Advertisement

ಎರಡು ವರ್ಷವಾದರೂ ಪ್ರಕಟಗೊಳ್ಳದ ಅಧಿಸೂಚನೆ

10:02 AM May 03, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೆಎಎಸ್‌ ಹುದ್ದೆಗಳ ನೇಮಕಾತಿಗೂ ಹಾಗೂ ಗೊಂದಲಗಳಿಗೂ ಬಿಡಿಸಲಾರದ ನಂಟು ಎಂಬಂತಾಗಿದೆ. 2011 ಮತ್ತು 2014ನೇ ಸಾಲಿನ ಹುದ್ದೆಗಳ ನೇಮಕಾತಿ ಪಟ್ಟಿಗೆ ಪೂರ್ಣ ಪ್ರಮಾಣದ ಮುಕ್ತಿ ಸಿಕ್ಕಿಲ್ಲ.
ಇದರ ಜತೆಗೆ 2015ನೇ ಸಾಲಿನ 401ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಪಟ್ಟಿ ಸಿದ್ಧಗೊಂಡು ಎರಡು ವರ್ಷ ಕಳೆದರೂ ಅದಕ್ಕೆ ಹಿಡಿದಿರುವ ಗ್ರಹಣ ಸಹ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

Advertisement

2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿಯ ಎ ಹಾಗೂ ಬಿ ದರ್ಜೆಯ 401 ಹುದ್ದೆಗಳ ಪಟ್ಟಿ ಸಿದ್ಧಗೊಂಡು ಇಲ್ಲಿಗೆ ಬರೋಬ್ಬರಿ ಎರಡು ವರ್ಷಗಳಾಗುತ್ತಾ ಬಂದರೂ, ಈವರೆಗೆ ನೇಮ ಕಾತಿ ಅಧಿಸೂಚನೆ ಹೊರಬಿದ್ದಿಲ್ಲ. ಅಧಿಸೂಚನೆ
ಯಾವಾಗ ಹೊರಬೀಳುತ್ತದೆಂಬ ಬಗ್ಗೆ ಸಿಎಂ ಕಚೇರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಬಳಿ ಮಾಹಿತಿ ಇಲ್ಲ.

ಗೆಜೆಟೆಡ್‌ ಪ್ರೊಬೇಷನರಿಯ ಖಾಲಿ ಹುದ್ದೆಗಳ ಪಟ್ಟಿಯ ಕಡತಕ್ಕೆ ಸಿಎಂ ಆಗಲೇ ಸಹಿ ಹಾಕಿದ್ದಾರೆ. ಆದರೆ, ಅದು 2015ನೇ ಸಾಲಿನ ಹುದ್ದೆಗಳೆಂದು ಪರಿಗಣಿಸಲ್ಪಡುವುದಿಲ್ಲ ಎಂದು ಸಿಎಂ ಕಚೇರಿ ಅಧಿಕಾರಿಗಳು ಹೇಳುತ್ತಾರೆ. 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಪಟ್ಟಿ ಇನ್ನೂ ಕೆಪಿಎಸ್‌ಸಿಗೆ ಕಳುಹಿಸಿಕೊಡಲಾಗಿಲ್ಲ ಎಂದು
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೇಳುತ್ತದೆ. ಡಿಪಿಎಆರ್‌ನಿಂದ ಪಟ್ಟಿ ಬಂದ ಬಳಿಕವಷ್ಟೇ ಅಧಿಸೂಚನೆ ಹೊರಡಿಸಬೇಕಾಗು ತ್ತದೆ ಎಂದು ಲೋಕಸೇವಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ವಿಳಂಬಕ್ಕೆ
ಸ್ಪಷ್ಟ ಕಾರಣ ಯಾರೂ ಕೊಡುತ್ತಿಲ್ಲ.

2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಆಯಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ವೃಂದ ಮತ್ತು ಮೀಸಲಾತಿಯ ಜತೆಗೆ ಸಂಬಂಧಪಟ್ಟ ಇಲಾಖೆಗಳು 2015ರ ಜೂನ್‌-ಜುಲೈನಲ್ಲೇ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿವೆ. 2015ರ ಡಿಸೆಂಬರ್‌ ವೇಳೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಟ್ಟದಲ್ಲಿ ಗೆಜೆಟೆಡ್‌ ಪ್ರೊಬೇಷನರಿಯ 150 ಗ್ರೂಪ್‌ ಎ ಮತ್ತು 251 ಗ್ರೂಪ್‌ ಬಿ ಸೇರಿ ಒಟ್ಟು 401 ಹುದ್ದೆಗಳ ಕ್ರೊಢೀಕೃತ ಪಟ್ಟಿ ಅಂತಿಮಗೊಂಡಿದೆ. ಆದರೆ, ಅಧಿಸೂಚನೆ ಮಾತ್ರ ಹೊರಬಿದ್ದಿಲ್ಲ. ಕೆಎಎಸ್‌ ಸೇರಿ ಇತರ ಖಾಲಿ ಹುದ್ದೆಗಳ ಭರ್ತಿಗೆ ಪ್ರತಿ ವರ್ಷ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು 2009ರಲ್ಲಿ ಪತ್ರಾಂಕಿತ ಹುದ್ದೆಗಳ ನೇಮಕಾತಿ ಕಾಯ್ದೆಯ ನಿಯಮ 40ಕ್ಕೆ ತಿದ್ದುಪಡಿ ತರಲಾಗಿದೆ. ಅದೇ ರೀತಿ ಲೋಕಾಸೇವಾ ಆಯೋಗಕ್ಕೆ ಕಾಯಕಲ್ಪ ಸಲ್ಲಿಸಲು ರಚಿಸಲಾಗಿದ್ದ ಹೂಟಾ ಸಮಿತಿಯು ಇದೇ ಶಿಫಾರಸು ಮಾಡಿದೆ. 2013ರಲ್ಲಿ ಹೂಟಾ ಸಮಿತಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ
ಮಾಡುವ 1:3 ಅಥವಾ 1:5 ಅನುಪಾತದ ಬಗ್ಗೆ ಗೊಂದಲ ಇದ್ದಿದ್ದರಿಂದ ಅಧಿಸೂಚನೆಗೆ ವಿಳಂಬವಾಗಿದೆ ಎಂದು ಹೇಳಲಾಗಿತ್ತು.

ಆದರೆ, ಈಗ ಅನುಪಾತದ ಗೊಂದಲವೂ ಬಗೆಹರಿದಿದೆ. ಆದಾಗ್ಯೂ 2015ನೇ ಸಾಲಿನ ಕೆಎಎಸ್‌ ಹುದ್ದೆಗಳ ನೇಮಕಾತಿಗೆ ಈವರೆಗೂ ಅಧಿಸೂಚನೆ ಹೊರಬಿದ್ದಿಲ್ಲ.

Advertisement

ಕೆಪಿಎಸ್‌ಸಿ ವತಿಯಿಂದ ಕೊನೆಯ ಬಾರಿಗೆ ಅಧಿಸೂಚನೆ ಹೊರಡಿಸಿದ್ದು 2015ರಲ್ಲಿ, ಅದು 2014ನೇ ಸಾಲಿನ 464 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ. 2015ರ ಜ.22ಕ್ಕೆ ಅಧಿಸೂಚನೆ ಹೊರಡಿಸಿ, ಅದೇ ವರ್ಷ ಏಪ್ರಿಲ್‌ನಲ್ಲಿ ಪ್ರಾಥಮಿಕ ಹಾಗೂ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದು, ಈಗ 1:3 ಅನುಪಾತದಲ್ಲಿ ಫೆ.20ರಿಂದ ಸಂದರ್ಶನ ನಡೆದು, ಈಗ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ 2010ರಲ್ಲಿ 200 ಹುದ್ದೆಗಳು, 2011ರಲ್ಲಿ 362 ಹುದ್ದೆಗಳ ನೇಮಕಾತಿ ನಡೆದಿತ್ತು. 2011ರ ನೇಮಕಾತಿಗಳಲ್ಲಿ ನಡೆದ ಅಕ್ರಮ ಹಾಗೂ 371ಜೆ ಮೀಸಲಾತಿ ನಿಗದಿ ಕಾರಣಕ್ಕೆ 2012 ಹಾಗೂ 2013ರಲ್ಲಿ ಯಾವುದೇ ನೇಮಕಾತಿಗಳು ನಡೆದಿಲ್ಲ. ಇದೀಗ
2015ರ ಹುದ್ದೆಗಳ ನೇಮಕಾತಿಗೆ ಇಲ್ಲಿವರೆಗೆ ಅಧಿಸೂಚನೆ ಹೊರಡಿಸಿಲ್ಲ.

– ರಫೀಕ್ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next