ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜಿಲ್ಲೆಯ ಪ್ರವಾಸದ ಮೊದಲ ದಿನದ ಕಾರ್ಯಕ್ರಮಗಳಲ್ಲಿ “ಮೋದಿ ಮೋದಿ’ ಎಂದು ಘೋಷಣೆ ಕೂಗಿ ಮುಜುಗುರ ಉಂಟು ಮಾಡಿದ್ದ ಮೋದಿ ಅಭಿಮಾನಿಗಳು ಎರಡನೇ ದಿನವೂ ಅದನ್ನೇ ಮುಂದುವರಿಸಿದರು. ಆದರೆ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿಗರು “ರಾಹುಲ್ ಗಾಂಧಿಗೆ ಜೈ’ ಎಂದು ಘೋಷಣೆ ಕೂಗಿ ತಿರುಗೇಟು ನೀಡಿದರು.
ಬರಮುಕ್ತ ವಿಜಯಪುರ ಯೋಜನೆ ಜಾಗೃತಿಗಾಗಿ ಎರಡನೇ ಹಂತದ ವೃಕ್ಷಥಾನ್ ಸ್ಪರ್ಧೆಗೆ ರವಿವಾರ ಗೋಲಗುಮ್ಮಟ
ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 5ಕಿ.ಮೀ. ಸ್ಪರ್ಧೆಗೆ ಚಾಲನೆ ನೀಡಲು ಆಗಮಿಸಿದ್ದ ರಾಹುಲ್ ಗಾಂಧಿ ಸ್ಪರ್ಧಿಗಳ ಕೈ ಕುಲುಕಲು ಅವರತ್ತ ತೆರಳಿದಾಗ ಸ್ಪರ್ಧಿಗಳು “ಮೋದಿ ಮೋದಿ’ ಎಂದು ಕೂಗಿ ಮುಜುಗುರ ಉಂಟು ಮಾಡಿದರು.
ಈ ಹಂತದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಕಾರ್ಯಕ್ರಮದ ರೂವಾರಿ ಸಚಿವ ಡಾ| ಎಂ.ಬಿ. ಪಾಟೀಲ “ರಾಹುಲ್ ಗಾಂಧಿ ಅವರಿಗೆ ಜಯವಾಗಲಿ’ ಎಂದು ಕೂಗಿ ತಿರುಗೇಟು ನೀಡಿದರು. ನಿರೂಪಕರು ಮೈಕ್ ಮೂಲಕ ಈ ಘೋಷಣೆ ಕೂಗಿದಾಗ ರಾಹುಲ್ ಬೆಂಬಲಿಗರಿಂದ ಜೈ ಜೈ ಎಂಬ ಪ್ರತಿಕ್ರಿಯೆ ಬರುತ್ತಿತ್ತು. ನಂತರ ಸ್ವತಃ ಸಚಿವ ಎಂ.ಬಿ. ಪಾಟೀಲ ಅವರೇ ಮೈಕ್ ಹಿಡಿದು ರಾಹುಲ್ ಗಾಂಧಿ ಅವರಿಗೆ ಜೈ ಎಂದು ಘೋಷಣೆ ಕೂಗಿ “ಮೋದಿ ಮೋದಿ’ ಘೋಷಣೆ ಕೂಗುತ್ತಿದ್ದವರ ಧ್ವನಿ ಕೊಂಚ ಮಟ್ಟಿಗೆ ತಗ್ಗಿಸಿದರು.
ಬಳಿಕ ವೇದಿಕೆ ಏರಿದ ರಾಹುಲ್ ಗಾಂಧಿ ಗೋಲಗುಂಬಜ್ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿದರು.