Advertisement

ಅಧಿಕಾರಿಗಳ ವಿರುದ್ಧ ಅನ್ನದಾತರ ಆಕ್ರೋಶ

11:14 AM Jun 02, 2022 | Team Udayavani |

ಧಾರವಾಡ: ಮುಂಗಾರು ಹಂಗಾಮು ಚುರುಕು ಪಡೆದಿದ್ದು ಬಿತ್ತನೆಗೆ ರೈತರು ಸಿದ್ಧತೆಯಲ್ಲಿ ತೊಡಗಿರುವ ಸಂದರ್ಭದಲ್ಲಿಯೇ ಅಗತ್ಯ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ರೈತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Advertisement

ಬುಧವಾರ ಇಲ್ಲಿನ ಹಳೆ ಎಪಿಎಂಸಿಯಲ್ಲಿರುವ ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ ಎದುರು ನೂರಾರು ರೈತರು ತಮಗೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಸಹಕಾರಿ ಮಾರಾಟ ಮಂಡಳಿಗೆ ಕೋರಿದರು.

ಸದ್ಯಕ್ಕೆ ಮುಂಗಾರು ಬೆಳೆಗಳಾದ ಶೇಂಗಾ, ಹೆಸರು, ಆಲೂಗಡ್ಡೆ ಇತ್ಯಾದಿ ಬೆಳೆಗಳಿಗೆ ರೈತರಿಗೆ ಒಂದು ಎಕರೆಗೆ ಒಂದು ಚೀಲ ಡಿಎಪಿ ಗೊಬ್ಬರ ಬೇಕು. ಆದರೆ ಅಧಿಕಾರಿಗಳು ಒಬ್ಬ ರೈತನಿಗೆ ಕೇವಲ ಐದು ಚೀಲ ಗೊಬ್ಬರ ನೀಡುತ್ತಿದ್ದಾರೆ. ರೈತರಿಗೆ ಸೊಸೈಟಿಯವರು ಗೊಬ್ಬರದ ಜತೆಗೆ ಕ್ರಿಮಿನಾಶಕಗಳನ್ನು ಕಡ್ಡಾಯವಾಗಿ ಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದರಿಂದ ರೈತರು ಮತ್ತಷ್ಟು ಆಕ್ರೋಶ ಹೊರ ಹಾಕಿದ್ದಾರೆ.

ವಿಷಯ ತಿಳಿದು ಹಳೆ ಎಪಿಎಂಸಿ ಆವರಣದಲ್ಲಿರುವ ಸಹಕಾರ ಮಂಡಳಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಅವರು ಭೇಟಿ ಕೊಟ್ಟರು. ರೈತರು ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ಆಗ್ರಹಿದರಲ್ಲದೇ, ಲೋಪದೋಷಗಳನ್ನು ಸರಿಮಾಡುವಂತೆ ಪಟ್ಟು ಹಿಡಿದರು.

ಇದೇ ವೇಳೆ ಸಹಕಾರ ಮಹಾಮಂಡಳಿ ಸದಸ್ಯ ಎನ್‌.ಎಸ್‌.ಮಟ್ಟಿ ಮಾತನಾಡಿ, ಗೊಬ್ಬರದ ಜತೆಗೆ ಡಿಡಿ ಸಂಖ್ಯೆಯನ್ನು ಕಳುಹಿಸಿಕೊಡಬೇಕು. ಇಲ್ಲವಾದರೆ ರೈತರು ನಮ್ಮನ್ನು ತಪ್ಪಾಗಿ ಭಾವಿಸುತ್ತಾರೆ. ಗೊಬ್ಬರದ ದಾಸ್ತಾನು ಕಣ್ಣೆದುರಿಟ್ಟುಕೊಂಡು ನಾವು ವಿತರಿಸದೇ ಹೋದರೆ ನಾವು ತಪ್ಪುಗಾರರಾಗುತ್ತೇವೆ. ಕೂಡಲೇ ಡಿಡಿ ಸಂಖ್ಯೆ ಒದಗಿಸಿ ಕೊಡಿ ಎಂದು ಆಗ್ರಹಿಸಿದರು.

Advertisement

ರೈತರು-ಸಹಕಾರ ಮಂಡಳಿಯವರ ಮನವಿ ಸ್ವೀಕರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್‌, ಗೊಬ್ಬರ ಪೂರೈಕೆ ಸಾಕಷ್ಟಿದ್ದು, ಎಲ್ಲ ರೈತರಿಗೂ ಲಭಿಸುತ್ತದೆ. ಆದರೆ ಈಗಾಗಿರುವ ಪ್ರಮಾದವನ್ನು ಶೀಘ್ರವೇ ಸರಿಪಡಿಸಿ ರಸಗೊಬ್ಬರ ಎಲ್ಲಾ ರೈತರಿಗೂ ಸಿಕ್ಕುವಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

20,800 ಮೆಟ್ರಿಕ್‌ ಟನ್‌ ರಸಗೊಬ್ಬರ ಲಭ್ಯ

ಧಾರವಾಡ: ಜಿಲ್ಲೆಯಲ್ಲಿ ಪ್ರಸ್ತುತ 6916 ಮೆಟ್ರಿಕ್‌ ಟನ್‌ ಡಿಎಪಿ ರಸಗೊಬ್ಬರ ಸೇರಿ ಒಟ್ಟು 20,800 ಮೆಟ್ರಿಕ್‌ ಟನ್‌ ವಿವಿಧ ರಸಗೊಬ್ಬರ ಲಭ್ಯವಿದೆ. ಮೇ31 ಹಾಗೂ ಜೂ.1ರಂದು ಜಿಲ್ಲೆಗೆ 3,890 ಮೆಟ್ರಿಕ್‌ ಟನ್‌ ಡಿಎಪಿ ಪೂರೈಕೆಯಾಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಈಗಾಗಲೇ ರೆಕ್‌ ಪಾಯಿಂಟ್‌ ಹಾಗೂ ಗೋಡೌನ್‌ಗಳಿಂದ ರಸಗೊಬ್ಬರ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಸಂಘಗಳಿಗೆ ಪೂರೈಕೆಯಾಗಲಿದೆ. ರೈತರು ಅವಶ್ಯಕತೆಗೆ ತಕ್ಕಂತೆ ಖರೀದಿಸುವಂತೆ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ. ಮನವಿ ಮಾಡಿದ್ದಾರೆ.

ಧಾರವಾಡ ಜಿಲ್ಲೆಗೆ ಈಗಾಗಲೇ ಮೂರು ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರ ಬಂದಾಗಿದೆ. ಅದನ್ನು ಹಣ ಕಟ್ಟಿರುವ ಎಲ್ಲಾ ಸಹಕಾರ ಮಂಡಳಿಗಳಿಗೆ ಕಳುಹಿಸಿ ಕೊಡಲಾಗಿದೆ. ಆದರೆ ಸರ್ವರ್‌ ಮತ್ತು ಡಿಡಿ ನಂಬರ್‌ಗಳ ತಾಂತ್ರಿಕ ತೊಂದರೆಯಿಂದ ಹಂಚಿಕೆ ವಿಳಂಭವಾಗಿತ್ತು. ಬುಧವಾರ ಸಂಜೆಯೇ ಅದನ್ನು ಸರಿಪಡಿಸಲಾಗಿದೆ. -ರಾಜಶೇಖರ್‌ ಜೆ.ಡಿ.ಕೃಷಿ ಇಲಾಖೆ, ಧಾರವಾಡ

ರೈತರಿಗೆ ಸಕಾಲಕ್ಕೆ ಗೊಬ್ಬರ ದೊರೆಯುತ್ತಿಲ್ಲ. ಸೂಸೈಟಿ ಮುಂದೆ ಬೆಳಗಿನ ಜಾವ ಬಂದು ರೈತರು ಪಾಳಿಯ ಪ್ರಕಾರ ನಿಂತರೂ ಅವರಿಗೆ ಗೊಬ್ಬರ ದೊರೆಯುತ್ತಿಲ್ಲ. ಡಿಡಿ ನಂಬರ್‌ ಬಂದಿಲ್ಲ ಎಂದು ಆಧಾರ್‌ ಕಾರ್ಡ್‌ ತೆಗೆದುಕೊಂಡು ಗೊಬ್ಬರ ನೀಡುತ್ತಿದ್ದಾರೆ. ರೈತರ ಹೊಲಗಳಿಗೆ ಸಾಕಾಗುಷ್ಟು ಗೊಬ್ಬರ ನೀಡಬೇಕು.  –ಬಸವರಾಜ ಕೊರವರ ಜನಜಾಗೃತಿ ಸಂಘದ ಅಧ್ಯಕ್ಷ.

ಆಧಾರ್‌ ಸಂಖ್ಯೆ, ಹಣ ಕೊಡಲು ಸಿದ್ಧವಿದ್ದರೂ ತಕ್ಷಣವೇ ಗೊಬ್ಬರ ಯಾಕೆ ಸಿಕ್ಕುತ್ತಿಲ್ಲ ? ರೈತರು ಹಂಗಾಮು ದಿನಗಳಲ್ಲಿ ಗೊಬ್ಬರಕ್ಕಾಗಿ ಪರದಾಡಬೇಕೆ? ಜಿಲ್ಲಾಧಿಕಾರಿಗಳೂ ಕೂಡಲೇ ಇದನ್ನು ಸರಿಪಡಿಸಬೇಕು. ಕಲ್ಲನಗೌಡ ಪಾಟೀಲ, ಮರೆವಾಡ ರೈತ.

ಬಾರದ ಪರವಾನಗಿ ಪತ್ರ:

ಸರ್ಕಾರದಿಂದ ಗೊಬ್ಬರದ ಸರಬರಾಜು ಆಗುತ್ತಿದ್ದರೂ, ಅದನ್ನು ರೈತರಿಗೆ ಪೂರೈಸುವಲ್ಲಿ ಆಗುತ್ತಿರುವ ತಾಂತ್ರಿಕ ವಿಳಂಬದಿಂದ ಈ ತೊಂದರೆಯಾಗಿದೆ. ಸಾಮಾನ್ಯವಾಗಿ ಸರ್ಕಾರದಿಂದ ರಸಗೊಬ್ಬರ ಪೂರೈಕೆಯಾದ ತಕ್ಷಣವೇ ಅದರ ಜತೆಗೆ ರೈತರಿಗೆ ವಿತರಿಸುವ ಪರವಾನಗಿ ಪತ್ರವನ್ನೂ ನೀಡಲಾಗುತ್ತದೆ. ಆದರೆ ಈ ಬಾರಿ ಗೊಬ್ಬರ ಬಂದರೂ ಪರವಾನಗಿ ಪತ್ರ(ಡಿ.ಡಿ.)ಮಾತ್ರ ಬಂದಿಲ್ಲ. ಹೀಗಾಗಿ ಗೋದಾಮುಗಳಲ್ಲಿ ತಕ್ಕಮಟ್ಟಿನ ಗೊಬ್ಬರದ ದಾಸ್ತಾನು ಇದ್ದರೂ ಅದನ್ನು ರೈತರಿಗೆ ಪೂರೈಸಲಾಗುತ್ತಿಲ್ಲ. ಇದು ರೈತರನ್ನು ತೀವ್ರ ಕೆರಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next