Advertisement

ತರಕಾರಿ ವ್ಯಾಪಾರಿಗಳಿಗೆ ಕಿರಿಕಿರಿ

05:50 AM Mar 08, 2019 | |

ವಾಡಿ: ಪಟ್ಟಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತಿದ್ದು, ತರಕಾರಿ ವ್ಯಾಪಾರಿಗಳು ಪುರಸಭೆ ಕಾಂಗ್ರೆಸ್‌ ಆಡಳಿತದ ಕಿರಿಕಿರಿಗೆ ಬೇಸತ್ತು ಹೋಗಿದ್ದಾರೆ. ತರಕಾರಿ ಮಾರಲು ಬಂದವರನ್ನು ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಪದೇಪದೆ ಒಕ್ಕಲೆಬ್ಬಿಸುತ್ತಿರುವುದು ವ್ಯಾಪಾರಿಗಳ ಪರದಾಟಕ್ಕೆ ಕಾರಣವಾಗಿದೆ.

Advertisement

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಾರದ ಸಂತೆಗೆ ಸೂಕ್ತ ಮಾರುಕಟ್ಟೆ ನಿರ್ಮಿಸಿಲ್ಲ. ವ್ಯಾಪಾರಿಗಳಿಗೆ ಮಳಿಗೆಗಳ ಸೌಲಭ್ಯವನ್ನು ಒದಗಿಸಿಲ್ಲ. ದೂರದ ಗ್ರಾಮಗಳಿಂದ ತರಕಾರಿಗಳ ಗಂಟು ಹೊತ್ತು ಬರುವ ಬೀದಿ ವ್ಯಾಪಾರಿಗಳಿಗೆ ಕುಡಿಯುವ ನೀರು, ನೆರಳು ಹಾಗೂ ಶೌಚಾಲಯ ಸೌಲಭ್ಯ ಒದಗಿಸದೆ ಕಷ್ಟದ ಕೂಪಕ್ಕೆ ತಳ್ಳಿರುವ ಪುರಸಭೆ ಆಡಳಿತ, ಪುರಸಭೆ ಸದಸ್ಯರ ಒತ್ತಡಕ್ಕೆ ಮಣಿದು ವ್ಯಾಪಾರಿಗಳ ಗಂಟು-ಮೂಟೆಗಳನ್ನು ಬೀದಿಗೆಸೆದು ರಂಪಾಟ ನಡೆಸುವ ಮೂಲಕ ಅಮಾನವೀಯವಾಗಿ ವರ್ತಿಸಿದ ಘಟನೆ ಗುರುವಾರ ಸಂತೆಯಲ್ಲಿ ನಡೆದಿದೆ. 

ಗುರುವಾರ ಎಂದಿನಂತೆ ಆಜಾದ್‌ ವೃತ್ತ-ರೈಲು ನಿಲ್ದಾಣ ರಸ್ತೆಯಲ್ಲಿ ತರಕಾರಿ ಮಾರಾಟಕ್ಕೆ ಅಣಿಯಾಗಿದ್ದ ನೂರಾರು ಜನ ಬೀದಿ ವ್ಯಾಪಾರಿಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದಾರೆ. ಈ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡದೆ, ಮಾಂಸ ಮಾರುಕಟ್ಟೆ ರಸ್ತೆಯಲ್ಲಿ ವ್ಯಾಪಾರ ಮಾಡಬೇಕು. 

ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಪುರಸಭೆ ಸಿಬ್ಬಂದಿ ಅಮಾನುಷವಾಗಿ ವರ್ತಿಸಿದ್ದಾರೆ. ವ್ಯಾಪಾರಿಗಳ ಗಂಟು ಮೂಟೆ ರಸ್ತೆಗೆ ಎಸೆದು ದರ್ಪ ಮೆರೆದಿದ್ದಾರೆ. ಮುಖ್ಯಾಧಿಕಾರಿಗಳು ಮತ್ತು ಪುರಸಭೆ ಸದಸ್ಯ ಗೌಸ್‌ ನಮಗೆ ಈ ಆದೇಶ ನೀಡಿದ್ದಾರೆ. ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಮ್ಮೂರ ಸಂತೆಗೆ ಬರಬೇಡಿ ಎಂದು ಗದರಿದ್ದಾರೆ ಎಂದು ತರಕಾರಿ ವ್ಯಾಪಾರಿಗಳಾದ ಸುವರ್ಣ ಯರಗೋಳ, ನಿಂಗಮ್ಮ, ದಾನಮ್ಮ ಶಹಾಬಾದ, ಅಂಜಮ್ಮ ರಾವೂರ, ಮಲ್ಲಮ್ಮ ಗಾಣಗಾಪುರ, ದೇವಿಂದ್ರಪ್ಪ ಅಲ್ಲಿಪುರ, ಖಾಜಾ ಮೈನೋದ್ದೀನ್‌ ಶಹಾಬಾದ, ಜ್ಞಾನಮಿತ್ರ ಅಲ್ಲಿಪುರ ಹಾಗೂ ಮತ್ತಿರರು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರ ಎದುರು ಅಳಲು ತೋಡಿಕೊಂಡರು.

ಪುರಸಭೆ ಆಡಳಿತದಿಂದ ತರಕಾರಿ ವ್ಯಾಪಾರಿಗಳಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಿ ಕಣ್ಣೀರು ಒರೆಸುವವರು ಯಾರೂ ಇಲ್ಲದಿರುವುದು ವಿಪರ್ಯಾಸದ ಸಂಗತಿ. 

Advertisement

ನಾವು ಐದಾರು ವರ್ಷಗಳಿಂದ ವಾಡಿ ಸಂತೆಗೆ ಬರುತ್ತಿದ್ದೇವೆ. ಎಲ್ಲೆಂದರಲ್ಲಿ ಚರಂಡಿ ನೀರು, ಗಬ್ಬು ವಾಸನೆ ಇರುತ್ತದೆ. ಅಂತಹ ಜಾಗದಲ್ಲಿ ಕುಳಿತು ತರಕಾರಿ ಮಾರಿದರೆ ವ್ಯಾಪಾರ ಆಗುವುದಿಲ್ಲ. ಮಾಂಸ ಮಾರುಕಟ್ಟೆ ರಸ್ತೆಯಲ್ಲಿ ಕೂಡಲು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲಿ ಪರಿಸರ ಸರಿಯಾಗಿಲ್ಲ. ಮಾಂಸದ ಮೇಲೆ ಕುಳಿತ ಹಾಗೂ ಗಟಾರದೊಳಗಿನ ನೊಣಗಳು ಬಂದು ತರಕಾರಿ ಮೇಲೆ ಕೂಡುತ್ತವೆ. ಇಡೀ ದಿನ ನಾವು ಗಬ್ಬು ವಾಸನೆ ಸೇವಿಸಬೇಕು. ವ್ಯಾಪಾರವೂ ನಷ್ಟವಾಗುತ್ತದೆ. ವ್ಯಾಪಾರ ಆಗುವ ಜಾಗದಲ್ಲಿ ಕೂಡಲು ಪುರಸಭೆಯವರು ಬಿಡುತ್ತಿಲ್ಲ. ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ. ನಮಗೆ ಸೂಕ್ತ ಮಾರುಕಟ್ಟೆ ಬೇಕು. ಕಿರಿಕಿರಿ ಮುಂದುವರಿಸಿದರೆ ಜಿಲ್ಲಾಧಿಕಾರಿಗೆ ದೂರು ಕೊಡುತ್ತೇವೆ.
 ಮಲ್ಲಿಕಾರ್ಜುನ ದೊಡ್ಡಮನಿ, ತರಕಾರಿ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next