ಕಾರ್ಕಳ: ದಕ್ಷ ಅಧಿಕಾರಿಯಾಗಿ ಹೆಸರು ಮಾಡಿ ಈಗ ಸೇವೆಗೆ ರಾಜೀನಾಮೆ ನೀಡಿದ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೂ ಕಾರ್ಕಳಕ್ಕೂ ವಿಶೇಷ ನಂಟಿದೆ. ಅವರು ತನ್ನ ವೃತ್ತಿ ಜೀವನ ಆರಂಭಿಸಿದ್ದು ಕಾರ್ಕಳದಲ್ಲಿ. 2013ರಲ್ಲಿ ಕಾರ್ಕಳ ಉಪವಿಭಾಗದ ಎಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ಅವರು ಉಡುಪಿ, ಚಿಕ್ಕಮಗಳೂರು ಎಸ್‌ಪಿಯಾಗಿ ಭಡ್ತಿ ಗೊಂಡು ಸಮರ್ಥವಾಗಿ ತನ್ನ ಜವಾಬ್ದಾರಿ ನಿರ್ವಹಿಸಿದ್ದರು. ಬಳಿಕ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಭಡ್ತಿ ಗೊಂಡರು. ಅಣ್ಣಾಮಲೈ ಪ್ರಥಮವಾಗಿ ಕಾರ್ಯನಿರ್ವಹಿಸಿದ ಕಾರ್ಕಳದಲ್ಲಿ ಅನೇಕ ಸುಧಾರಣೆ ತಂದು ಜನರು ಶಾಶ್ವತವಾಗಿ ಅವರನ್ನು ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಿದ್ದರು.
ಕಾರ್ಕಳದಲ್ಲಿ ಅಣ್ಣಾಮಲೈ
2013 ಸೆ. 4ರಂದು ಕಾರ್ಕಳ ಎಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ಅಣ್ಣಾಮಲೈ ಇಲ್ಲಿನ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಅತಿ ಹೆಚ್ಚು ಕ್ರಷರ್ ಹೊಂದಿರುವ ಕಾರ್ಕಳದಲ್ಲಿ ದಾಸ್ತಾನಿರಿಸಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕ ಪತ್ತೆ ಹಚ್ಚಿದ್ದರು. ಇಲ್ಲಿನ ಕಾಲೇಜುಗಳಲ್ಲಿ ಸೆಮಿನಾರ್ ಮೂಲಕ ಮಾದಕ ವ್ಯಸನ ಕುರಿತು ಜಾಗೃತಿ ಮೂಡಿಸಿ, ಯುವ ಸಮುದಾಯ ಮಾದಕ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಂಡರು. ಕಾಲೇಜಿನಲ್ಲಿ ದೂರು ಪೆಟ್ಟಿಗೆ ತೆರೆದಿದ್ದರು. ಪೇಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೊಂದು ಅಚ್ಚುಕಟ್ಟುತನ ತಂದಿದ್ದರು. ಅಕ್ರಮ ಮದ್ಯ ಮಾರಾಟಕ್ಕೆ ಪೂರ್ಣವಿರಾಮ ಹಾಕಿದ್ದರು.
ಅಭಿಮಾನ ಮರೆದ ಅಭಿಮಾನಿಗಳು
ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿದ್ದ ಅಣ್ಣಾಮಲೈಗೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ಪೊಲೀಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ನೊಂದ ಬಹುತೇಕರು ಅಣ್ಣಾಮಲೈ ಫೋಟೋವನ್ನು ಡಿಪಿ, ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿ ಅಭಿಮಾನ ಮೆರೆದಿದ್ದಾರೆ.