Advertisement
ಆ ಕ್ಲಾಸ್‌ರೂಮಿನಲ್ಲಿ ಚಾಪ್ಲಿನ್ ಸಿನಿಮಾ ಹಾಕಿರಲಿಲ್ಲ. ಪ್ರಾಣೇಶ್ ಸಾಹೇಬರೋ, ರಿಚರ್ಡಣ್ಣನೋ, ಕೃಷ್ಣೇಗೌಡರೋ, ಅಲ್ಲಿ ಜೋಕು ಹೇಳುತ್ತಿರಲಿಲ್ಲ. ಮಿಸ್ಟರ್ ಬೀನ್ ರೀತಿ ಅಲ್ಲಿ ಯಾರೂ ಆಂಗಿಕ ಅಭಿನಯ ತೋರಿ, ಪೆದ್ದನಂತೆ ವರ್ತಿಸುತ್ತಲೂ ಇರಲಿಲ್ಲ. ಆದರೆ, ಆ ಕ್ಲಾಸ್‌ರೂಮಿನಲ್ಲಿ ದೊಡ್ಡ ನಗುವೊಂದು ತೇಲಿಬರುತ್ತಿತ್ತು. “ಸೈಲೆನ್ಸ್’ ಎನ್ನುತ್ತಾ ಉಪನ್ಯಾಸಕಿ ಮೇಜು ಕುಟ್ಟಿದರೂ ನಿಲ್ಲದ ನಗುವಿಗೆ, ನಗೆ ಕ್ಲಬ್ ಕೂಡ ನಾಚುತ್ತಿತ್ತೇನೋ. ವಿದ್ಯಾರ್ಥಿಗಳೆಲ್ಲ ಹಾಗೆ ನಕ್ಕಿದ್ದು, ಒಂದು ಸ್ಮಾರ್ಟ್‌ಫೋನಿನ ಕಾರಣಕ್ಕೆ. ಅದು ಯಾವ ವಿದ್ಯಾರ್ಥಿಯ ಜೇಬಿನಲ್ಲಿತ್ತೋ, ಕ್ಲಾಸು ನಡೆಸುತ್ತಿದ್ದ ಪ್ರಾಧ್ಯಾಪಕಿಗೂ ಗೊತ್ತಿಲ್ಲ. ಅವರು ಗಂಭೀರವಾಗಿ ಪ್ಲಾಸಿ ಕದನದ ಕಥೆ ಹೊಡೆಯುತ್ತಿದ್ದರು. ಬಂಗಾಳದ ನವಾಬ ಸಿರಾಜುದೌªಲ ಇನ್ನೇನು ಸೋತು ಖಡ್ಗ ಕೆಳಗಿಟ್ಟ ಎಂದು ವರ್ಣಿಸುತ್ತಿರುವಾಗ, ವಿದ್ಯಾರ್ಥಿಯ ಮೊಬೈಲ್ ಹಾಗೆ ಚೀರಿದ್ದು, ತನಗೆ ಮಾಡಿದ ಅವಮಾನವೇ ಅಂತನ್ನಿಸಿ, ಹೋಗಿ ಪ್ರಾಂಶುಪಾಲರಿಗೆ ದೂರಿದ್ದರು.
Related Articles
Advertisement
ಇನ್ನೊಬ್ಬರೊಡನೆ ನಡೆಯುವ ಸಂವಹನ ಹಾಗಿರಲಿ, ನಾವು ಒಬ್ಬರೇ ಮಾಡುವ ಕೆಲಸಗಳಲ್ಲಿ ಸಾಧಿಸಬೇಕಾದ ಏಕಾಗ್ರತೆಗೂ ಸ್ಮಾರ್ಟ್‌ಫೋನ್ ಭಂಗ ತರುತ್ತಿದೆ. ಓದು- ಬರಹಗಳ ನಡುವೆ, ಕಚೇರಿ ಕೆಲಸದ ನಡುವೆ ಮೊಬೈಲಿನಿಂದಾಗುವ ಅಡಚಣೆ ನಮಗೆ ಎಷ್ಟು ಅಭ್ಯಾಸವಾಗಿದೆಯೆಂದರೆ, ಒಂದಷ್ಟು ಹೊತ್ತು ಮೊಬೈಲ್ ಸದ್ದುಮಾಡಲಿಲ್ಲವೆಂದರೆ, ಅದು ಸರಿ ಇದೆಯೋ ಇಲ್ಲವೋ ಎಂದು ನಾವೇ ಪರೀಕ್ಷಿಸುವಷ್ಟು ಹುಚ್ಚರಾಗಿದ್ದೇವೆ. ಬೇರೆ ಕೆಲಸಗಳ ಮಾತು ಹಾಗಿರಲಿ, ಅಮೆರಿಕದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಶೇ.75 ಬಳಕೆದಾರರು ತಮ್ಮ ಮೊಬೈಲುಗಳನ್ನು ಬಾತ್‌ರೂಮಿಗೂ ಕೊಂಡೊಯ್ಯುತ್ತಾರೆಂಬ ಅಂಶ ಬೆಳಕಿಗೆ ಬಂದಿತ್ತು! ಇದು ನಮ್ಮ- ನಿಮ್ಮ ಮನೆಯಲ್ಲೂ ಆಚರಣೆಗೊಂಡಿದ್ದರೆ, ಅದರಲ್ಲಿ ಅಚ್ಚರಿಯೇನೂ ಇಲ್ಲ.
ಅಂದುಕೊಂಡಿದ್ದ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸುವಲ್ಲೂ ಸ್ಮಾರ್ಟ್‌ಫೋನ್ ಅಡ್ಡಗಾಲು ಹಾಕುತ್ತಿದೆ. ಯಾವುದೋ ಜರೂರು ಕೆಲಸ ಇನ್ನರ್ಧ ಗಂಟೆಯಲ್ಲಿ ಮುಗಿಯಬೇಕೆಂದು ಗೊತ್ತಿದ್ದರೂ ಒಮ್ಮೆ ಫೇಸ್‌ಬುಕ್ ನೋಡಿಬಿಡೋಣ ಎನ್ನುವ ಗುಕ್ಕನೆ ನುಗ್ಗಿಬಿಡುತ್ತದೆ. ಮುಂದಿನವಾರವೇ ಪರೀಕ್ಷೆ ಇದ್ದಾಗಲೂ ವಿದ್ಯಾರ್ಥಿಗಳು ದಿನದಲ್ಲಿ ಇಂತಿಷ್ಟು ಹೊತ್ತು, “ರಿಯಾಯಿತಿ ಸಮಯ’ದಲ್ಲಿ ವಾಟ್ಸ್‌ಆ್ಯಪ್- ಫೇಸ್‌ಬುಕ್‌ನ ಜಗತ್ತಿನಲ್ಲಿ ಹೊಕ್ಕಿ ಹೊರಬರುತ್ತಾರೆ.
ಸ್ಮಾರ್ಟ್‌ಫೋನಿನಿಂದ ಅನೇಕರು ಸೋಮಾರಿ ಆಗುತ್ತಿದ್ದಾರೆ ಎನ್ನುವ ದೂರುಗಳೂ ನಮ್ಮ ಹಿರಿಯರ ಮನಸ್ಸಿನ ಠಾಣೆಗಳಲ್ಲಿ ದಾಖಲಾಗಿವೆ. ಹೊರಗೆ ನಡೆದಾಡಿ ಹೋಗಿ, ದಿನಸಿ ತರುವ ಪ್ರವೃತ್ತಿ ಇದರಿಂದಲೇ ಕುಗ್ಗಿದೆ. ಕುಳಿತಲ್ಲೇ ಕ್ಲಿಕ್ಕಿಸಿ, ಕೆಲ ಹೊತ್ತಾದ ಮೇಲೆ ಬಾಗಿಲು ತೆರೆದರೆ, ಮನೆಬಾಗಿಲಿಗೆ ದಿನಸಿ ಬರುವ ಈ ಕಾಲದಲ್ಲಿ ಸ್ಮಾರ್ಟ್‌ಫೋನಿನ ಆರಾಧಕರು ಹೆಚ್ಚಾಗಿದ್ದಾರೆ.
ಹಾಗಾದರೆ, ಸ್ಮಾರ್ಟ್‌ಫೋನ್ ಬದುಕಿನ ಭಾಗವಾಗದೇ, ಚಟವಾಗಿ ಮಾರ್ಪಟ್ಟಿದೆಯೇ? ಇದ್ದಿರಲೂಬಹುದು. “ಚಟದ ಲಕ್ಷಣಗಳೇನು?’ ಎಂದು ವಿವರಿಸುತ್ತಾ ಲೇಖಕ ಬಿ.ಜಿ.ಎಲ್. ಸ್ವಾಮಿಯವರು ತಮ್ಮ “ಸಾಕ್ಷಾತ್ಕಾರದ ದಾರಿಯಲ್ಲಿ’ ಕೃತಿಯಲ್ಲಿ ಒಂದು ಅಂಶವನ್ನು ಬರೆದಿದ್ದಾರೆ: “ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆರಡೂ ಆ ವಸ್ತುವಿನಿಂದ ಮಾರ್ಪಾಟಿಗೆ ಒಗ್ಗಿಹೋಗಿರಬೇಕು. ಸೇವನೆಯನ್ನು ನಿಲ್ಲಿಸಿದರೆ ಬೇರೆ ವಿಧವಾದ ದುಷ್ಪರಿಣಾಮ ಉಂಟಾಗಬೇಕು’. ಈ ವಿವರಣೆ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಹೊಂದುತ್ತದೆಯಲ್ಲವೇ?
ನಮ್ಮಲ್ಲಿ ಅನೇಕರು ಸ್ಮಾರ್ಟ್‌ಫೋನ್ ಬಿಟ್ಟು ಆಫೀಸಿಗೋ, ಕಾಲೇಜಿಗೋ ನಡೆದರೆ, ಅಂಥವರು ದಿನಪೂರ್ತಿ ಪರಿತಪಿಸುವುದನ್ನು ನೋಡುತ್ತೇವೆ. ಅಷ್ಟರಮಟ್ಟಿಗೆ ಮೊಬೈಲ್ ಜತೆಗೆ ಒಂದು ಭಾವನಾತ್ಮಕ ಸಂಬಂಧವೇರ್ಪಟ್ಟಿದೆ. ಫೋನಿನ ಬ್ಯಾಟರಿ ಇನ್ನೇನು ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ಒಬ್ಬನ ಜೀವವೇ ಹೋಗುತ್ತಿದೆಯೇನೋ ಎಂಬಂತೆ ಒದ್ದಾಡಲು ಶುರುಮಾಡುತ್ತೇವೆ. ಮೊಬೈಲ್ ಸಿಗ್ನಲ್ ಸರಿಯಾಗಿ ಸಿಗದ ಪ್ರದೇಶಗಳಲ್ಲಿ, ಅಂತರ್ಜಾಲ ಸಂಪರ್ಕ ಕೆಲಸ ಮಾಡದ ಸನ್ನಿವೇಶಗಳಲ್ಲೂ ವಿಚಿತ್ರವಾಗಿ ಚಡಪಡಿಸಲು ಶುರುಮಾಡುತ್ತೇವೆ.
ಸ್ಮಾರ್ಟ್‌ಫೋನ್ ಎನ್ನುವುದೊಂದು ಮಾಯಾಜಗತ್ತು. ಅಲ್ಲಿ ಕಳೆದುಹೋದ ಮಾನವನ ವಿಳಾಸ ಯಾರಿಗೂ ಲಭ್ಯವಾಗುವುದಿಲ್ಲ! ಕ್ಷಮಿಸು, ಮಾನವ…
ನಾವೇಕೆ ಪದೇಪದೆ ಮೊಬೈಲ್ ನೋಡುತ್ತೇವೆ?ಪರಿಣತರು ಇದನ್ನು ತಂತ್ರಜ್ಞಾನದ ಅತಿಬಳಕೆಯಿಂದ ಉಂಟಾಗುವ ಒತ್ತಡ, ಅರ್ಥಾತ್ “ಟೆಕ್ನೋಸ್ಟ್ರೆಸ್’ ಎಂದು ಕರೆಯುತ್ತಾರೆ. ಇಮೇಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಮೊದಲಾದ ಖಾತೆಗಳನ್ನು- ಆ ಸಾಧ್ಯತೆಯಿದೆ ಎನ್ನುವ ಒಂದೇ ಕಾರಣಕ್ಕಾಗಿ- ಪದೇಪದೆ ಪರಿಶೀಲಿಸುವುದರ ಹಿಂದೆ ಇದೇ ಒತ್ತಡದ ಕೈವಾಡವಿದೆ ಎನ್ನುವುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಅಲ್ಲೆಲ್ಲೋ ಘಟಿಸಬಹುದಾದ ಯಾವುದೋ ಮುಖ್ಯವಾದ ಘಟನೆಗಳು ನಮ್ಮ ಗಮನಕ್ಕೆ ಬಾರದೇ ಹೋಗಬಹುದು ಎಂಬ ಭೀತಿಯೂ ಇಲ್ಲಿ ಕೆಲಸಮಾಡುತ್ತದಂತೆ. ಇದನ್ನು “ಫಿಯರ್ ಆಫ್ ಮಿಸ್ಸಿಂಗ್ ಔಟ್’ (FOMO) ಎಂದು ಕರೆಯುತ್ತಾರೆ. ಕ್ಲಾಸಿನಲ್ಲಿ ಕುಳಿತಿದ್ದಾಗಲೂ ಕದ್ದುಮುಚ್ಚಿ ಫೇಸ್‌ಬುಕ್ ನೋಡುವ ಕಾಲೇಜು ವಿದ್ಯಾರ್ಥಿ, ರಜಾದಿನಗಳಲ್ಲೂ ಆಫೀಸಿನ ಇಮೇಲ್ ಖಾತೆಗೆ ಇಣುಕುವ ಉದ್ಯೋಗಿ- ಎಲ್ಲರೂ ಈ ಭೀತಿಯ ಸಂತ್ರಸ್ತರೇ. ಆನ್‌ಲೈನ್ ಜಗತ್ತಿನಲ್ಲಿ ಪ್ರತಿ ಕ್ಷಣವೂ ಘಟಿಸುವ ಅಸಂಖ್ಯ ಸಂಗತಿಗಳನ್ನೆಲ್ಲ ನಾವೂ ತಿಳಿದುಕೊಳ್ಳುತ್ತಲೇ ಇರಬೇಕು, ಈ ಮಾಹಿತಿಯ ಪ್ರವಾಹಕ್ಕೆ ನಮ್ಮ ಕೊಡುಗೆಯನ್ನೂ ನೀಡುತ್ತಿರಬೇಕು ಎನ್ನುವ ಈ ಕೃತಕ ಅಗತ್ಯವನ್ನು ಹುಟ್ಟುಹಾಕಿರುವುದು, ಮತ್ತೆ ಅದೇ, ಸ್ಮಾರ್ಟ್‌ಫೋನ್ ಚಟವೇ! ಸ್ಮಾರ್ಟ್‌ಫೋನ್‌ನಿಂದ ದೂರ ಇರೋ ಗುಟ್ಟು
– ಅಂದರೆ, ಇದು ಸ್ವಯಂನಿಯಂತ್ರಣ. ಅಗತ್ಯಬಿದ್ದಾಗ ಅಗತ್ಯವಿದ್ದಷ್ಟೇ ಹೊತ್ತು ಮೊಬೈಲ್ ಬಳಸುತ್ತೇನೆ ಎಂದು ತೀರ್ಮಾನ ಮಾಡಿ ಅದಕ್ಕೆ ಬದ್ಧರಾಗಿರುವ ಮೂಲಕ ನಾವು ಮೊಬೈಲ್ ಚಟಕ್ಕೆ ದಾಸರಾಗುವುದನ್ನು ತಪ್ಪಿ ಸಿಕೊಳ್ಳಬಹುದು. – ಮೇಲೆ ಹೇಳಿದ ಸಲಹೆ ಸುಲಭವಲ್ಲ ಎನ್ನುವವರು, ಅದೇ ಮೊಬೈಲಿನಲ್ಲಿರುವ ಕೆಲವು ಸಾಧ್ಯತೆಗಳನ್ನು ಬಳಸಿಕೊಳ್ಳಬಹುದು: ಲ್ಯಾಪ್‌ಟಾಪ್- ಮೊಬೈಲ್ ಎರಡೂ ಬಳಸುವವರು ಕನಿಷ್ಠ ಒಂದು ಸಾಧನದಲ್ಲಾದರೂ ಫೇಸ್‌ಬುಕ್ ಬಳಸದಿರುವುದು, ಅತಿರೇಕವೆನಿಸುವಷ್ಟು ಚಟುವಟಿಕೆಯಿರುವ ವಾಟ್ಸ್‌ಆ್ಯಪ್ ಗುಂಪುಗಳನ್ನು ಮ್ಯೂಟ್ ಮಾಡಿಟ್ಟು, ನಮ್ಮ ಬಿಡುವಿನ ವೇಳೆಯಲ್ಲಷ್ಟೇ ಅವನ್ನು ಗಮನಿಸುವುದು, ಪರೀಕ್ಷೆಯಂಥ ಮಹತ್ವದ ಸಂದರ್ಭಗಳಲ್ಲಿ ಒಂದಷ್ಟು ದಿನ ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ದೂರವಿರುವುದು- ಇವೆಲ್ಲ ಅವರಿಗೆ ಲಭ್ಯವಿರುವ ಕೆಲ ಆಯ್ಕೆಗಳು. – ಮೊಬೈಲಿನ ಅತಿಬಳಕೆಯನ್ನು ಏಕಾಏಕಿ ನಿಲ್ಲಿಸುವ ಬದಲು ಕೆಲದಿನಗಳ ಅವಧಿಯಲ್ಲಿ ಕೊಂಚಕೊಂಚವಾಗಿ ಕಡಿಮೆಮಾಡಿದರೆ, ಅದರಿಂದ ಉಂಟಾಗಬಹುದಾದ ಮಾನಸಿಕ ಸಮಸ್ಯೆಗಳಿಂದಲೂ ಪಾರಾಗಬಹುದು. ಮೈತ್ರಿ