Advertisement

ನಡುರಾತ್ರಿಯಲ್ಲೂ ಅನ್ನಪ್ರಸಾದ!

07:10 PM Jul 26, 2019 | mahesh |

ಹೊರನಾಡು, ಮಲೆನಾಡಿನ ಮಡಿಲಲ್ಲಿರುವ ಸುಪ್ರಸಿದ್ಧ ಪುಣ್ಯಕ್ಷೇತ್ರ. ಆದಿಶಕ್ತಿ ಅನ್ನಪೂರ್ಣೇಶ್ವರಿ ನೆಲೆನಿಂತಿರುವ ಈ ಪವಿತ್ರ ತಾಣದಲ್ಲಿ ನಿತ್ಯದ ಅನ್ನಸಂತರ್ಪಣೆಯೇ ಒಂದು ವಿಶೇಷ. ಕ್ಷೇತ್ರಕ್ಕೆ ಎಷ್ಟೇ ಭಕ್ತರು ಬರಲಿ, ಅವರಿಗೆ ಊಟ ಖಾಲಿ ಆಯ್ತು ಅನ್ನೋ ಮಾತೇ ಇಲ್ಲ. ದಿನದ ಮೂರೂ ಹೊತ್ತು ಅಷ್ಟೇ ಏಕೆ, ರಾತ್ರಿ 1 ಗಂಟೆಗೆ ಹೋದರೂ ಇಲ್ಲಿ ಊಟ ಸಿಗುತ್ತೆ. ಸರಕಾರದ ಯಾವುದೇ ಧನಸಹಾಯವಿಲ್ಲದೆ ಭಕ್ತರ ಕಾಣಿಕೆಯಿಂದಲೇ ಇಲ್ಲಿ ಸಂತರ್ಪಣೆ ನಡೆಯುವುದು ಇನ್ನೊಂದು ವಿಶೇಷ.

Advertisement

ನಿತ್ಯ 5 ಸಾವಿರ ಮಂದಿಗೆ ಊಟ
ಕ್ಷೇತ್ರದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚಿನ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕೆ 1 ರಿಂದ 1500 ಭಕ್ತರು, ಮಧ್ಯಾಹ್ನ 2500 ರಿಂದ 3 ಸಾವಿರ ಹಾಗೂ ರಾತ್ರಿ 500ರಿಂದ 1 ಸಾವಿರ ಭಕ್ತರು ಭೋಜನ ಸವಿಯುತ್ತಾರೆ. ಭಾನುವಾರ, ರಜಾ ದಿನಗಳು ಹಾಗೂ ನವರಾತ್ರಿ ಉತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಊಟ ಮಾಡುತ್ತಾರೆ.

ಕಾಫಿ, ಪಾನಕ ಬೊಂಬಾಟ್‌
ಹೊರನಾಡಿನಲ್ಲಿ ಮಲೆನಾಡಿನ ಮಳೆ, ಚಳಿಯ ಅದ್ಭುತ ಅನುಭವದ ಜತೆಗೆ, ಕಾಫಿ- ಕಾಳುಮೆಣಸಿನ ಪಾನಕದ ರುಚಿಯನ್ನು ಯಾರೂ ಮರೆಯಲಾರರು. ಬೆಳಗ್ಗೆ 7- 10, ಸಂಜೆ 4- 7ರ ವರೆಗೂ ಇಲ್ಲಿ ಬಿಸಿಬಿಸಿ ಕಾಫಿ ಲಭ್ಯ. ಅಲ್ಲದೆ, ಬೆಳಗ್ಗೆ 10 ರಿಂದ 12ರ ವರೆಗೆ ಬಾಯಾರಿಕೆ ತಣಿಸಲು ರುಚಿಯಾದ ಪಾನಕ ನೀಡಲಾಗುತ್ತದೆ. ಇನ್ನು ಅನ್ನ ಊಟ ಮಾಡದ ಭಕ್ತರು, ಒಪ್ಪತ್ತು ಪಾಲಿಸುವ ಭಕ್ತಾದಿಗಳಿಗೆ ಸಂಜೆ 6 ಗಂಟೆಗೆ ರವೆ ಉಪ್ಪಿಟ್ಟು, ಕಾಫಿ ನೀಡಲಾಗುತ್ತದೆ.

ಹೇಗಿದೆ, ಪಾಕಶಾಲೆ?
ಅನ್ನ ಮಾಡಲು ಡೀಸೆಲ್‌ ಬಾಯ್ಲರ್‌ಗಳಿದ್ದು, 3 ತಿಂಗಳ ಹಿಂದಷ್ಟೇ ಹೊಸದಾಗಿ ಫಿಲೆಟ್‌ ಬಾಯ್ಲರ್‌ ಅಳವಡಿಸಲಾಗಿದೆ. ಉಳಿದ ಪದಾರ್ಥಗಳ ತಯಾರಿಕೆಗೆ ಗ್ಯಾಸ್‌ ಸಿಲಿಂಡರ್‌ ಬಳಸಲಾಗುತ್ತಿದ್ದು, ತಿಂಗಳಿಗೆ 50 ಸಿಲಿಂಡರ್‌ ಖರ್ಚಾಗುತ್ತದೆ.
ದೇವಾಲಯದ ಆವರಣದಲ್ಲೇ ಸುಸಜ್ಜಿತ ಭೋಜನಾಲಯವಿದ್ದು, ಭಕ್ತರು ಸಾಲಾಗಿ ಕುಳಿತು ಊಟ ಮಾಡಬಹುದು.

15 ದಿನಕ್ಕೆ ಒಂದು ಲೋಡ್‌ ತರಕಾರಿ
ಪ್ರತಿದಿನದ ಅಡುಗೆಗೆ ಅಗತ್ಯವಿರುವ ತರಕಾರಿಗಳಿಗೆ ಮಾರುಕಟ್ಟೆಯೇ ಮೂಲ. ಸುತ್ತಮುತ್ತಲಿನ ಜಿಲ್ಲೆಗಳ, ಊರುಗಳ ಭಕ್ತಾದಿಗಳು ತಾವು ಬೆಳೆದ ಫ‌ಸಲಿನ, ತರಕಾರಿಗಳ ಒಂದಿಷ್ಟು ಭಾಗವನ್ನು ದೇವಸ್ಥಾನಕ್ಕೆ ಭಕ್ತಿಯಿಂದ ಸಮರ್ಪಿಸುತ್ತಾರೆ. ಇಲ್ಲಿ 15 ದಿನಕ್ಕೆ ಒಂದು ಲೋಡ್‌ ತರಕಾರಿಯ ಅಗತ್ಯವಿದೆ.

Advertisement

200 ಲೀ. ಹಾಲು
ಪ್ರತಿದಿನ ಸುಮಾರು 150 ರಿಂದ 200 ಲೀ. ಹಾಲು ಅಗತ್ಯವಿದೆ. ಬೆಳಗ್ಗೆ ಕಾಫಿಗೆ ಊಟಕ್ಕೆ ಬೇಕಾದ ಮೊಸರು, ಮಜ್ಜಿಗೆಯನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಅಗತ್ಯವಿರುವ ಹಾಲು ದೇವಾಲಯದ ಗೋಶಾಲೆಯಿಂದಲೇ ಪೂರೈಕೆಯಾಗುತ್ತದೆ.

ಮಧ್ಯರಾತ್ರಿ ನಂತರವೂ ಊಟ!
ಅನ್ನಸಂತರ್ಪಣೆಗೆ ನಿಗದಿಪಡಿಸಿದ ಸಮಯ ಕಳೆದ ನಂತರವೂ ಇಲ್ಲಿ ಊಟ ಸಿಗೋದು ಈ ಕ್ಷೇತ್ರದ ವಿಶೇಷ. ಪ್ರತಿದಿನ ರಾತ್ರಿ ಎಲ್ಲರ ಊಟ ಮುಗಿದ ನಂತರ, ಅನ್ನ ಹಾಗೂ ಪದಾರ್ಥಗಳನ್ನು ಪಾಕಶಾಲೆಯ ಹೊರಗೆ ತಂದು ಇಡಲಾಗುತ್ತದೆ. ರಾತ್ರಿ ಆಗಮಿಸುವ ಭಕ್ತರಿಗೆ ದೇವಾಲಯದ ಕಾವಲುಗಾರರು ಊಟ ಬಡಿಸುತ್ತಾರೆ.

ಸಂಖ್ಯಾ ಸೋಜಿಗ
8- ಕ್ವಿಂಟಲ್‌ ಅಕ್ಕಿ ನಿತ್ಯ ಬಳಕೆ
10- ಶಾಲೆಗಳಿಗೆ ಇಲ್ಲಿಂದಲೇ ಬಿಸಿಯೂಟ
12- ಬಾಣಸಿಗರಿಂದ ಅಡುಗೆ
20- ಸಿಬ್ಬಂದಿಯಿಂದ ಪಾಕಶಾಲೆ ಪರಿಸರ ಸ್ವತ್ಛತೆ
100- ಹಸುಗಳ ಗೋಶಾಲೆ ಇದೆ
235- ಲೀಟರ್‌ ಹಾಲು, ಗೋಶಾಲೆಯಿಂದ ನಿತ್ಯ ಪೂರೈಕೆ
5000- ಭಕ್ತರಿಗೆ ನಿತ್ಯ ಅನ್ನಪ್ರಸಾದ

ಹೀಗಿರಲಿದೆ ಊಟ…
– ಬೆಳಗ್ಗೆ: 8 ರಿಂದ 10 ಗಂಟೆ ವರೆಗೆ ತಿಂಡಿ - ಅವಲಕ್ಕಿ, ಕಾಫಿ
– ಮಧ್ಯಾಹ್ನ: 12 ರಿಂದ 3 ಗಂಟೆವರೆಗೆ ಊಟ- ಅನ್ನ, ತಿಳಿಸಾರು, ಸಾಂಬಾರು, ಪಲ್ಯ, ಚಿತ್ರಾನ್ನ ಅಥವಾ ಪುಳಿಯೊಗರೆ, ಪಾಯಸ, ಮಜ್ಜಿಗೆ
– ರಾತ್ರಿ: 7-30 ರಿಂದ 10ರ ವರೆಗೆ ಊಟ: ಅನ್ನ, ಸಾಂಬಾರು, ಮಜ್ಜಿಗೆ ಇತ್ಯಾದಿ.

– ನಾಗೇಶ್‌ ಹೆಬ್ಟಾರ್‌

Advertisement

Udayavani is now on Telegram. Click here to join our channel and stay updated with the latest news.

Next