Advertisement

ಘೋಷಣೆ ಮೂರು; ಬಾಕಿ ಇವೆ ಇನ್ನೂ ಮೂರು

03:46 PM Apr 17, 2018 | Team Udayavani |

ಕಲಬುರಗಿ: ವಾರದ ಹಿಂದೆ ಕಲಬುರಗಿ ದಕ್ಷಿಣ, ಆಳಂದ ಹಾಗೂ ಅಫಜಲಪುರ ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ್ದ
ಬಿಜೆಪಿ ಸೋಮವಾರ ಮತ್ತೆ ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇನ್ನುಳಿದ ಮೂರು ಕ್ಷೇತ್ರಗಳಿಗೆ ಯಾರು ಎನ್ನುವಂತಾಗಿದೆ. ಸೋಮವಾರ ಪ್ರಕಟಗೊಂಡ ಬಿಜೆಪಿ ಎರಡನೇ ಪಟ್ಟಿಯಲ್ಲಿ ಸೇಡಂದಿಂದ ರಾಜಕುಮಾರ ಪಾಟೀಲ್‌ ತೇಲ್ಕೂರ, ಜೇವರ್ಗಿ ಕ್ಷೇತ್ರದಿಂದ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ ಹಾಗೂ ಕಲಬುರಗಿ ಉತ್ತರ ಮತಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ಮಹಾನಗರಾಧ್ಯಕ್ಷ ಬಿ.ಜಿ.ಪಾಟೀಲ್‌ ಪುತ್ರ ಚಂದು ಪಾಟೀಲ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

Advertisement

ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಶೀಲ್‌ ನಮೋಶಿ ಅವರಿಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಅಸಮಾಧಾನ ಹೊರ ಹಾಕಿದ್ದು, ಪಕ್ಷದ ವರಿಷ್ಠರು ಅನ್ಯಾಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇಡಂದಲ್ಲಿ ರಾಜಗೋಪಾಲರೆಡ್ಡಿ ಸೇರಿ ಇತರರು ಆಕಾಂಕ್ಷಿಗಳಾಗಿದ್ದರು. ಆದರೆ ಇಲ್ಲಿ ಘೋಷಿಸಲಾದ ಟಿಕೆಟ್‌ಗೆ ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂದಿಲ್ಲ. ಅದೇ ರೀತಿ ಜೇವರ್ಗಿಯಲ್ಲಿ ದೊಡ್ಡಪ್ಪಗೌಡ ಅವರಲ್ಲದೇ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವರಾಜ ಪಾಟೀಲ್‌ ರದ್ಧೇವಾಡಗಿ, ರೇವಣಸಿದ್ದಪ್ಪ ಸಂಕಾಲಿ, ಧರ್ಮಣ್ಣ ದೊಡ್ಡಮನಿ ಆಕಾಂಕ್ಷಿಗಳಾಗಿದ್ದರು. ಇಲ್ಲೂ ಅಸಮಾಧಾನ ಹೊರ ಹಾಕಿದ್ದು ವರದಿಯಾಗಿಲ್ಲ.

ಈಗ ಕಲಬುರಗಿ ಗ್ರಾಮೀಣ, ಚಿಂಚೋಳಿ ಹಾಗೂ ಚಿತ್ತಾಪುರ ಈ ಮೂರು ಮೀಸಲು ಕ್ಷೇತ್ರಗಳಲ್ಲಿ ಮಾತ್ರ ಇನ್ನೂ ಅಭ್ಯರ್ಥಿಗಳಾದರು ಎಂಬುದನ್ನು ಮಾತ್ರ ಪ್ರಕಟಿಸಿಲ್ಲ. ಈ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತೀಮಗೊಳಿಸಲು ಬಿಜೆಪಿ ವರಿಷ್ಠ ಮಂಡಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಟಿಕೆಟ್‌ ಘೋಷಣೆ ನಂತರ ಬಂಡಾಯವಾಗದಂತೆ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಅಳೆದು ತೂಗುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

Advertisement

ಕಲಬುರಗಿ ಗ್ರಾಮೀಣದಲ್ಲಿ ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಮತ್ತಿಮೂಡ ಹಾಗೂ ನಾಮದೇವ ರಾಠೊಡ ಸೇರಿದಂತೆ ಇತರರು ಆಕಾಂಕ್ಷಿಗಳಾಗಿದ್ದಾರೆ. ಅದೇ ರೀತಿ ಚಿಂಚೋಳಿ ಕ್ಷೇತ್ರದಲ್ಲಿ ಮಾಜಿ ಸಚಿವ ಸುನೀಲ್‌ ವಲ್ಲಾಪುರೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ ರಾಠೊಡ ಹಾಗೂ ಜಿ.ಪಂ ಸದಸ್ಯ ಸಂಜೀವನ್‌ ಯಾಕಾಪುರ ಆಕಾಂಕ್ಷಿಗಳಾಗಿದ್ದಾರೆ. ಚಿತ್ತಾಪುರದಲ್ಲಿ ಮಾಜಿ ಶಾಸಕ ವಾಲ್ಮೀಕಿ ನಾಯಕ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವ್ಹಾಣ ಹಾಗೂ ಇತರರು ಆಕಾಂಕ್ಷಿಗಳಾಗಿದ್ದಾರೆ.

ವಾಲ್ಮೀಕಿ ನಾಯಕರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಕಲಬುರಗಿ ಗ್ರಾಮೀಣದಲ್ಲಿ ಮಾಜಿ ಸಚಿವ ಸುನೀಲ ವಲ್ಲಾಪುರೆ ಅವರಿಗೆ ಟಿಕೆಟ್‌ ನೀಡಿ ಚಿಂಚೋಳಿಯಲ್ಲಿ ಸುಭಾಷ ರಾಠೊಡ ಅವರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಬಹುದು ಎಂದು ಚರ್ಚೆ ನಡೆದಿದೆ. ಒಟ್ಟಾರೆ ಇದಕ್ಕೆ ಇನ್ನೇರಡು ದಿನಗಳಲ್ಲಿ ಮುಕ್ತಿ ಸಿಗಲಿದೆ.

ಗಳಗಳನೇ ಅತ್ತ ಶಶೀಲ್‌ ನಮೋಶಿ
ಕಲಬುರಗಿ: ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ನಮೋಶಿಗೆ ಟಿಕೆಟ್‌ ಸಿಗದಿದ್ದಕ್ಕೆ ನಮೋಶಿ ಗಳಗಳನೇ ಅತ್ತು ಅಸಮಾಧಾನ ಹೊರ ಹಾಕಿದರು.

ಪಕ್ಷದ ಟಿಕೆಟ್‌ ಘೋಷಣೆಯಾಗಿ ಅದರಲ್ಲಿ ಹೆಸರು ಕೈ ಬಿಟ್ಟು ಹೋಗಿದ್ದರಿಂದ ತೀವ್ರ ಗದ್ಗಿತರಾದ ನಮೋಶಿ ಅವರು, ದುಃಖ
ತಾಳಲಾರದೇ ಒಂದೇ ಸಮನೇ ಗಳ-ಗಳನೇ ಅತ್ತರಲ್ಲದೇ ತಮಗೆ ಟಿಕೆಟ್‌ ನೀಡದೇ ಪಕ್ಷದ ಮುಖಂಡರು ಅನ್ಯಾಯ ಎಸಗಿದ್ದಾರೆ ಎಂದು ಅಳಲು ತೋಡಿಕೊಂಡರು.

ಕಲಬುರಗಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ರಾಜ್ಯ ಸಹ
ವಕ್ತಾರ ಶಶೀಲ್‌ ನಮೋಶಿ ನೊಂದುಕೊಂಡು ಕಣ್ಣೀರಿಟ್ಟರು. ಇದರಿಂದಾಗಿ ಕೆಲಹೊತ್ತು ಭಾವಾವೇಷಕ್ಕೊಳಗಾಗಿದ್ದರು. ಬಿಜೆಪಿ 2ನೇ ಪಟ್ಟಿ ಪ್ರಕಟಗೊಂಡ ಬಳಿಕ ತಮ್ಮ ಆಪ್ತರ, ಪಕ್ಷದ ಕಾರ್ಯಕರ್ತರ ಮುಂದೆ ನೋವು ತೋಡಿಕೊಂಡರು. 

ಅಭಿಪ್ರಾಯ ಸಂಗ್ರಹಿಸಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮುಂದೆಯೂ ಗಳಗಳನೇ ಅತ್ತುಬಿಟ್ಟರು. ಬೆಂಬಲಿಗರು,
ಪಕ್ಷದ ಕಾರ್ಯಕರ್ತರು ನಮೋಶಿ ಅವರನ್ನು ಸಮಧಾನಪಡಿಸಿದರು. ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್‌ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು. ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಅಲ್ಲಿನ ಜನರ ನೋವು-ನಲಿವುಗಳಲ್ಲಿ ಭಾಗಿಯಾಗಿದ್ದೆ, ಹೀಗಾಗಿ ವರಿಷ್ಠರು ಟಿಕೆಟ್‌ ನೀಡಲಿದ್ದಾರೆ ಎನ್ನುವ ತಮ್ಮ ನಿರೀಕ್ಷೆ ಹುಸಿಯಾಗಿದೆ. ಇದು ಭಾರಿ ನೋವು
ತರಿಸಿದೆ ಎಂದು ಗೋಳಿಟ್ಟರು. 

ಕಾರ್ಯಕರ್ತರೊಂದಿಗೆ ಚರ್ಚೆ: ಸಮೀಕ್ಷೆಗಳೆಲ್ಲ ತಮ ಪರವಾಗಿಯೇ ಇದ್ದವು. ಹೀಗಾಗಿ ಟಿಕೆಟ್‌ ಸಿಗುತ್ತದೆ ಎಂಬುದಾಗಿ ಅಚಲ ನಂಬಿಕೆ ಇತ್ತು. ಆದರೆ ಟಿಕೆಟ್‌ ಯಾವ ಹಿನ್ನೆಲೆಯಲ್ಲಿ ತಮಗೆ ನೀಡಲಾಗಿಲ್ಲ ಎಂಬುದು ತಿಳಿಯದಂತಾಗಿದೆ. ನನಗಿಂತ ಕಾರ್ಯಕರ್ತರು ಹಾಗೂ ಪಕ್ಷದ ಜಿಲ್ಲಾ ಮುಖಂಡರಿಗೆ ತುಂಬಾ ನೋವಾಗಿದೆ. ಹೀಗಾಗಿ ಅವರೊಂದಿಗೆ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದರಿಂದ ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ
ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಸಂಸ್ಥೆಯ ಚುನಾವಣೆ ಎಲ್ಲರೂ ಕೂಡಿ ಮಾಡೋಣ. ವಿಧಾನಸಭೆಗೆ ತಮಗೆಲ್ಲ ಬೆಂಬಲಿಸಬೇಕೆಂಬುದಾಗಿ ಮಾತುಕತೆ ನಡೆದಿತ್ತು. ಆದರೆ ಈಗ ಬೆಲೆ ಇಲ್ಲದಂತಾಗಿದೆ ಎಂದು ನಮೋಶಿ ಅಳಲು ತೋಡಿಕೊಂಡರು.

2013ರಲ್ಲೂ ಟಿಕೆಟ್‌ ಕೈ ತಪ್ಪಿತ್ತು: ಕಳೆದ 2013ರ ಸಾಲಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ನಮೋಶಿ ಕಲಬುರಗಿ ದಕ್ಷಿಣ ಮತಕ್ಷೇತ್ರದಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ವಂಚಿತರಾಗಿದ್ದರಿಂದ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದರು.

ಪ್ರತಿಭಟನೆ: ಮಾಜಿ ಶಾಸಕ ಶಶೀಲ್‌ ನಮೋಶಿಗೆ ಬಿಜೆಪಿ ಟಿಕೆಟ್‌ ಸಿಗದಿದ್ದಕ್ಕೆ ಬೆಂಬಲಿಗರು ಹಾಗೂ ಕಾರ್ಯಕರ್ತರು ನಗರದ ಆನಂದ ಹೋಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್‌ ನೀಡದೇ ಬೇರೆಯವರಿಗೆ ಟಿಕೆಟ್‌ ನೀಡಲಾಗಿದೆ. ಕಳೆದ ಸಲದಂತೆ ಈ ಸಲವೂ ಬಿಜೆಪಿ ಮುಖಂಡರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಘೋಷಣೆಗಳನ್ನು ಕೂಗಿದರು

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next