ಚೆನ್ನೈ: ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರಕಾರ ವನ್ನು ಕೆಳಗಿಳಿಸುವವರೆಗೂ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಗುರುವಾರ ಪ್ರತಿಜ್ಞೆ ಮಾಡಿದ್ದ ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ.ಅಣ್ಣಾಮಲೈ ಇಂದು(ಡಿ.27) ತನ್ನ ಮನೆಯ ಮುಂದೆಯೇ ಬಿಜೆಪಿ ಕಾರ್ಯಕರ್ತರ ಎದುರು ಚಾಟಿಯಿಂದ ಬಾರಿಸಿಕೊಂಡಿದ್ದಾರೆ.
ಅಣ್ಣಾ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ಮತ್ತು ಡಿಎಂಕೆ ಸರ್ಕಾರದ ನಡುವೆ ಸಂಘರ್ಷ ಜೋರಾಗಿದ್ದು. ಈ ಪ್ರಕರಣದಲ್ಲಿ ಸಂತ್ರಸ್ತೆಯ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ತಮಿಳುನಾಡಿನಲ್ಲಿ ಮಾತನಾಡಿದ ಅಣ್ಣಾಮಲೈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ “ನಾನು ಈ (ಡಿಎಂಕೆ) ಸರಕಾರವನ್ನು ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ. ಶುಕ್ರವಾರ(ಡಿ.27) ನನ್ನ ಮನೆ ಮುಂದೆ ನಿಂತು 6 ಬಾರಿ ನನಗೆ ನಾನೇ ಚಾಟಿಯಿಂದ ಬಾರಿಸಿಕೊಳ್ಳುತ್ತೇನೆ ಎಂದಿದ್ದರು ಅದರಂತೆ ಇಂದು ಬೆಳಿಗ್ಗೆ ತನ್ನ ಮನೆಯ ಮುಂದೆ ಹಸಿರು ಮುಂಡು ಧರಿಸಿ ಆರು ಬಾರಿ ಚಾಟಿಯಿಂದ ಬಾರಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಮುಂದಿನ 48 ದಿನಗಳು ಉಪವಾಸ ಕೈಗೊಂಡು, ರಾಜ್ಯದಲ್ಲಿರುವ ಮುರುಗನ್‌ನ 6 ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ’ ಎಂದು ಹೇಳಿದ್ದಾರೆ.
2026ರಲ್ಲಿ ನಡೆಯುವ ಚುನಾವಣೆಯಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವುದು ಜೊತೆಗೆ ಕಳೆದುಹೋಗಿದ್ದ ತಮಿಳುನಾಡಿನ ವೈಭವವನ್ನು ಮರಳಿ ಪಡೆಯುವುದು ನಮ್ಮ ಗುರಿಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.