Advertisement

ಆಧುನಿಕತೆ ಭರಾಟೆಯಲ್ಲಿ ಸ್ವಂತಿಕೆ ಮಸುಕಾಗದಿರಲಿ: ಅಪ್ಪಣ್ಣ ಹೆಗ್ಡೆ

03:21 PM Mar 21, 2022 | Team Udayavani |

ಕುಂದಾಪುರ : ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಾವೆಲ್ಲ, ನಮ್ಮ ಸ್ವಂತಿಕೆಯನ್ನು ಮಸುಕಾಗದಂತೆ ಕಾಪಾಡಿಕೊಳ್ಳಬೇಕಿದೆ. ನಮ್ಮ ಕಲೆ, ಸಂಸ್ಕೃತಿ, ಆಚಾರ, ವಿಚಾರವನ್ನು ಮರೆಯಬಾರದು. ಈ ನಾಡಿನ ಮಣ್ಣಿನ ಗುಣ, ಭಾರತೀಯತೆಯನ್ನು ಉಳಿಸೋಣ ಎಂದು ಮಾಜಿ ಶಾಸಕ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

Advertisement

ರವಿವಾರ ಮರವಂತೆಯ ಶ್ರೀ ವರಾಹ ಮಹಾರಾಜ ಸ್ವಾಮಿ ಹಾಗೂ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಸಮೀಪ ಕನ್ನಡ ಜಾನಪದ ಪರಿಷತ್‌ ಬೆಂಗಳೂರು, ಕನ್ನಡ ಜಾನಪದ ಪರಿಷತ್‌ ಯುವ ಬ್ರಿಗೇಡ್‌ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಹಾಗೂ ಲಯನ್ಸ್‌ ಕ್ಲಬ್‌ ಕೋಸ್ಟಲ್‌ ಕುಂದಾಪುರದ ಸಹಕಾರದೊಂದಿಗೆ ಆಯೋಜಿಸಿದ ರಾಜ್ಯ ಮಟ್ಟದ ಜನ ಜಾನಪದೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಜನಪದೀಯ ಕಲೆಗಳು ಅಳಿದು ಹೋಗುತ್ತಿದ್ದು, ಅದನ್ನು ಉಳಿಸುವ ಜತೆಗೆ ಮಹತ್ವದ ಬಗೆಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಹೊಣೆಗಾರಿಕೆ ನಮ್ಮೆಲ್ಲರದು. ಕಾರಂತರು ಹೇಳಿದಂತೆ ನದಿ, ಕಡಲು, ಬೆಟ್ಟಗಳಲ್ಲಿ ಸಿಗುವಷ್ಟು ಶಾಂತಿ ಬೇರೆಲ್ಲೂ ಸಿಗದು. ಅಂತಹ ಪವಿತ್ರವಾದ ಸ್ಥಳದಲ್ಲಿ ಜಾನಪದ ಉತ್ಸವವನ್ನು ಆಯೋಜಿಸಿರುವುದು ಸ್ತುತ್ಯರ್ಹ ಎಂದರು.

ಪಾರಂಪರಿಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಉದ್ಯಮಿ, ದಾನಿ ಗೋವಿಂದ ಬಾಬು ಪೂಜಾರಿ ಮಾತನಾಡಿ, ಇಂತಹ ಉತ್ಸವಗಳಿಂದ ಅಳಿವಿನಂಚಿಗೆ ಸರಿಯುತ್ತಿರುವ ನಮ್ಮ ಕೆಲವು ಕಲೆ, ಸಂಸ್ಕೃತಿ, ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಿದಂತಾಗುತ್ತದೆ. ನಮ್ಮ ಮಕ್ಕಳಿಗೆ ಇಲ್ಲಿನ ಆಚರಣೆ, ಯಕ್ಷಗಾನ, ಧಾರ್ಮಿಕ ಆಚರಣೆಗಳ ಬಗ್ಗೆ ಕಲಿಸಿಕೊಡುವ ಕಾರ್ಯ ಆಗಲಿ ಎಂದವರು ಹೇಳಿದರು.

ಇದನ್ನೂ ಓದಿ : ಹಣ್ಣಿನ ರಾಜನಿಗೆ ಪ್ರಾಧಾನ್ಯ ಕುಸಿತ : ಮಾವು ಬೆಳೆಗೆ ಪೂರಕವಲ್ಲದ ವಾತಾವರಣ

Advertisement

ಕನ್ನಡ ಜಾನಪದ ಪರಿಷತ್‌ ಯುವ ಬ್ರಿಗೇಡ್‌ನ‌ ರಾಜ್ಯಾಧ್ಯಕ್ಷ ಡಾ| ಎಸ್‌. ಬಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರದರ್ಶನವನ್ನು ರಾಜ್ಯ ವೈಜ್ಞಾನಿಕ ಪರಿಷತ್‌ ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್‌ ಉದ್ಘಾಟಿಸಿದರು.

ಬೈಂದೂರು ತಹಶೀಲ್ದಾರ್‌ ಶೋಭಾಲಕ್ಷ್ಮೀ, ಕಾರ್ಯನಿರ್ವಹಣಾಧಿಕಾರಿ ಭಾರತಿ, ಮರವಂತೆ ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಕುಂದಾಪುರ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜಯಶೀಲ ಶೆಟ್ಟಿ, ಪರಿಷತ್‌ ಖಜಾಂಚಿ ಡಾ| ಕನಕತಾರ, ಪ್ರೊ| ಕೆ.ಎಸ್‌. ಕೌಜಲಗಿ, ಡಾ| ರಮೇಶ್‌ ತೇಲಿ, ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷೆ ಡಾ| ನಿಕೇತನಾ, ಉತ್ಸವ ಸಮಿತಿಯ ದಯಾನಂದ ಬಳೆಗಾರ್‌ ಮರವಂತೆ, ಮರವಂತೆ ಮೀನುಗಾರರ ಸಮಾಜದ ಅಧ್ಯಕ್ಷ ವಾಸುದೇವ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.

ಜಾನಪದೋತ್ಸವ ವೈಶಿಷ್ಟ್ಯಗಳು
– ನದಿ, ಕಡಲಿನ ಮಧ್ಯೆ ಭೂಪ್ರದೇಶವಿರುವ ಅಪೂರ್ವವಾದ ಮರವಂತೆಯಲ್ಲಿ ಉತ್ಸವ ಆಯೋಜನೆಗೊಂಡಿರುವುದು.
– ಗಿಡಗಳಿಗೆ ಕಲಶದ ನೀರೆರೆಯುವ ಹಾಗೂ ಡೋಲು ಬಡಿಯುವ ಮೂಲಕ ಗಣ್ಯರು ಉತ್ಸವಕ್ಕೆ ಚಾಲನೆ ನೀಡಿದರು.
– ಉದ್ಘಾಟನೆಗೂ ಮುನ್ನ ಧ್ವಜಾರೋಹಣ, ಸೌಪರ್ಣಿಕಾ ನದಿಯಲ್ಲಿ ಪೂಜೆ, ಸಮುದ್ರ ಪೂಜೆಯ ಬಳಿಕ ಬಾಗಿನ ಸಮರ್ಪಿಸಲಾಯಿತು. ಮರವಂತೆ ವರಾಹ ಮಹಾರಾಜ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
– ಪಾರಂಪರಿಕ ವಸ್ತುಗಳ ಪ್ರದರ್ಶನ.
– ಜಾನಪದ ಗೀತೆಗಳ ಪ್ರಸ್ತುತಿ, ಯಕ್ಷಗಾನ ನೃತ್ಯ, ಚೆಂಡೆ, ಡೋಲು ವಾದನದೊಂದಿಗೆ ಗಣ್ಯರನ್ನು ಸ್ವಾಗತಿಸಲಾಯಿತು.
– ಜನಪದ ಕಲಾ ಪ್ರದರ್ಶನ, ಕೊರಗರ ಸಾಂಸ್ಕೃತಿಕ ವೈಭವ, ಜಲಜಾನಪದ ಗೋಷ್ಠಿ, ಕೋಲಾಟ, ಗುಮ್ಮಟೆ ನೃತ್ಯ, ಜಾನಪದ ಶೈಲಿಯಲ್ಲಿ ಸ್ತಬ್ಧಚಿತ್ರ ಪ್ರದರ್ಶನ, ಕುಂದಗನ್ನಡ ಹಾಸ್ಯ ಲಹರಿ ಮನರಂಜಿಸಿತು.

Advertisement

Udayavani is now on Telegram. Click here to join our channel and stay updated with the latest news.

Next