Advertisement

Udupi; ಅಡ್ಡಾದಿಡ್ಡಿ ಪಾರ್ಕಿಂಗ್‌, ಯು ಟರ್ನ್ನಿಂದ ಕಿರಿಕಿರಿ

08:07 PM Aug 22, 2024 | Team Udayavani |

ಉಡುಪಿ: ನಗರದ ವಿವಿಧೆಡೆ ದಿನಂಪ್ರತಿ ಟ್ರಾಫಿಕ್‌ ದಟ್ಟಣೆ ಉಂಟಾಗುತ್ತಿದ್ದು, ಅಸಮರ್ಪಕ ವಾಹನ ಪಾರ್ಕಿಂಗ್‌ ಜತೆಗೆ ಸರ್ಕಲ್‌ಗ‌ಳನ್ನು ಬಿಟ್ಟು ಎಲ್ಲೆಂದರಲ್ಲಿ ವಾಹನಗಳನ್ನು ತಿರುಗಿಸುವುದು ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ನಗರದ ಕೋರ್ಟ್‌ ಸರ್ಕಲ್‌, ಡಯನಾ ಸರ್ಕಲ್‌, ಚಿತ್ತರಂಜನ್‌ ಸರ್ಕಲ್‌, ಕಲ್ಸಂಕ ವೃತ್ತ, ಕಿದಿಯೂರು ಹೊಟೇಲ್‌ ಎದುರು ಭಾಗ, ಅಶ್ವತ್ಥಕಟ್ಟೆ ವೃತ್ತ, ಶಿರಿಬೀಡು ಜಂಕ್ಷನ್‌, ಬನ್ನಂಜೆ ಜಂಕ್ಷನ್‌, ಕರಾವಳಿ ವೃತ್ತ, ಅಂಬಲಪಾಡಿ ಜಂಕ್ಷನ್‌, ಅಂಬಾಗಿಲು ಜಂಕ್ಷನ್‌ಗಳಲ್ಲಿ ಪ್ರಮುಖವಾಗಿ ಈ ಸಮಸ್ಯೆಗಳು ಕಂಡುಬರುತ್ತಿವೆ.

ದಟ್ಟಣೆ ಹೇಗೆ?
ವೃತ್ತದ ಎರಡೂ ಬದಿ ವಾಹನಗಳನ್ನು ನಿಲುಗಡೆ ಮಾಡುವ ಕಾರಣ ವಾಹನಗಳನ್ನು ಯುಟರ್ನ್ ಮಾಡಲು ಚಾಲಕರಿಗೆ ಕಷ್ಟಕರವಾಗುತ್ತಿದೆ. ಪರಿಣಾಮ ಚಾಲಕರು ನಡುರಸ್ತೆಯಲ್ಲಿಯೇ ವಾಹನಗಳನ್ನು ರಿವರ್ಸ್‌ ತೆಗೆಯುವ ಕಾರಣ ಕೆಲವೊಂದು ಬಾರಿ ಸಣ್ಣಪುಟ್ಟ ಅಪಘಾತಗಳೂ ನಡೆಯುವುದುಂಟು. ಇನ್ನು ಕೆಲವು ಮಂದಿ ಸರ್ಕಲ್‌ ಸುತ್ತು ಬಳಸಿ ಟರ್ನ್ ಮಾಡುವ ಬದಲು ಸುತ್ತು ಬಳಸದೆ ತಿರುವ ಪಡೆಯುವ ಕಾರಣ ಅಪಘಾತಗಳು ಉಂಟಾಗುವ ಜತೆಗೆ ವಾಹನ ಸವಾರರಿಗೂ ಗೊಂದಲ ಉಂಟಾಗುತ್ತಿದೆ. ಬಸ್‌, ಲಾರಿ ಸಹಿತ ಬೃಹತ್‌ ವಾಹನಗಳು ಇಲ್ಲಿ ಟರ್ನ್ ತೆಗೆದುಕೊಳ್ಳಲು ಹರಸಾಹಸವನ್ನೇ ಪಡುವಂತಾಗಿದೆ.

ಎಲ್ಲೆಂದರಲ್ಲಿ ಪಾರ್ಕಿಂಗ್‌
ನಗರದ ವಿವಿಧ ಭಾಗಗಳಲ್ಲಿ ನೋ ಪಾರ್ಕಿಂಗ್‌ ಫ‌ಲಕವನ್ನು ಅಳವಡಿಕೆ ಮಾಡಿದ್ದರೂ ಅದರ ಎದುರುಗಡೆಯೇ ವಾಹನ ನಿಲುಗಡೆ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಕಿರಿದಾದ ನಗರದ ರಸ್ತೆಗಳ ಎರಡೂ ಭಾಗಗಳಲ್ಲಿಯೂ ವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಸುಗಮ ಸಂಚಾರ ಕಷ್ಟಕರವಾಗಿದೆ. ಕೆಲವು ವರ್ಷಗಳ ಹಿಂದೆ ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಲಾಕ್‌ ಮಾಡುವ ಜತೆಗೆ ಟೋಯಿಂಗ್‌ ಮಾಡುವ ವ್ಯವಸ್ಥೆಯಿತ್ತು. ಪ್ರಸ್ತುತ ಸಂಚಾರ ಪೊಲೀಸರಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದರಲ್ಲಿ ನಿಯಮಾವಳಿಗಳು ಉಲ್ಲಂಘನೆಯಾಗುತ್ತಿವೆ.

ಕೆಟ್ಟಿರುವ ಸಿಗ್ನಲ್‌ಗ‌ಳು
ಜೋಡುಕಟ್ಟೆ, ಕೋರ್ಟ್‌ ರಸ್ತೆ, ಕರಾವಳಿ ಬೈಪಾಸ್‌, ಕಲ್ಸಂಕ, ನರ್ಮ್ ಹಾಗೂ ಸಿಟಿ ಬಸ್‌ ನಿಲ್ದಾಣದ ಎದುರು, ಕೆಎಂ ಮಾರ್ಗ, ಕೋರ್ಟ್‌ ಸರ್ಕಲ…, ನಗರಸಭೆ, ಬನ್ನಂಜೆ, ಶಿರಿಬೀಡು ಎದುರು ಹೀಗೆ ನಗರದ ಹಲವು ಕಡೆಗಳಲ್ಲಿರುವ ಟ್ರಾಫಿಕ್‌ ಸಿಗ್ನಲ್‌ಗ‌ಳು ದುಃಸ್ಥಿತಿಯಲ್ಲಿದ್ದು ಯಾವುದೇ ಕ್ಷಣದಲ್ಲೂ ಸಾರ್ವಜನಿಕರ ಮೇಲೆ ಬೀಳುವ ಅಪಾಯ ಎದುರಾಗಿದೆ. ಕೆಲವು ಕಡೆ ಸಿಗ್ನಲ್‌ಗ‌ಳು ಬಾಗಿಕೊಂಡಿದ್ದು ತೀರಾ ಅಪಾಯಕಾರಿ ಸ್ಥಿತಿಯಲ್ಲಿವೆ. ಆದರೂ ಸ್ಥಳೀಯಾಡಳಿತ ಅಥವಾ ಪೊಲೀಸ್‌ ಇಲಾಖೆ ಇದನ್ನು ತೆರವುಗೊಳಿಸಲು ಇನ್ನೂ ಮುಂದಾಗಿರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪ್ರಸ್ತಾವನೆಗಿಲ್ಲ ಬೆಲೆ
ನಗರಕ್ಕೆ ಒಂದು ಟೋಯಿಂಗ್‌ ವಾಹನ ಹಾಗೂ 15ಕ್ಕೂ ಅಧಿಕ ಲಾಕ್‌ ಸಿಸ್ಟಮ್‌ ಒದಗಿಸುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದರೂ ಇದುವರೆಗೂ ಸೇವೆಗೆ ಬಂದಿಲ್ಲ. ಇರುವ ಲಾಕ್‌ ಸಿಸ್ಟಮ್‌ಗಳು ತುಕ್ಕುಹಿಡಿದು ನಿಷ್ಪ್ರಯೋಜಕವಾಗಿದೆ. ಟೋಯಿಂಗ್‌ ವಾಹನವೂ ಅವಧಿ ಮೀರಿದ ಕಾರಣ ಪೊಲೀಸರಿಗೆ ಸಂಚಾರ ದಟ್ಟಣೆ ಹಾಗೂ ನಿಯಮಾವಳಿ ಪಾಲನೆಗೆ ಒತ್ತು ನೀಡಲು ಕಷ್ಟಸಾಧ್ಯವಾಗುತ್ತಿದೆ. ಆಯ್ದ ಕೆಲವು ಭಾಗಗಳಲ್ಲಿ ಸಂಚಾರ ಠಾಣೆಯ ಪೊಲೀಸರು ನಿಯಮಾವಳಿ ಉಲ್ಲಂ ಸುವವರ ಮೇಲೆ ದಂಡ ವಿಧಿಸುವ ಕೆಲಸ ಮಾಡುತ್ತಿದ್ದರೂ ಘಟನೆಗಳು ಮತ್ತಷ್ಟು ಮರುಕಳಿಸುತ್ತಿವೆ.

ಕಡತದಲ್ಲೇ ಬಾಕಿಯಾದ ಮಲ್ಟಿಲೆವೆಲ್‌ ಪಾರ್ಕಿಂಗ್‌ ಪ್ರಸ್ತಾವನೆ
ಹಳೆಯ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ಇರುವ ನಗರದ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣವನ್ನು ಮಲ್ಟಿಲೇನ್‌ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ಆಗಿ ಪರಿವರ್ತಿಸುವ ಯೋಜನೆಯನ್ನು ಈ ಹಿಂದೆ ನಗರಸಭೆಯಲ್ಲಿ ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಕೂಡ ಆ ಯೋಜನೆ ಅನುಷ್ಠಾನ ಹಂತದಲ್ಲಿದೆ ಎಂದಿದ್ದರು. ಆದರೂ ಕೂಡ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ಈ ಭಾಗದಲ್ಲಿ ಇನ್ನು ಕೂಡ ನಡೆದಿಲ್ಲ. ಪ್ರಸ್ತುತ ಇಲ್ಲಿ ಶಿವಮೊಗ್ಗ ಭಾಗಕ್ಕೆ ತೆರಳುವ ಬಸ್‌ಗಳು ಬರುತ್ತಿದ್ದು, ಇಲ್ಲಿನ ತಂಗುದಾಣದೊಳಗೆ ಭಿಕ್ಷುಕರು, ನಿರ್ಗತಿಕರು ಆಶ್ರಯಪಡೆಯುತ್ತಿದ್ದಾರೆ.

ನೋ ಪಾರ್ಕಿಂಗ್‌ ಸ್ಥಳಗಳು ಒನ್‌ ವೇ ಪಾರ್ಕಿಂಗ್‌
ಕೋರ್ಟ್‌ ರಸ್ತೆಯ ಮೀನು ಮಾರುಕಟ್ಟೆ ಪ್ರದೇಶ, ಪಲಿಮಾರು ಮಠ ರಸ್ತೆ-ಸಂಸ್ಕೃತ ಕಾಲೇಜು ಬಳಿ, ಬಡಗುಪೇಟೆಯಿಂದ ಕಲ್ಸಂಕ ಜಂಕ್ಷನ್‌, ತೆಂಕಪೇಟೆಯ ಐಡಿಯಲ್‌ ಜಂಕ್ಷನ್‌, ಶಿರಿಬೀಡು ಜಂಕ್ಷನ್‌ನಿಂದ ಸರ್ವಿಸ್‌ ಬಸ್‌ ನಿಲ್ದಾಣದವರೆಗೆ, ವಿಷ್ಣು ಫ್ಲವರ್‌ ಸ್ಟಾಲ್‌ನಿಂದ ಐರೋಡಿಕರ್ಸ್‌ ಜಂಕ್ಷನ್‌ವರೆಗೆ, ಜಿಟಿಸಿ ಸ್ಕೂಲ್‌ನಿಂದ ಕನ್ವೆಂಟ್‌ ರಸ್ತೆ, ನಾರ್ತ್‌ ಶಾಲೆಯಿಂದ ರಾಜಾಂಗಣವರೆನ ರಸ್ತೆ.

ಕಾರು ನಿಲುಗಡೆ ಎಲ್ಲಿ?
ಸಿಯಾರಾಮ್‌ ಶೋರೂ ಮುಂಭಾಗ, ಟಿಎಂಎ ಪೈ ಆಸ್ಪತ್ರೆ ಎದುರು ರಸ್ತೆಯ ಅಂಚು, ಮದರ್‌ ಥೆರೆಸಾ ಚರ್ಚ್‌ ರಸ್ತೆಯ ಎದುರು, ಕರ್ನಾಟಕ ಮೆಡಿಕಲ್‌ ಮುಂಭಾಗ, ಮೈತ್ರಿ ಕಾಂಪ್ಲೆಕ್ಸ್‌ ಎದುರು, ಬಿಗ್‌ ಬಝಾರ್‌ ಎದುರು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರಿನ ರಸ್ತೆ, ಕೆಎಂ ಮಾರ್ಗದ ರಸ್ತೆಯ ಒಂದು ಬದಿ.

ದ್ವಿಚಕ್ರ ವಾಹನ ನಿಲುಗಡೆ ಎಲ್ಲಿ?
ಕೃಷ್ಣಪ್ರಸಾದ್‌ ಹೊಟೇಲ್‌ ಮುಂಭಾಗ, ಸೂಡ ಕ್ಲಿನಿಕ್‌ ಎದುರು, ಸಂತೋಷ್‌ ಬೇಕರಿ ಮುಂಭಾಗ, ಸೆಲೆಕ್ಷನ್‌ ಸೆಂಟರ್‌ ಎದುರು, ಕೆನರಾ ಮೆಡಿಕಲ್‌ ಬಳಿ ಇರುವ ಲಿಯೋ ಫ‌ರ್ನಿಚರ್‌ ಬಳಿ, ಕಿದಿಯೂರು ಹೊಟೇಲ್‌ನ ಎಡಬದಿ, ರಿಲಾಯನ್ಸ್‌ ಫ‌ುಟ್‌ವೇರ್‌ ಬಳಿ

ಪ್ರಸ್ತಾವನೆ ಸಲ್ಲಿಕೆ
ಟ್ರಾಫಿಕ್‌ ನಿಯಮಾವಳಿ ಉಲ್ಲಂ ಸುವವರ ವಿರುದ್ಧ ಪೊಲೀಸರು ಈಗಾಗಲೇ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ಕೆಲವು ಮಂದಿ ಕಣ್ತಪ್ಪಿಸಿಕೊಂಡು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಈಗಾಗಲೇ ಲಾಕ್‌ಸಿಸ್ಟಮ್‌ ಹಾಗೂ ಗಜೇಂದ್ರ ಟೋಯಿಂಗ್‌ ವಾಹನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನಂತರ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ.

-ಸುದರ್ಶನ ದೊಡ್ಡಮನಿ, ಪೊಲೀಸ್‌ ಉಪನಿರೀಕ್ಷಕರು, ಸಂಚಾರ ಠಾಣೆ ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next