Advertisement
ಜನವಸತಿ ಸ್ಥಳಗಳಲ್ಲಿ ಅತಿಯಾದ ವೇಗದಿಂದ ಉಂಟಾಗುವ ಅಪಘಾತ ತಡೆಯಲು ರೋಡ್ ಹಂಪ್ಸ್ ನಿರ್ಮಿಸುವುದು ಸಹಜ. ಆದರೆ, ನಗರದ ವಿವಿಧ ರಸ್ತೆಗಳಲ್ಲಿ ಎಲ್ಲಿಬೇಕೆಂದರಲ್ಲಿ ಅವೈಜ್ಞಾನಿಕವಾಗಿ ರೋಡ್ ಹಂಪ್ಸ್‌ಗಳನ್ನು ಹಾಕಿರುವುದು ವಿಪರ್ಯಾಸ. ಈ ರೋಡ್ ಹಂಪ್ಸ್‌ಗಳಿಂದ ವಾಹನಗಳ ಸವಾರರಿಗೆ ನಿತ್ಯ ಕಿರಿಕಿರಿಯಾಗಿದೆ.
Related Articles
Advertisement
ನಗರದ ಮಹಾತ್ಮಾ ಗಾಂಧಿ ರಸ್ತೆ, ವಿದ್ಯಾನಗರ, ರಾಜ್ಯ ಹೆದ್ದಾರಿ, ದೇವಗಿರಿ ರಸ್ತೆ, ಜೆಪಿ ರಸ್ತೆ, ರೈಲು ನಿಲ್ದಾಣ ರಸ್ತೆ, ಇಜಾರಿಲಕ್ಮಾಪುರ, ಗುತ್ತಲ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದೊಂದರಲ್ಲೂ 5 ರಿಂದ 6 ರೋಡ್ ಹಂಪ್ಸ್ ನಿರ್ಮಿಸಲಾಗಿದೆ. ಕೆಲವು ಭಾಗದಲ್ಲಿ ರೋಡ್ ಹಂಪ್ಸ್‌ನ ನಿಯಮ ಗಾಳಿಗೆ ತೂರಿ ನಿರ್ಮಿಸಲಾಗಿದೆ.
ಅವೈಜ್ಞಾನಿಕ ಹಂಪ್ಸ್‌ಗಳು: ಹಲವು ಕಡೆಗಳಲ್ಲಿ ರೋಡ್ ಹಂಪ್ಸ್‌ಗಳನ್ನು ಬೇಕಾಬಿಟ್ಟಿಯಾಗಿ ನಿರ್ಮಿಸಿದ್ದಾರೆ. ಗುಡ್ಡ ನಿರ್ಮಿಸಿದಂತೆ ಹಂಪ್ಸ್ ಹಾಕಲಾಗಿದ್ದು, ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವಾಗ ವಾಹನದ ಕೆಳಭಾಗಕ್ಕೆ ಹಂಪ್ಸ್‌ಗಳು ತಾಗುತ್ತಿವೆ. ಇದರಿಂದಾಗಿ ಎಷ್ಟೋ ವಾಹನಗಳು ಕೆಟ್ಟು ನಿಂತು ವಾಹನ ಸವಾರರು ತೊಂದರೆ ಅನುಭವಿಸಿರುವ ಉದಾಹರಣೆಗಳೂ ಇವೆ.
ಬೈಕ್ ಹಿಂದೆ ಕುಳಿತವರಂತೂ ಪ್ರಾಣ ಬಿಗಿಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಂಪ್ಸ್‌ಗಳಿಂದಾಗಿಯೇ ಬೈಕ್‌ನ ಹಿಂದೆ ಕುಳಿತವರು ಬಿದ್ದು ಗಾಯಗೊಂಡ ಘಟನೆಗಳು ನಿತ್ಯ ನಗರದಲ್ಲಿ ನಡೆಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ.
ಸ್ಥಳೀಯರ ಬೇಡಿಕೆ: ರಸ್ತೆಗಳಿಗೆ ಇಷ್ಟೊಂದು ಹಂಪ್ಸ್‌ಗಳನ್ನು ಹಾಕಲು ಸ್ಥಳೀಯ ವಾಸಿಗಳ ಬೇಡಿಕೆಯೇ ಕಾರಣ ಎನ್ನಲಾಗುತ್ತಿದೆ. ನಿಯಮದ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಇರುವಲ್ಲಿ ಮಾತ್ರ ಹಂಪ್ಸ್‌ಗಳನ್ನು ಪೊಲೀಸ್ ಇಲಾಖೆ ಪರವಾನಗಿಯೊಂದಿಗೆ ಹಾಕಬೇಕು. ಆದರೆ, ಸ್ಥಳೀಯ ನಿವಾಸಿಗಳು ರಸ್ತೆ ಮಾಡುವ ಗುತ್ತಿಗೆದಾರರ ಮೇಲೆ, ಆ ಭಾಗದ ಜನಪ್ರತಿನಿಧಿ ಮೇಲೆ ಒತ್ತಡ ತಂದು ಹಂಪ್ಸ್ ಹಾಕಿಸಿಕೊಳ್ಳುತ್ತಾರೆ. ಒಂದು ವೇಳೆ ರಸ್ತೆ ಮಾಡುವ ಗುತ್ತಿಗೆದಾರರು ಮಾಡದಿದ್ದರೆ ತಾವೇ ಸ್ವತಃ ಹಂಪ್ಸ್ ಸಿದ್ಧಪಡಿಸಿಕೊಳ್ಳುತ್ತಾರೆ. ಹೀಗಾಗಿ ನಗರದ ರಸ್ತೆಗಳಲ್ಲಿ ಹಂಪ್ಸ್‌ಗಳದ್ದೇ ಕಾರುಬಾರಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನಗರಸಭೆ ಅಕಾರಿ.
ಅಪಘಾತ ತಡೆಗಾಗಿ ರೋಡ್ ಹಂಪ್ಸ್ ಹಾಕಲಾಗುತ್ತದೆ. ಆದರೆ, ನಗರದಲ್ಲಿ ಅವೈಜ್ಞಾನಿಕ ಮತ್ತು ಮಿತಿಮೀರಿದ ರೋಡ್ ಹಂಪ್ಸ್‌ಗಳಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ಖೇದಕರ ಸಂಗತಿ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಅನಗತ್ಯ ಸ್ಥಳದಲ್ಲಿರುವ ಹಂಪ್ಸ್‌ಗಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು.
•ಎಚ್.ಕೆ. ನಟರಾಜ