೊನೆಯಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಮೌಲ್ಯಾಂಕನವನ್ನು ಎಸ್‌ಎ ಮತ್ತು ಎಫ್‌ಎ ಅಂಕಗಳನ್ನು ಕ್ರೂಡೀಕರಿಸಿ ಒಟ್ಟು 100 ಅಂಕಗಳಿಗೆ ಅಂತಿಮಗೊಳಿಸಿ ಫಲಿತಾಂಶ ನಿರ್ಣಯದ ಕುರಿತು ಸ್ಪಷ್ಟ ಆದೇಶವನ್ನು ಹೊರಡಿಸಲು ಡಿಎಸ್‌ಇಆರ್‌ಟಿಗೆ ಸೂಚನೆ ನೀಡಲಾಗಿದೆ.

Advertisement

ಪರೀಕ್ಷಾ ನೋಂದಣಿ ಪ್ರಕ್ರಿಯೆ
2022-23ನೇ ಸಾಲಿನ ಪರೀಕ್ಷೆ ಮತ್ತು ನಿರ್ವಹಣ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರ ಆದೇಶಿಸಿದೆ. ಪ್ರತೀ ಶಾಲೆಯು ಸ್ಯಾಟ್ಸ್‌ ಪ್ರಕಾರ ದಾಖಲಾಗಿರುವ ರಾಜ್ಯ ಪಠ್ಯಕ್ರಮದ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಸ್ಯಾಟ್ಸ್‌ನಲ್ಲಿ ನೋಂದಾಯಿಸಿದಂತೆ ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವಿದ್ಯಾರ್ಥಿಗಳ ಪಟ್ಟಿ ಸಲ್ಲಿಸಬೇಕು. ಅದರ ಆಧಾರದ ಮೇಲೆ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲಾಗುವುದು.

ಪ್ರವೇಶ ಪತ್ರ ಮುದ್ರಣ ಮತ್ತು ವಿತರಣೆ
ಎಸ್‌.ಎ.ಟಿ.ಎಸ್‌.ನಲ್ಲಿ ನೋಂದಣಿಯಾಗಿರುವ 5 ಮತ್ತು 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶಾಲಾ ಹಂತದಲ್ಲಿ ಮುಖ್ಯೋಪಾಧ್ಯಾಯರು ಆನ್‌ಲೈನ್‌ನಲ್ಲಿ ಮಾಹಿತಿ ಪಡೆದು ಪ್ರವೇಶ ಪತ್ರ ಮುದ್ರಿಸಿ ವಿತರಣೆ ಮಾಡಬೇಕು.

ಪರೀಕ್ಷಾ ಕೇಂದ್ರಗಳ ಸ್ಥಾಪನೆ
ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀûಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ, ಶಾಲಾವಾರು ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ.ಮೀ. ವ್ಯಾಪ್ತಿಯ ಅಗತ್ಯ ಮೂಲ ಸೌಲಭ್ಯ ಹೊಂದಿರುವ ಸಮೀಪದ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳೂ ಸೇರಿ ಪರೀûಾ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಬೇಕು. 8ನೇ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 80 ಮಕ್ಕಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಸ್ಥಾಪಿಸಬೇಕು. ಹಿರಿಯ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಕನಿಷ್ಠ 2 ಕಿ.ಮೀ. ವ್ಯಾಪ್ತಿಯ ಸಮೀಪದ ಶಾಲೆಗಳಿಗೆ ಲಗತ್ತಿಸುವುದು.

ಸಾಧನೆ ತಿಳಿಯುವ ಉದ್ದೇಶ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಶ್ನೆ ಪತ್ರಿಕೆ ರೂಪಿಸಿ, ಸರಬರಾಜು ಮಾಡಿ ಶಾಲಾ ಹಂತದಲ್ಲಿ ಪರೀಕ್ಷೆ ಆಯೋಜಿಸಿ, ಫಲಿತಾಂಶ ನೀಡಲಿದೆ. ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯುವುದಕ್ಕಾಗಿ ಶಿಕ್ಷಣ ಈ ಪರೀಕ್ಷೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next