Advertisement

ಉಡುಪಿಯಲ್ಲೇ ‘ಸಿಂಗಂ’ಬಿರುದು ಗಿಟ್ಟಿಸಿಕೊಂಡಿದ್ದ ಅಣ್ಣಾಮಲೈ!

09:16 AM May 31, 2019 | Team Udayavani |

ಉಡುಪಿ: ಅಣ್ಣಾಮಲೈ ಕಾರ್ಕಳದಲ್ಲಿ ಎಎಸ್‌ಪಿಯಾಗಿ ಸೇವೆ ಆರಂಭಿಸಿದಾಗಲೇ ತನ್ನ ಕಾರ್ಯ ವೈಖರಿಯಿಂದ ಜಿಲ್ಲೆಯ, ಅದರಲ್ಲೂ ಮುಖ್ಯವಾಗಿ ಯುವಜನತೆಯ ಗಮನ ಸೆಳೆದಿದ್ದರು. ನೇರಾ ನೇರ ಮಾತು, ಖಡಕ್‌ ನಿರ್ಧಾರದಿಂದ ಜನರಿಗೆ ಹತ್ತಿರವಾಗುತ್ತಾ ಹೋದರು. ಬೈಂದೂರಿನ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸಿ ಜನತೆಯ ವಿಶ್ವಾಸ ಗಳಿಸಿದ್ದರು.

Advertisement

ರೌಡಿಗಳಿಗೆ ಸಿಂಹಸ್ವಪ್ನ

ಉಡುಪಿ ಎಸ್‌ಪಿ ಆದ ಅನಂತರ ಮಣಿಪಾಲ, ಉಡುಪಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೌಡಿಗಳನ್ನು ಚಟುವಟಿಕೆಯನ್ನು ನಿಯಂತ್ರಿಸಿದ್ದರು. ಬಾರ್‌ಗಳು ತಡರಾತ್ರಿಯೂ ತೆರೆದಿರಲು ಅವಕಾಶ ನೀಡಿರಲಿಲ್ಲ. ಮಟ್ಕಾ ದೊರೆಗಳಿಗೂ ಆತಂಕ ಹುಟ್ಟಿಸಿದ್ದರು.

ವಿದ್ಯಾರ್ಥಿಗಳ ಕಣ್ಮಣಿ

ಹೆಲ್ಮೆಟ್ ಧಾರಣೆ ಸೇರಿದಂತೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಂಡಿದ್ದ ಅಣ್ಣಾಮಲೈ ಅನೇಕ ಬಾರಿ ತಾನೇ ಸ್ವತಃ ರಸ್ತೆಬದಿ ನಿಂತು ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸು ದಾಖಲಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ಮಣಿಪಾಲ ಭಾಗದಲ್ಲಿ ವಿದ್ಯಾರ್ಥಿಗಳು ಸಂಚಾರ ನಿಯಮ ಪಾಲಿಸುವಂತೆ ಹೆಚ್ಚಿನ ನಿಗಾ ವಹಿಸಿದ್ದರು. ಒಂದೆಡೆ ಕಾನೂನು ಕ್ರಮ, ಇನ್ನೊಂದೆಡೆ ಮನವೊಲಿಕೆ ಅವರ ವಿಶೇಷತೆಯಾಗಿತ್ತು.

Advertisement

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿ ಎಸ್‌ಪಿ ಕಚೇರಿಯಂದಲೇ ಹೆಲ್ಮೆಟ್ ಜಾಥಾ ಜಾಗೃತಿ ಏರ್ಪಡಿಸಿದ್ದರು. ಡ್ರಗ್ಸ್‌ ವಿರುದ್ಧದ ಅಭಿಯಾನ ಆಯೋಜಿಸಿದ್ದರು. ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ಯುವಜನತೆ ಅಣ್ಣಾಮಲೈ ಜತೆ ಸೆಲ್ಫಿಗಾಗಿ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಿಕ್ಕಮಗಳೂರಿಗೆ ವರ್ಗಾವಣೆಗೊಂಡ ಅನಂತರವೂ ಉಡುಪಿಯಲ್ಲಿ ನಡೆದ ಬೃಹತ್‌ ಡ್ರಗ್ಸ್‌ ವಿರುದ್ಧದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಣ್ಣಾಮಲೈ ಆಗಮಿಸಿದ್ದರು. ಉಡುಪಿಯಲ್ಲಿ ಸೈಕ್ಲಿಂಗ್‌ ಕ್ರೇಜ್‌ ಹೆಚ್ಚಿಸಿದ ಹೆಗ್ಗಳಿಕೆಯೂ ಅಣ್ಣಾಮಲೈಗೆ ಸಲ್ಲುತ್ತದೆ. ಸಂಚಾರ ದಟ್ಟಣೆ ಅಥವಾ ವ್ಯತ್ಯಯ ಉಂಟಾದಾಗ ಸ್ವತಃ ತಾನೇ ಲಾಠಿ ಹಿಡಿದು ನಿಂತು ಸಾರ್ವಜನಿಕರ ಮನಗೆದ್ದಿದ್ದರು.

ಮಾರುವೇಷ ಕಾರ್ಯಾಚರಣೆ?

ಮಹಿಳೆಯರಿಗೆ ಉಪಟಳ ನೀಡುವವರ ವಿರುದ್ಧ, ಡ್ರಗ್ಸ್‌ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಲು ಅಣ್ಣಾಮಲೈ ಅವರು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾತು ಸಾರ್ವಜನಿಕರಲ್ಲಿ ಸಾಮಾನ್ಯವಾಗಿತ್ತು. ಆದರೆ ಈ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿರಲಿಲ್ಲ.

ಅಣ್ಣಾಮಲೈ ಅವರ ಕಾರ್ಯದಕ್ಷತೆ, ಜನಸಂಪರ್ಕ, ತನ್ನ ಅಧೀನ ಅಧಿಕಾರಿ, ಸಿಬಂದಿ ಕ್ಷೇಮ ಪಾಲನೆ, ಸಾರ್ವಜನಿಕರ ಹಿತರಕ್ಷಣೆ ಇವೆಲ್ಲವುಗಳ ಹಿನ್ನೆಲೆಯಲ್ಲಿ ಉಡುಪಿಯ ಯುವಜನತೆ ‘ಸಿಂಗಂ’ ಎಂದೇ ಸಂಬೋಧಿಸಲಾರಂಭಿಸಿದರು. ಇದು ಅನಂತರ ಖಾಯಂ ಆಯಿತು!.

Advertisement

Udayavani is now on Telegram. Click here to join our channel and stay updated with the latest news.

Next