ಮುಳಗುಂದ: ಅನ್ಯ ಕೋಮಿನ ವ್ಯಕ್ತಿಯನ್ನು ಮದುವೆಯಾದ ಅಕ್ಕ ಹಾಗೂ ಭಾವನನ್ನು ಒಡಹುಟ್ಟಿದ ಸಹೋದರ ಗ್ರಾಮದ ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ಘಟನೆ ಸಮೀಪದ ಬಸಾಪುರ ಗ್ರಾಮದಲ್ಲಿ ಬುಧವಾರ ಜರುಗಿದೆ.
ಮುಳಗುಂದ ಪಟ್ಟಣದ ನದಾಫ್ ಗಲ್ಲಿಯ ಅಶ್ರಪಲಿ ಹುಸೇನಸಾಬ ದೊಡ್ಡಮನಿ(45) ಹಾಗೂ ಆತನ ಪತ್ನಿ ಸೋಮವ್ವ ಅಲಿಯಾಸ್ ಅಮಿನಾಬೇಗಂ(35) ಕೊಲೆಯಾದ ದಂಪತಿ. 13ವರ್ಷಗಳ ಹಿಂದೆ ಮುಳಗುಂದ ಪಟ್ಟಣದ ನದಾಫ್ ಗಲ್ಲಿಯ ಅಶ್ರಪಲಿ ಹುಸೇನಸಾಬ ದೊಡ್ಡಮನಿ ಹಾಗೂ ಮುಳಗುಂದ ಪಪಂ ವ್ಯಾಪ್ತಿಯ ಬಸಾಪುರ ಗ್ರಾಮದ ಒಡ್ಡರ ಸಮುದಾಯದ ಸೋಮವ್ವ ಪರಸ್ಪರ ಪ್ರೀತಿಸಿದ್ದರು. ಮದುವೆಯಾದ ನಂತರ ಸೋಮವ್ವ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಅಮಿನಾಬೇಗಂ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ದಂಪತಿಗೆ ಓರ್ವ ಪುತ್ರ, ಪುತ್ರಿಯರು ಇದ್ದಾರೆ.
ಮಂಗಳೂರಿಗೆ ಕೆಲಸಕ್ಕೆ ತೆರಳಿದ್ದ ಆಶ್ರಪಲಿ, ಪತ್ನಿ ಹಾಗೂ ಮಕ್ಕಳನ್ನು ಮುಳಗುಂದಲ್ಲಿಯೇ ಪ್ರತ್ಯೇಕ ಮನೆ ಮಾಡಿ ಇರಿಸಿದ್ದರು. ಇತ್ತೀಚೆಗೆ ಮೊಹರಂ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಬಂದಿದ್ದ ಆಶ್ರಪಲಿ ಪತ್ನಿ ಸಮೇತ ಬಸಾಪುರ ಗ್ರಾಮದ ಹೊರವಲಯದ ತೋಟದ ಮನೆಗೆ ತೆರಳಿ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಮೃತ ಮಹಿಳೆಯ ಸಹೋದರ ದೇವಪ್ಪ ಹನಮಂತಪ್ಪ ಹೊಟ್ಟಿಯವರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂತರ ಆರೋಪಿ ಶಿರಹಟ್ಟಿ ಠಾಣೆಗೆ ಶರಣಾಗಿದ್ದಾನೆ. ದಂಪತಿ ಹತ್ಯೆಯಾದ ಬಳಿಕ ಬಸಾಪುರ ಗ್ರಾಮದಲ್ಲಿ ಬಹುತೇಕ ಜನರು ಮನೆಗೆ ಬೀಗ ಹಾಕಿ ಗ್ರಾಮ ತೊರೆದಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಸಂತೋಷ ಬಾಬು ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಯುವಕ ಮಾರಕಾಸ್ತ್ರಗಳಿಂದ ತನ್ನ ಸಹೋದರಿ ಹಾಗೂ ಆಕೆಯ ಪತಿಯನ್ನು ಹತ್ಯೆ ಮಾಡಿದ್ದಾನೆ. ಅನ್ಯಕೋಮಿನ ವ್ಯಕ್ತಿಯನ್ನು ಮದುವೆಯಾಗಿದ್ದು ಯುವಕನ ಆಕ್ರೋಶಕ್ಕೆ ಕಾರಣವಾಗಿದೆ. ಹತ್ಯೆಗೈದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
– ಸಂತೋಷ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ