ಗಜೇಂದ್ರಗಡ: ಶೈಕ್ಷಣಿಕ ಕ್ರಾಂತಿಯ ಜೊತೆಗೆ ಆಧ್ಯಾತ್ಮಿಕ ನೆಲೆಬೀಡಾದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಮಠ ನಾಡಿನ ಬಹುದೊಡ್ಡ ಶಕ್ತಿಯಾಗಿದೆ. ಈ ನಿಟ್ಟಿನಲ್ಲಿ ನ. 8, 9, 10 ರಂದು ಶ್ರೀಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಚರಪಟ್ಟಾಧಿಕಾರ ಮಹೋತ್ಸವದ ಪ್ರಚಾರ ಸಮಿತಿ ಸಂಚಾಲಕ ಪ್ರಭು ಚವಡಿ ಹೇಳಿದರು.
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿಯ ಶ್ರೀ ಅನ್ನದಾನೇಶ್ವರ ಕಾಲೇಜಿನಲ್ಲಿ ಸೋಮವಾರ ಹಾಲಕೇರೆಯ ಶ್ರೀ ಅನ್ನದಾನೇಶ್ವರ ಮಠದ ಚರಪಟ್ಟಾ ಧಿಕಾರ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಡಾ|ಅಭಿನವ ಅನ್ನದಾನೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಹಾಲಕೇರೆ ಶ್ರೀ ಅನ್ನದಾನೇಶ್ವರ ಮಠ ರಾಜ್ಯದ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿದೆ. ಇಂತಹ ಮಠ ಅನ್ನದಾಸೋಹದ ಜೊತೆಗೆ ಶೈಕ್ಷಣಿಕ ಕ್ರಾಂತಿಯ ಹರಿಕಾರವೆನಿಸಿದೆ ಎಂದರು. ಈವರೆಗೂ 12 ಪೂಜ್ಯರನ್ನು ಹಾಲಕೇರೆ ಸಂಸ್ಥಾನ ಮಠ ಕಂಡಿದ್ದು, ಸ್ವಾತಂತ್ರ್ಯ ಪೂರ್ವದಿಂದಲೂ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. 27 ಶಾಖಾ ಮಠಗಳನ್ನು ಹೊಂದಿರುವ ಅನ್ನದಾನೇಶ್ವರ ಮಠ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ರೈತರ ಮಠವಾಗಿದೆ. ಮಹಿಳಾ ರಥೋತ್ಸವದ ಮೂಲಕ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಭಕ್ತರ ಶ್ರದ್ಧಾ ಕೇಂದ್ರವಾಗುವ ಮೂಲಕ ಜನಸಾಮಾನ್ಯರ ಮನದಲ್ಲಿ ಶ್ರೀಗಳು ಅಚ್ಚಳಿಯದ ಹಾಗೆ ಉಳಿದಿದ್ದಾರೆ ಎಂದರು.
ನ. 8, 9, 10 ರಂದು ಹಾಲಕೇರೆ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ಹಲವಾರು ಮಠಾ ಧೀಶರು, ಪ್ರಗತಿಪರ ಚಿಂತಕರು, ಕೃಷಿ ಸಾಧಕರು, ಆಧ್ಯಾತ್ಮಿಕ ಚಿಂತಕರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿಯೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ವಿಭಿನ್ನ ಮತ್ತು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪ್ರಾಚಾರ್ಯ ಎ.ಪಿ. ಗಾಣಗೇರಿ ಮಾತನಾಡಿ, ಹಾಲಕೇರೆ ಶ್ರೀ ಅನ್ನದಾನೇಶ್ವರ ಮಠ ಧರ್ಮ ರಹಿತ ಸಮಾಜ ನಿರ್ಮಾಣ ಮಾಡುವ ಆಧ್ಯಾತ್ಮಿಕ ಕೇಂದ್ರವಾಗಿದೆ. ಕಳೆದ ಹಲವಾರು ದಶಕಗಳಿಂದ ನಾಡಿನ ವಿವಿಧ ಮೂಲೆಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದೀವಿಗೆ ನೀಡುವ ಮೂಲಕ ಉತ್ತರ ಕರ್ನಾಟಕ ಬಹುದೊಡ್ಡ ಮಠವಾಗಿ ಹೊರಹೊಮ್ಮಿದೆ. ಶ್ರೀಮಠದಲ್ಲಿ ನಡೆಯುತ್ತಿರುವ ಚರಪಟ್ಟಾ ಧಿಕಾರ ಮಹೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ನರೇಗಲ್ಲ ಶ್ರೀ ಅನ್ನದಾನೇಶ್ವರ ಶಾಲೆಯ ಚೇರಮನ್ ಶರಣಪ್ಪ ರೇವಡಿ ಮಾತನಾಡಿ, ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ನ. 8ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ. ಡಾ|ಅಭಿನವ ಅನ್ನದಾನ ಸ್ವಾಮೀಜಿಗಳ ಗುರುವಂದನೆ, ಶ್ರೀ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರಪಟ್ಟಾಧಿಕಾರದ ಭಾಗವಾಗಿ ನ. 8 ರಂದು ರಾಷ್ಟ್ರೀಯ ವಿಚಾರ ಸಂಕಿರಣ, ಶ್ರೀ ಅನ್ನದಾನೇಶ್ವರ ಪುರಾಣ ಮಂಗಲೋತ್ಸವ, ನ. 9 ರಂದು ವಿವಿಧ ಕ್ಷೇತ್ರಗಳ 85 ಸಾಧಕರಿಗೆ ಸನ್ಮಾನ ಹಾಗೂ ಗ್ರಂಥಗಳ ಬಿಡುಗಡೆ, ತ್ರಿವಿಧ ದಾಸೋಹಿ ಡಾ|ಅಭಿನವ ಅನ್ನದಾನ ಮಹಾಸ್ವಾಮಿಗಳ ಗುರುವಂದನೆ, ಲಕ್ಷದಿಪೋತ್ಸವ, ನ. 10ರಂದು ಚಿನ್ಮಯಾನುಗ್ರಹ ದೀಕ್ಷೆ ಹಾಗೂ ಷಟಸ್ಥಲ ಬ್ರಹ್ಮೋಪದೇಶ, ಶೂನ್ಯ ಸಿಂಹಾಸನಾರೋಹಣ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳು ಜರುಗಲಿವೆ. ಭಕ್ತರು ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ನಿಸ್ವಾರ್ಥ ಭಾವನೆಯಿಂದ ಶ್ರಮಿಸಬೇಕಿದೆ ಎಂದರು. ಪೂರ್ವಭಾವಿ ಸಭೆಯಲ್ಲಿ ಎಸ್.ಸಿ. ಚಕ್ಕಡಿಮಠ, ಬಿ.ಎಸ್.ಹಿರೇಮಠ, ವಿ.ಆರ್. ಗಾರಗಿ, ಆರ್.ಕೆ. ಬಾಗವಾನ ಇನ್ನಿತರರು ಪಾಲ್ಗೊಂಡಿದ್ದರು.