Advertisement

2 ವಾರದಲ್ಲಿ ಬರಪೀಡಿತ ತಾಲೂಕು ಘೋಷಿಸಿ

11:06 PM Jul 22, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ರಾಜ್ಯದ 65 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಿ. ಆ ಎಲ್ಲ ತಾಲೂಕುಗಳಲ್ಲಿ ತಲಾ ಒಂದೊಂದು ಗೋಶಾಲೆ ಅಥವಾ ಜಾನುವಾರು ಶಿಬಿರ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಮಧ್ಯಂತರ ಆದೇಶ ನೀಡಿದೆ.

Advertisement

ಈ ಕುರಿತಂತೆ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ.ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಪ್ರತ್ಯೇಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ.ಎ.ಎಸ್‌.ಓಕಾ ಹಾಗೂ ನ್ಯಾ.ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಅಲ್ಲದೆ, ಸರ್ಕಾರವೇ ಗುರುತಿಸಿರುವ ಬರಪೀಡಿತ 65 ತಾಲೂಕುಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ರಾಜ್ಯದ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 6 ತಿಂಗಳ ಅವಧಿಗೆ ಸರ್ಕಾರ 2018ರ ಡಿ.29ರಂದು ಹೊರಡಿಸಿದ ಅಧಿಸೂಚನೆ 2019ರ ಜೂ.30ಕ್ಕೆ ಕೊನೆಗೊಂಡಿದೆ. ವಿಪತ್ತು ನಿರ್ವಹಣಾ ಕೈಪಿಡಿ ಪ್ರಕಾರ ಆಗಸ್ಟ್‌ನಲ್ಲಿ ಹೊಸ ಅಧಿಸೂಚನೆ ಹೊರಡಿಸಲಿದೆ ಎಂದು ಸರ್ಕಾರ ಹೇಳಿದೆ.

ಆದರೆ, ಪರಿಸ್ಥಿತಿಯ ವಿಷಮತೆ ಪರಿಗಣಿಸಿ 65 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ತಾಕೀತು ಮಾಡಿತು. ಬರಪೀಡಿತ ಪ್ರದೇಶಗಳ ಜಾನುವಾರುಗಳಿಗೆ ರಾಜ್ಯದಲ್ಲಿ ಸದ್ಯ ಪ್ರತಿ ದಿನ ಪ್ರತಿ ಜಾನುವಾರಿಗೆ 5 ಕೆ.ಜಿ.ಒಣ ಮೇವು ಹಾಗೂ 2 ಕೆ.ಜಿ. ಪಶು ಆಹಾರ ನೀಡಲಾಗುತ್ತಿದೆ.

ಈ ಪ್ರಮಾಣವನ್ನು ಪರಿಷ್ಕರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ಹೇಳಿದೆ. ಈ ವಿಚಾರವಾಗಿ ಸರ್ಕಾರದಿಂದ ಅಂತಿಮ ನೀತಿ ನಿರ್ಧಾರ ತೀರ್ಮಾನ ಆಗುವವರೆಗೆ ಪ್ರತಿ ಜಾನುವಾರಿಗೆ 6 ಕೆ.ಜಿ. ಒಣ ಮೇವು, 18 ಕೆ.ಜಿ ಹಸಿರು ಮೇವು ಹಾಗೂ 1 ಕೆ.ಜಿ ಪಶು ಆಹಾರ ನೀಡುವಂತೆ ಹೈಕೋರ್ಟ್‌ ಹೇಳಿದೆ. ಈ ಕುರಿತ ಕಾರ್ಯಪಾಲನಾ ವರದಿಯನ್ನು ಆಗಸ್ಟ್‌ 8 ರೊಳಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

Advertisement

ರಾಜ್ಯದಲ್ಲಿ ಈವರೆಗೆ ವಿಪತ್ತು ನಿರ್ವಹಣಾ ಉಪಶಮನ ನಿಧಿ (ಎಸ್‌ಡಿಎಂಎಫ್)ಯಾಕೆ ಸ್ಥಾಪನೆ ಆಗಿಲ್ಲ? ಜಿಲ್ಲಾ ವಿಪತ್ತು ನಿರ್ವಹಣಾ ನಿಧಿ (ಡಿಡಿಎಸ್‌ಆರ್‌), ಜಿಲ್ಲಾ ವಿಪತ್ತು ಉಮಶಮನ ನಿಧಿ (ಡಿಡಿಎಂಎಫ್) ಸ್ಥಾಪಿಸಲಾಗಿದೆಯೇ? ಅದರಲ್ಲಿ ಎಷ್ಟು ಹಣ ಇದೆ. ಗೋಶಾಲೆ ಅಥವಾ ಜಾನುವಾರು ಶಿಬಿರಗಳಲ್ಲಿ ಮೇವು, ಕುಡಿಯುವ ನೀರು ಹಾಗೂ ಪಶು ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2015ರ ಏ.8ರಂದು ಹೊರಡಿಸಿದ ಮಾರ್ಗಸೂಚಿಗಳ ಪಾಲನೆ ಆಗುತ್ತಿದ್ದೆಯೇ? ಬರಪೀಡಿತ ಪ್ರದೇಶಗಳ ಸಮಗ್ರ ನಿರ್ವಹಣೆಗೆ ಸಂಬಂಧಿಸಿದಂತೆ “ವಿಪತ್ತು ನಿರ್ವಹಣಾ ಕಾಯ್ದೆ-2005ರ’ ಅನುಷ್ಠಾನದ ಕುರಿತು ನ್ಯಾಯಾಲಯಕ್ಕೆ ವಿವರಗಳನ್ನು ಸಲ್ಲಿಸುವಂತೆ ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next